Site icon Vistara News

Janhvi Kapoor: ಜಾನ್ವಿ ಕಪೂರ್-ಶಿಖರ್ ಪಹಾರಿಯಾ ಪ್ರೇಮ ಸಂಬಂಧಕ್ಕೆ ಸಿಕ್ತು ಇನ್ನಷ್ಟು ಸಾಕ್ಷಿ

Janhvi Kapoor

Janhvi Kapoor

ಮುಂಬೈ: ಬಾಲಿವುಡ್‌ನಲ್ಲಿ ಸದ್ಯ ಪ್ರವರ್ಧಮಾನಕ್ಕೆ ಬರುತ್ತಿರುವ ನಟಿಯರ ಪೈಕಿ ಜಾನ್ವಿ ಕಪೂರ್ (Janhvi Kapoor) ಕೂಡ ಒಬ್ಬರು. ಶ್ರೀದೇವಿ-ಬೋನಿ ಕಪೂರ್‌ ದಂಪತಿಯ ಪುತ್ರಿಯಾಗಿದ್ದರೂ ಜಾನ್ವಿ ಕಪೂರ್‌ ತಮ್ಮ ಪ್ರತಿಭೆ ಮೂಲಕವೇ ಒಂದರ ಹಿಂದೆ ಒಂದರಂತೆ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹಿಂದಿ ಬಳಿಕ ಇದೀಗ ದಕ್ಷಿಣ ಭಾರತದ ಚಿತ್ರರಂಗದಲ್ಲಿಯೂ ಮಿಂಚಲು ಸಜ್ಜಾಗಿದ್ದಾರೆ. ಇದೀಗ ಅವರು ತಮ್ಮ ಡೇಟಿಂಗ್‌ ವಿಚಾರದಲ್ಲಿ ಸದ್ದು ಮಾಡುತ್ತಿದ್ದಾರೆ. ಜಾನ್ವಿ ಮತ್ತು ಶಿಖರ್ ಪಹಾರಿಯಾ (Shikhar Pahariya) ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಗಾಸಿಪ್‌ ಈ ಹಿಂದೆಯೇ ಹಬ್ಬಿತ್ತು. ಆ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಪುರಾವೆ ಲಭಿಸಿದೆ.

ಮಂಗಳವಾರ (ಏಪ್ರಿಲ್‌ 9) ಜಾನ್ವಿ ಕಪೂರ್ ಮುಂಬೈನಲ್ಲಿ ನಡೆದ, ತನ್ನ ತಂದೆ ಬೋನಿ ಕಪೂರ್ ನಿರ್ಮಾಣದ ʼಮೈದಾನ್ʼ ಹಿಂದಿ ಚಿತ್ರದ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಈ ವೇಳೆ ಎಲ್ಲರ ಗಮನವನ್ನು ಸೆಳೆದದ್ದು ಜಾನ್ವಿ ಕಸ್ಟಮೈಸ್ ಮಾಡಿಸಿ ಹಾಕಿಕೊಂಡಿದ್ದ ಹಾರ. ಅದರ ಮೇಲೆ ಶಿಖರ್ ಪಹಾರಿಯಾ ಅವರ ನಿಕ್‌ ನೇಮ್‌ ʼಶಿಖುʼ ಎಂದು ಬರೆದಿತ್ತು.

ಬಿಳಿ ಪ್ಯಾಂಟ್, ಸೂಟ್ ಮತ್ತು ಮ್ಯಾಚಿಂಗ್ ಹೀಲ್ಸ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ಕ್ಯಾಮೆರಾಗಳಿಗೆ ಪೋಸ್‌ ನೀಡುವ ಮೂಲಕ ಜಾನ್ವಿ ಕಪೂರ್‌ ಗಮನ ಸೆಳೆದರು. ಅದಾಗ್ಯೂ ಅವರು ಧರಿಸಿದ್ದ ಹಾರದ ಮೇಲೆಯೇ ಎಲ್ಲರ ಕಣ್ಣು ನೆಟ್ಟಿತ್ತು. ಈ ವರ್ಷದ ಆರಂಭದಲ್ಲಿ ಕಾಫಿ ವಿತ್ ಕರಣ್ ಸಂಚಿಕೆಯಲ್ಲಿ ಮಾತನಾಡುತ್ತಾ ಜಾನ್ವಿ ಕಪೂರ್‌, ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ಆಲಿಯಾಸ್‌ ಶಿಕು ಅವರ ಹೆಸರನ್ನು ತನ್ನ ಸ್ಪೀಡ್-ಡಯಲ್ ಪಟ್ಟಿಯಲ್ಲಿ ಸೇವ್‌ ಮಾಡಿರುವ ವಿಚಾರವನ್ನು ಬಹಿರಂಗ ಪಡಿಸಿದ್ದರು. ನಿರೂಪಕ ಕರಣ್ ಜೋಹರ್ “ನಿಮ್ಮ ಸ್ಪೀಡ್-ಡಯಲ್ ಪಟ್ಟಿಯಲ್ಲಿರುವ ಮೂವರ ಹೆಸರನ್ನು ತಿಳಿಸಿ” ಎಂದಾಗ, ಜಾನ್ವಿ ತಕ್ಷಣ “ಅಪ್ಪಾ, ಖುಶು ಮತ್ತು ಶಿಕು” ಎಂದು ಉತ್ತರಿಸಿದ್ದರು. ಖುಶು ಎಂದರೆ ಜಾನ್ವು ಅವರ ಸಹೋದರಿ ಖುಷಿ ಕಪೂರ್‌.

ಜಾನ್ವಿ ಕಪೂರ್ ಹಿಂದೆಯೂ ಶಿಖರ್ ಜತೆಗಿನ ಪ್ರೀತಿಯನ್ನು ಯಾವುದೇ ಹಿಂಜರಿಕೆ ಇಲ್ಲದೆ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಬೋನಿ ಕಪೂರ್ ಕೂಡ ತಮ್ಮ ಪುತ್ರಿ ಶಿಖರ್ ಜತೆ ಡೇಟಿಂಗ್‌ ನಡೆಸುತ್ತಿರುವ ಬಗ್ಗೆ ಹೇಳಿಕೊಂಡಿದ್ದರು. ಆದರೆ ಏಪ್ರಿಲ್ 3ರಂದು ಶಿಖರ್‌ ಹುಟ್ಟುಹಬ್ಬ ಆಚರಿಸಕೊಂಡಾಗ ಜಾನ್ವಿ ಕಪೂರ್‌ ಶುಭಾಶಯ ತಿಳಿಸದೇ ಇದ್ದುದು ಅಚ್ಚರಿಗೆ ಕಾರಣವಾಗಿತ್ತು. ಮತ್ತೊಂದೆಡೆ ಶಿಖರ್ ಕಳೆದ ತಿಂಗಳು ಜಾನ್ವಿ ಅವರ ಜನ್ಮದಿನದಂದು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಗಳಲ್ಲಿ ಜತೆಗಿನ ಫೋಟೋವನ್ನು ಪೋಸ್ಟ್ ಮಾಡಿ ಗಮನ ಸೆಳೆದಿದ್ದರು.

ಇದನ್ನೂ ಓದಿ: Janhvi Kapoor: ಕ್ಯೂಟ್‌ ಆಗಿ ಬರ್ತಡೇಗೆ ವಿಶ್‌ ಮಾಡಿದ ಜಾನ್ವಿ ಕಪೂರ್ ಬಾಯ್‌ಫ್ರೆಂಡ್‌!

ಯಾರು ಈ ಶಿಖರ್‌?

ಶಿಖರ್ ಪಹಾರಿಯಾ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ವರದಿಗಳ ಪ್ರಕಾರ ಶಿಖರ್ ಮತ್ತು ಜಾನ್ವಿ ಈ ಹಿಂದೆಯೇ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ವೈಮನಸ್ಸು ಮೂಡಿ ಬೇರ್ಪಟ್ಟಿದ್ದರು. ಕಳೆದ ವರ್ಷ ಮತ್ತೆ ಇಬ್ಬರೂ ಒಂದಾಗಿದ್ದಾರೆ ಎನ್ನಲಾಗಿದೆ. ಶಿಖರ್ ಹಲವು ಬಾರಿ ಬೋನಿ ಕಪೂರ್ ಜತೆಗೆ ನಿಂತು ಪೋಸ್ ಕೊಟ್ಟಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version