Site icon Vistara News

Jailer Film review: ಅಬ್ಬರಿಸಿದ ಟೈಗರ್‌, ರಜನಿ ಅಭಿಮಾನಿಗಳಿಗೆ ಪೈಸಾ ವಸೂಲ್‌

Rajanikanth

ಜೈಲರ್‌ ಫಿಲಂ (Jailer Film review) ರಜನಿಕಾಂತ್‌ (Rajinikanth) ಅಭಿಮಾನಿಗಳನ್ನು ಕ್ಷಣಕ್ಷಣಕ್ಕೂ ರೋಮಾಂಚನಗೊಳಿಸುವ, ಕುರ್ಚಿ ತುದಿಯಲ್ಲಿ ಕೂರಿಸಿ ನೋಡಿಸಿಕೊಂಡು ಹೋಗುವ ಸಿನಿಮಾ. ಇದು ನಿಜವಾದ ತಲೈವಾ (thalaiva) ಕಮ್‌ಬ್ಯಾಕ್.‌

ಟೈಗರ್ ಮುತ್ತುವೇಲ್ ಪಾಂಡಿಯನ್- ನಾಯಕನ ಹೆಸರು. ನಿವೃತ್ತ ಜೈಲರ್.‌ ಪತ್ನಿ, ಮಗ, ಮೊಮ್ಮಗ ಮತ್ತು ಸೊಸೆಯೊಂದಿಗೆ ಚೆನ್ನೈನಲ್ಲಿ ಸಂತೋಷದ ನಿವೃತ್ತಿ ಜೀವನ. ಮೊಮ್ಮಗನ ಯೂಟ್ಯೂಬ್ ಚಾನೆಲ್ ನಡೆಸಲು ಸಹಾಯ. ಮುತ್ತುವೇಲ್ ಮಗ ಅರ್ಜುನ್ ಯಾರಿಗೂ ಹೆದರದ ಪ್ರಾಮಾಣಿಕ ಪೊಲೀಸ್. ಒಂದು ಹೈ-ಪ್ರೊಫೈಲ್ ಕೇಸ್ ಅನ್ನು ಟ್ರ್ಯಾಕ್ ಮಾಡುವಾಗ ಅರ್ಜುನ್ ಕಾಣೆಯಾಗುತ್ತಾನೆ. ಆತನನ್ನು ಒಂದು ಕುಖ್ಯಾತ ಗ್ಯಾಂಗ್ ಕೊಂದಿದೆ ಎಂದು ಮುತ್ತುವೇಲ್ ಕಂಡುಹಿಡಿಯುತ್ತಾನೆ. ಆದರೆ, ಅರ್ಜುನ್‌ ಜೀವಂತವಾಗದ್ದಾನೆ ಎಂದು ನಂತರ ಗೊತ್ತಾಗುತ್ತದೆ. ಆತನನ್ನು ಅಪಹರಿಸಿದ ಖಳನಾಯಕ ಮಗನನ್ನು ಜೀವಂತವಾಗಿ ಬಿಡಲು ಮುತ್ತುವೇಲ್ ಪಾಂಡಿಯನ್‌ಗೆ ವಿಚಿತ್ರ ಬೇಡಿಕೆ ಮುಂದಿಡುತ್ತಾನೆ. ಮಗನನ್ನು ರಕ್ಷಿಸಲು ಮುತ್ತುವೇಲ್ ಸಫಲವಾಗುತ್ತಾನಾ?

ತಲೈವಾರ ಈ ಹೊಸ ಕಥೆಯಲ್ಲಿ ಸಾಕಷ್ಟು ತಿರುವುಗಳು, ಅಚ್ಚರಿಗಳಿವೆ. ಕನ್ನಡದ ಶಿವ ರಾಜ್‌ಕುಮಾರ್‌ (Shiva Rajkumar) ಸೇರಿದಂತೆ ಹಲವಾರು ಅತಿಥಿ ನಟರ ಕ್ಯಾಮಿಯೋ ರೋಲ್‌ಗಳೂ ಇದರಲ್ಲಿವೆ. ಆದರೆ ಇದೊಂದು ಕಂಪ್ಲೀಟ್ ರಜನಿ ಚಲನಚಿತ್ರ. ಹಾಗಾಗಿ ಇಷ್ಟೊಂದು ಸ್ಟಾರ್ ನಟರು ದೊಡ್ಡ ಪರದೆಯ ಮೇಲೆ ಹೆಚ್ಚಿನ ಜಾಗ ಪಡೆಯುವ ನಿರೀಕ್ಷೆ ಬೇಡ. ʼಬೀಸ್ಟ್‌ʼ ಫಿಲಂನ ಸೋಲಿನಿಂದ ನಿರ್ದೇಶಕ ನೆಲ್ಸನ್‌ ಹಲವು ಪಾಠ ಕಲಿತಿದ್ದಾರೆ; ಹಾಗಾಗಿ ಅವುಗಳನ್ನು ಇಲ್ಲಿ ಪುನರಾವರ್ತಿಸಲು ಹೋಗಿಲ್ಲ. ಮೊದಲರ್ಧ ಸ್ವಲ್ಪ ನಿಧಾನವಾಗಿ ಸಾಗುತ್ತದೆ. ದ್ವಿತೀಯಾರ್ಧದಲ್ಲಿ ಒಂದು ನೀರಸ ಕ್ಷಣವೂ ಇಲ್ಲ. ಮೋಹನ್‌ಲಾಲ್ (Mohanlal) ಭಾರಿ ಶಿಳ್ಳೆ ಮತ್ತು ಚಪ್ಪಾಳೆಗಳನ್ನು ಪಡೆದುಕೊಳ್ಳುತ್ತಾರೆ. ಮ್ಯಾಥ್ಯೂ ಪಾತ್ರದಲ್ಲಿ ಅವರ ಪಾತ್ರ ಭಾರೀ ಗಮನ ಸೆಳೆಯುವುದು ಖಚಿತ. ನರಸಿಮನಾಗಿ ಶಿವರಾಜ್ ಕುಮಾರ್ ಕೂಡ ತಮ್ಮ ನೋಟ ಮತ್ತು ದೇಹ ಭಾಷೆಯ ಮೂಲಕ ಅದ್ಭುತ ಪರ್‌ಫಾರ್ಮೆನ್ಸ್‌ ನೀಡಿದ್ದಾರೆ. ನೆಲ್ಸನ್ ಈ ದಿಗ್ಗಜರನ್ನು ಪರಿಪೂರ್ಣವಾಗಿ ಬಳಸಿಕೊಂಡಿದ್ದಾರೆ.

ಯೋಗಿ ಬಾಬು ಅವರು ತಮ್ಮ ಹಾಸ್ಯಮಯ ಒನ್-ಲೈನರ್‌ಗಳೊಂದಿಗೆ ನಗೆಪಟಾಕಿ ಸಿಡಿಸುತ್ತಾರೆ. ರಜನಿ ಅವರೊಂದಿಗಿನ ಅವರ ಸಹಯೋಗದ ದೃಶ್ಯಗಳು ನಿಜವಾದ ಟ್ರೀಟ್. ನೆಲ್ಸನ್‌ನ ಟ್ರೇಡ್‌ಮಾರ್ಕ್ ಡಾರ್ಕ್ ಕಾಮಿಡಿ. ಅದು ಚಲನಚಿತ್ರದಾದ್ಯಂತ ಕಾಣುತ್ತದೆ. ವಿನಾಯಕನ್ ಇಲ್ಲಿ ಭಯಂಕರ ಖಳನಾಯಕನಾಗಿ ತಮ್ಮ ಪ್ರತಿಭಾ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಸೂಪರ್‌ಸ್ಟಾರ್‌ಗೆ ಶತ್ರುವಾಗಿ ಅದ್ಭುತ ಕೆಲಸ ಮಾಡಿದ್ದಾರೆ. ಚಲನಚಿತ್ರದಲ್ಲಿ ಮೈ ರೋಮಾಂಚನಗೊಳಿಸುವ ಹಲವಾರು ಕ್ಷಣಗಳು ಇವೆ. ತಾಂತ್ರಿಕ ವಿಚಾರಕ್ಕೆ ಬಂದರೆ ಅನಿರುದ್ಧ್ ಅವರ ಸಂಗೀತವೇ ಚಿತ್ರದ ದೊಡ್ಡ ಬೆನ್ನೆಲುಬು. ಅವರು ರಜನಿಯ ಸಾಹಸ ದೃಶ್ಯಗಳನ್ನು ಇನ್ನೊಂದು ಹಂತಕ್ಕೆ ಏರಿಸುತ್ತಾರೆ. ಒಂದು ಸಾಂದರ್ಭಿಕ ನಡಿಗೆಯ ದೃಶ್ಯವೂ ಸಹ ಅವರ ಹಿನ್ನೆಲೆ ಸಂಗೀತದಿಂದಾಗಿ ಸಾಕಷ್ಟು ಶಿಳ್ಳೆ ಚಪ್ಪಾಳೆಗಳನ್ನು ಪಡೆಯುತ್ತದೆ. ವಿಜಯ್ ಕಾರ್ತಿಕ್ ಕಣ್ಣನ್ ಅವರ ಕ್ಯಾಮೆರಾದ ದೃಶ್ಯ ಚೌಕಟ್ಟುಗಳು ಪರಿಪೂರ್ಣವಾಗಿವೆ. ಬೆಳಕು ಮತ್ತು ಬಣ್ಣದ ಟೋನ್ ನೈಸರ್ಗಿಕವಾಗಿ ದೃಶ್ಯದ ಮೂಡ್ ಅನ್ನು ಹೊಂದಿಸುತ್ತದೆ. ಸಾಹಸ ದೃಶ್ಯಗಳನ್ನು ಅದ್ಭುತವಾಗಿ ಸಂಯೋಜನೆ ಮಾಡಲಾಗಿದೆ. ಕಲಾ ನಿರ್ದೇಶಕ ಕಿರಣ್ ಅವರ ನೈಜ ಸೆಟ್ ಕೆಲಸ ಮತ್ತೊಂದು ಗಮನಾರ್ಹ ಸಂಗತಿ.

ಅಂತೂ ರಜನಿ ಅಭಿಮಾನಿಗಳಿಗೆ ಈ ಸಿನಿಮಾ ಪೈಸಾ ವಸೂಲ್.‌ ಮನರಂಜನೆಗೆ ಒಂದು ಪೈಸೆಯೂ ಮೋಸವಿಲ್ಲ. ಒಂದು ಕ್ಷಣವೂ ಬೋರ್‌ ಆಗುವುದಿಲ್ಲ. ಕಮಲ ಹಾಸನ್‌ಗೆ ʼವಿಕ್ರಮ್‌ʼ ಇನ್ನೊಂದು ಇನಿಂಗ್ಸ್‌ ನೀಡಿದಂತೆ ʼಜೈಲರ್‌ʼ ತಲೈವಾಗೆ ಇನ್ನೊಂದು ಇನಿಂಗ್ಸ್‌ ನೀಡಬಲ್ಲ ಬ್ಲಾಕ್‌ಬಸ್ಟರ್‌ (blockbuster) ಚಿತ್ರ.

ಇದನ್ನೂ ಓದಿ: Jailer Movie: ಕರ್ನಾಟಕದಲ್ಲೂ ಹಬ್ಬಿದೆ ಸೂಪರ್ ಸ್ಟಾರ್ ರಜನಿಕಾಂತ್ ‘ಜೈಲರ್’ ಫೀವರ್!

Exit mobile version