ಹೈದರಾಬಾದ್: ಬಾಲಿವುಡ್ ನಟಿ, ಬಹುಭಾಷಾ ತಾರೆ ಶ್ರೀದೇವಿ (Sridevi) ಹುಟ್ಟಿದ ದಿನ ಇಂದು (ಆಗಸ್ಟ್ 13). ಈ ಹಿನ್ನೆಲೆಯಲ್ಲಿ ಅವರ ಪುತ್ರಿ, ನಟಿ ಜಾಹ್ನವಿ ಕಪೂರ್ ಪ್ರತಿವರ್ಷದಂತೆ ಈ ಬಾರಿಯೂ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಸಾಂಪ್ರದಾಯಿಕ ಹಳದಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ ಅವರು ತಮ್ಮ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ (Shikhar Pahariya) ಜತೆಗೆ ದೇಗುಲಕ್ಕೆ ಅಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಶಿಖರ್ ಪಹಾರಿಯಾ ಕೂಡ ಸಾಂಪ್ರದಾಯಿಕ ಉಡುಪು ಪಂಚೆ ಧರಿಸಿ ಸಾಥ್ ನೀಡಿದರು.
ತಾಯಿಯನ್ನು ನೆನೆಸಿಕೊಂಡು ಭಾವುಕ ಪೋಸ್ಟ್
ಜಾಹ್ನವಿ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಾಯಿಯನ್ನು ನೆನಪಿಸಿಕೊಂಡು ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. ಶ್ರೀದೇವಿಯೊಂದಿಗಿನ ತಮ್ಮ ಬಾಲ್ಯದ ಫೋಟೊ ಹಂಚಿಕೊಂಡು ʼʼಹುಟ್ಟುಹಬ್ಬದ ಶುಭಾಶಯಗಳು ಅಮ್ಮ. ಐ ಲವ್ ಯೂʼʼ ಎಂದು ಬರೆದುಕೊಂಡಿದ್ದಾರೆ. ತಿರುಪತಿ ದೇವಸ್ಥಾನದ ಜತೆ ಶ್ರೀದೇವಿ ಅವರ ಕುಟುಂಬಕ್ಕೆ ವಿಶೇಷ ನಂಟಿದೆ. ಶ್ರೀದೇವಿ ಆಗಾಗ ಕುಟುಂಬ ಸಮೇತ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಈಗ ಜಾಹ್ನವಿ ಕಪೂರ್ ಕೂಡ ನಿಯಮಿತವಾಗಿ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿರುತ್ತಾರೆ. ಜಾಹ್ನವಿ ಕಪೂರ್ ಮತ್ತು ಶಿಖರ್ ಪಹಾರಿಯಾ ಅವರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದುಕೊಳ್ಳುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
#WATCH | Andhra Pradesh: Actor Janhvi Kapoor visited Tirupati Balaji Temple and offered prayers today. pic.twitter.com/jhZnqGuGOF
— ANI (@ANI) August 13, 2024
ನಟಿ ಶ್ರೀದೇವಿ ಮೃತಪಟ್ಟು 6 ವರ್ಷ ಕಳೆದಿದೆ. 2018ರ ಫೆಬ್ರವರಿ 24ರಂದು ಅವರು ತಮ್ಮ 54ನೇ ವಯಸ್ಸಿನಲ್ಲಿ ದುಬೈಯಲ್ಲಿ ನಿಧನ ಹೊಂದಿದ್ದರು.
ನಿರೀಕ್ಷೆ ಹುಟ್ಟುಹಾಕಿದ ʼದೇವರʼ
ಸದ್ಯ ಜಾಹ್ನವಿ ಕಪೂರ್ ಪ್ಯಾನ್ ಇಂಡಿಯಾ ತೆಲುಗು ಚಿತ್ರ ʼದೇವರʼದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾದಲ್ಲಿ ನಾಯಕನಾಗಿ ಜೂನಿಯರ್ ಎನ್‌ಟಿಆರ್ ನಟಿಸುತ್ತಿದ್ದು, ಈಗಾಗಲೇ ನಿರೀಕ್ಷೆ ಮೂಡಿಸಿದೆ. ಸೈಫ್ ಆಲಿಖಾನ್, ಪ್ರಕಾಶ್ ರೈ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಿಲೀಸ್ ಆಗಿರುವ ಹಾಡುಗಳು ಹಿಟ್ ಲಿಸ್ಟ್ ಸೇರಿವೆ. ಮೊದಲ ಭಾಗ ಸೆಪ್ಟೆಂಬರ್ 27ರಂದು ಬಿಡುಗಡೆಯಾಗಲಿದೆ. ಇದರ ಜತೆಗೆ ಜಾಹ್ನವಿ ʼಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿʼ ಎನ್ನುವ ಹಿಂದಿ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಸಿನಿಮಾಗಳೆಲ್ಲ ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿರುವುದರಿಂದ ಜಾಹ್ನವಿಗೆ ತುರ್ತಾಗಿ ಗೆಲವೊಂದು ಬೇಕಾಗಿದ್ದು, ʼದೇವರʼದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಶಿಖರ್ ಪಹಾರಿಯಾ ಜತೆ ಸುತ್ತಾಟ
ಜಾಹ್ನವಿ ಕಪೂರ್ ಸದ್ಯ ತಮ್ಮ ಬಾಯ್‌ಫ್ರೆಂಡ್ ಶಿಖರ್ ಜತೆಗೆ ಬಿಂದಾಸ್ ಆಗಿಯೇ ಓಡಾಡುತ್ತಿದ್ದಾರೆ. ಶಿಖರ್ ಜತೆಗಿನ ಪ್ರೀತಿಯನ್ನು ಯಾವುದೇ ಹಿಂಜರಿಕೆ ಇಲ್ಲದೆ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಬೋನಿ ಕಪೂರ್ ಕೂಡ ತಮ್ಮ ಪುತ್ರಿ ಶಿಖರ್ ಜತೆ ಡೇಟಿಂಗ್ ನಡೆಸುತ್ತಿರುವ ಬಗ್ಗೆ ಹೇಳಿಕೊಂಡಿದ್ದರು. ಶಿಖರ್ ಪಹಾರಿಯಾ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ವರದಿಗಳ ಪ್ರಕಾರ ಶಿಖರ್ ಮತ್ತು ಜಾಹ್ನವಿ ಈ ಹಿಂದೆಯೇ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ವೈಮನಸ್ಸು ಮೂಡಿ ಬೇರ್ಪಟ್ಟಿದ್ದರು. ಕಳೆದ ವರ್ಷ ಮತ್ತೆ ಇಬ್ಬರೂ ಒಂದಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Janhvi Kapoor: ಉರ್ಫಿ ಸ್ಟೈಲ್ ಕಾಪಿ ಮಾಡಿದ್ರಾ ಜಾಹ್ನವಿ ಕಪೂರ್? ಟ್ರೋಲ್ ಆದ್ರು ನಟಿ!