ಬೆಂಗಳೂರು: ನಂದಮೂರಿ ತಾರಕ ರತ್ನ (Taraka Ratna) ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಜ್ಯೂ ಎನ್‌ಟಿಆರ್, ಕಲ್ಯಾಣ್ ರಾಮ್, ಸಚಿವ ಸುಧಾಕರ್ ಹಾಗೂ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಆಸ್ಪತ್ರೆಗೆ ಧಾವಿಸಿ ತಾರಕ ರತ್ನ ಆರೋಗ್ಯದ ಬಗ್ಗೆ ವೈದ್ಯರ ಜತೆ ಚರ್ಚಿಸಿದರು.
ಆಸ್ಪತ್ರೆ ಹೊರಗಡೆ ಜ್ಯೂ.ಎನ್‌ಟಿಆರ್ ಹಾಗೂ ಬಾಲಯ್ಯ ಪರ ಅವರ ಅಭಿಮಾನಿಗಳು ಘೋಷಣೆ ಕೂಗುತ್ತಿದ್ದಾರೆ. ನಟ ಶಿವರಾಜ್ ಕುಮಾರ್ ಮಾತನಾಡಿ ʻʻತಾರಕ್ ಅವರು ಸ್ವಲ್ಪ ಚೇತರಿಕೆ ಕಾಣುತ್ತಿದ್ದಾರೆ. ಕಣ್ಣುಗಳ ಚಲನೆ ಕಂಡು ಬರುತ್ತಿದೆ. ಸದ್ಯ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ವೈದ್ಯರು ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ಚಿಕಿತ್ಸೆಗೆ ತಾರಕ್ ಸ್ಪಂದಿಸುತ್ತಿದ್ದಾರೆ. ಒಂದು ಕುಟುಂಬವಾಗಿ ನಾನು ಇಲ್ಲಿಗೆ ಬಂದಿದ್ದೆನೆʼʼಎಂದು ವೈದ್ಯರ ಭೇಟಿ ಬಳಿಕ ಹೇಳಿಕೆ ನೀಡಿದರು.
ಜೂನಿಯರ್ ಎನ್ ಟಿ ಆರ್ ಮಾತನಾಡಿ ʻʻಅಭಿಮಾನಿಗಳ ಆಶೀರ್ವಾದ ತಾರಕ ರತ್ನ ಮೇಲಿದೆ. ಬೇಗ ಗುಣಮುಖರಾಗಿ ಬರುತ್ತಾರೆ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಡಾ.ಸುಧಾಕರ್ ಅರವರಿಗೆ ಧನ್ಯವಾದಗಳು. ಅವರು ನಮ್ಮ ಕಷ್ಟ ಕಾಲದಲ್ಲಿ ಸಹಾಯ ಮಾಡುತ್ತಿದ್ದಾರೆʼʼ ಎಂದರು.
ಸಚಿವ ಸುಧಾಕರ್ ಮಾತನಾಡಿ ʻʻತಾರಕ ರತ್ನ ಅವರು ಸಂಪೂರ್ಣ ಅಪಾಯದಿಂದ ಹೊರ ಬಂದಿಲ್ಲ. ಆದರೆ ಅವರು ಚಿಕಿತ್ಸೆಗೆ ಸ್ಪಂದನೆ ನೀಡುತ್ತಿದ್ದಾರೆ. ಮೆದುಳಿಗೆ ಸಂಬಂಧಿಸಿದಂತೆ ನಿಮಾನ್ಸ್‌ನಿಂದ ವೈದ್ಯರ ತಂಡ ಬಂದಿದೆ. ವೈದ್ಯರ ತಂಡ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆʼʼ ಎಂದರು.
ಇದನ್ನೂ ಓದಿ: Taraka Ratna: ನಂದಮೂರಿ ತಾರಕರತ್ನ ಆರೋಗ್ಯ ಸ್ಥಿತಿ ಗಂಭೀರ
ಇದೆ ವೇಳೆ ನಟ ಬಾಲಕೃಷ್ಣ ಮಾತನಾಡಿ ʻʻತಾರಕ ರತ್ನ ಕುಸಿದು ಬಿದ್ದು ಪ್ರಜ್ಞಾಹೀನರಾದರು. ವೈದ್ಯರ ಪರಿಶೀಲನೆ ವೇಳೆ ಹೃದಯ ಬಡಿತ ಸ್ತಬ್ದವಾಗಿತ್ತು. ಬಳಿಕ ಅಚ್ಚರಿಯೆಂಬಂತೆ ಹೃದಯ ಬಡಿತ ಮರಳಿತು. ವೈದ್ಯರ ಶಿಪಾರಸ್ಸಿನಂತೆ ನಾರಾಯಣ ಹೃದಯಾಲಯಕ್ಕೆ ಶಿಪ್ಟ್ ಮಾಡಲಾಗಿದೆ. ವೈದ್ಯರು ಬಹಳ ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ತಾರಕ್ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ. ಕೆಲವೊಮ್ಮೆ ಕಣ್ಣು ಮಿಟಕಿಸುವುದು, ದೇಹ ಅಲುಗಾಡುವುದು ಕಂಡು ಬರುತ್ತಿದೆ. ಅಭಿಮಾನಿಗಳ ಶುಭ ಹಾರೈಕೆಗೆ ಚಿರ ಋಣಿ ಆಗಿದ್ದೇನೆ. ತಾರಕ್ ಆರೋಗ್ಯ ವಿಚಾರಿಸಲು ಶಿವರಾಜ್ ಕುಮಾರ್ ಆಗಮಿಸಿದ್ದಾರೆ. ರಾಜ್ ಕುಮಾರ್ ಮತ್ತು ನಮ್ಮ ಕುಟುಂಬದ ನಡುವೆ ಉತ್ತಮ ಬಾಂಧವ್ಯ ಇದೆʼʼ ಎಂದರು. ಇದೆ ವೇಳೆ ಸಹೋದರ ಪುನೀತ್ ಅಗಲಿಕೆ ಬಗ್ಗೆ ಬೇಸರ ಇದೆ ಎಂದು ಭಾವುಕರಾದರು ಬಾಲಕೃಷ್ಣ.
ಇದನ್ನೂ ಓದಿ: Taraka Ratna: ನಂದಮೂರಿ ತಾರಕರತ್ನ ಆರೋಗ್ಯ ಸ್ಥಿತಿ ಗಂಭೀರ
ಜನವರಿ 27ರ ಶುಕ್ರವಾರ ಹೃದಯಾಘಾತವಾಗಿದ್ದು, ಅವರನ್ನು ಆಂಧ್ರದ ಕುಪ್ಪಂನ ಪಿಇಎಸ್ ವೈದ್ಯಕೀಯ ಕಾಲೇಜಿನಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ. ಸಂಜೆ ನಂದಮೂರಿ ಅವರ ಆರೋಗ್ಯದ ಕುರಿತು ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಆರೋಗ್ಯ ತೀರಾ ಹದಗೆಟ್ಟಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರೆಸಿರುವುದಾಗಿ ತಿಳಿಸಿದೆ. ಈಗಾಗಲೇ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಬೆಂಗಳೂರಿಗೆ ಬಂದು, ನಾರಾಯಣ ಹೃದಯಾಲಯಕ್ಕೆ ತೆರಳಿ ನಂದಮೂರಿ ಅವರ ಆರೋಗ್ಯ ವಿಚಾರಿಸಿದ್ದಾರೆ.