Site icon Vistara News

Jawan Movie review: ಕ್ಷಣಕ್ಷಣವೂ ಕಣ್ಣಿಗೆ ಹಬ್ಬ, ಪೈಸಾ ವಸೂಲ್ ಮಸಾಲಾ!

Shah Rukh Khan

ಸರಿಯಾಗಿ ಪಾಕ ಮಾಡಿದ ಒಂದು ಮಸಾಲಾ ಹಿಂದಿ ಸಿನಿಮಾ ನಿಮಗೆ ಕೊಡಬಹುದಾದ ಆನಂದದ ಅನುಭವವನ್ನೆಲ್ಲಾ ʼಜವಾನ್ʼ (Jawan Movie)‌ ಕೊಡುತ್ತದೆ. ಕಳೆದ ಕೆಲವು ವರ್ಷಗಳಿಂದ ಕಾಣೆಯಾಗಿರುವ ಒಳ್ಳೆಯ ಮಸಾಲಾ ಚಿತ್ರದ ರಸದೌತಣ ಅಂತಿಮವಾಗಿ ಶಾರುಖ್‌ ಖಾನ್‌ (Shah Rukh Khan) ನಟನೆಯ ʼಜವಾನ್‌ʼ ಮೂಲಕ ನಮಗೆ ದೊರೆತಿದೆ. ನಿರ್ದೇಶಕ ಅಟ್ಲಿ ಮತ್ತು ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್‌ ಜವಾನ್‌ ಮೂಲಕ ಮ್ಯಾಜಿಕ್‌ ಸೃಷ್ಟಿಸಿದ್ದಾರೆ. ಅಟ್ಲೀ (Atlee) ಹಾರ್ಡ್‌ಕೋರ್ ಮಸಾಲಾ ಫಿಲ್ಮ್ (Masala film) ಒದಗಿಸುವವರು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಇದು ಇನ್ನೂ ಉತ್ತಮವಾದ ಮೇಕಿಂಗ್.‌ ತಮ್ಮ ಹಳೆಯ ಯಶಸ್ಸಿನ ಸೂತ್ರವನ್ನು ಡಾರ್ಕ್ ಹ್ಯೂಮರ್‌ ಜತೆಗೆ ಬೆರೆಸಿ ತಂದಿದ್ದಾರೆ.

ಶಾರುಖ್ ಖಾನ್ ಚಲನಚಿತ್ರ ಬಿಡುಗಡೆ ಹಬ್ಬಕ್ಕಿಂತ ಕಡಿಮೆಯಲ್ಲ. ಬ್ಲಾಕ್‌ಬಸ್ಟರ್ ಚಿತ್ರ ಪಠಾಣ್‌ನೊಂದಿಗೆ (Pathan movie) ಶಾರುಖ್‌ ಈ ವರ್ಷವನ್ನು ಪ್ರಾರಂಭಿಸಿದ್ದರು. ಜವಾನ್ ಅವರನ್ನು ಇನ್ನೊಂದು ಹಂತ ಏರಿಸಿದೆ. ಎರಡೂ ನಾಟಕೀಯವಾಗಿವೆ; ಇದರಲ್ಲೂ ಹೆಚ್ಚಿನ ಆಕ್ಷನ್‌ ಇದೆ. ಜವಾನ್ ಆರಂಭದಿಂದ ಅಂತ್ಯದವರೆಗೆ ಶಾರುಖ್‌ ಅವರ ಪ್ರದರ್ಶನ. ದ್ವಿಪಾತ್ರದಲ್ಲಿ ಅವರನ್ನು ನೋಡುವುದು ಡಬಲ್ ಟ್ರೀಟ್. ವೀರೋಚಿತ ಎಂಟ್ರಿ ಸೀನ್‌ಗಳಿಂದ ಹಿಡಿದು ಫೈಟ್‌ಗಳವರೆಗೆ, ಡ್ಯಾನ್ಸ್‌ಗಳವರೆಗೆ ಶಾರುಖ್‌ ಇದರಲ್ಲಿ ಮಾಡಲಾಗದ ಯಾವುದೂ ಇಲ್ಲ. ತಮ್ಮ 57ರ ವಯಸ್ಸಿನಲ್ಲೂ ಶಾರುಖ್‌ ಖಾನ್‌ ಆಕ್ಷನ್‌ ದೃಶ್ಯಗಳಲ್ಲಿ ನಿಮ್ಮನ್ನು ಬೌಲ್ಡ್‌ ಮಾಡುತ್ತಾರೆ.

ಜವಾನ್ ಅನ್ನು ಬೇರ್ಯಾವುದೇ ಮಸಾಲೆ ಚಿತ್ರಕ್ಕೆ ಹೋಲಿಸಲಾಗದು. ಆಕರ್ಷಕ ಮತ್ತು ಮನರಂಜನಾತ್ಮಕವಾಗಿರುವ ಎಲ್ಲವನ್ನೂ ಇದು ಮಿಕ್ಸ್‌ ಮಾಡುತ್ತದೆ. ಆಕ್ಷನ್‌, ಡ್ರಾಮಾ, ಹಾಡು, ರೊಮ್ಯಾನ್ಸ್‌ ಜೊತೆಗೆ ಮಸಾಲೆ ಅಂಶಗಳೆಲ್ಲವನ್ನೂ ಜವಾನ್ ಹೇರಳವಾಗಿ ಹೊಂದಿದೆ. ಹಾಗೆಂದು ತಲೆಗೆ ಕೆಲಸ ಕೊಡುವುದಿಲ್ಲ ಎಂದಲ್ಲ. ನಮ್ಮ ಸಮಾಜದ ಇಂದಿನ ಕೆಲವು ಪ್ರಮುಖ ವಿಷಯಗಳನ್ನೂ ಇದು ಹೈಲೈಟ್ ಮಾಡುತ್ತದೆ. ಸುಮಾರು 3 ಗಂಟೆಗಳ ಅವಧಿಯ ಚಲನಚಿತ್ರವು ವ್ಯವಸ್ಥೆಯಲ್ಲಿನ ವಿವಿಧ ಹಂತಗಳಲ್ಲಿ ಪ್ರಚಲಿತದಲ್ಲಿರುವ ಭ್ರಷ್ಟಾಚಾರದ ಕಥೆಯನ್ನು ಹೇಳುತ್ತದೆ; ಅದು ಸಾಮಾನ್ಯ ಮನುಷ್ಯನ ಮೇಲೆ ಅತ್ಯಂತ ಕ್ರೂರ ರೀತಿಯಲ್ಲಿ ಪರಿಣಾಮ ಬೀರುವುದನ್ನು ತೋರುತ್ತದೆ. ಆದರೆ ಯಾವುದೂ ಪ್ರೀಚಿ ಅಥವಾ ಬೋರ್‌ ಹೊಡೆಸುವ ಹಾಗೆ ಇಲ್ಲ.

ಜವಾನ್‌ನ ಸರಳರೇಖಾತ್ಮಕವಲ್ಲದ ನಿರೂಪಣೆ ವರ್ತಮಾನದಲ್ಲಿ ಪ್ರಾರಂಭವಾಗುತ್ತದೆ. 30 ವರ್ಷಗಳ ನಂತರದ ಕಾಲಕ್ಕೆ ಹೋಗುತ್ತದೆ; ನಂತರ ಏಕೆ ಮತ್ತು ಹೇಗೆ ಎಂಬುದನ್ನು ವಿವರಿಸಲು ಫ್ಲ್ಯಾಷ್‌ಬ್ಯಾಕ್ ಅನ್ನು ಬಳಸುತ್ತದೆ. ಜವಾನ್ ಸೇಡು ತೀರಿಸಿಕೊಳ್ಳುವ ಡ್ರಾಮಾ ಕೂಡ ಹೌದು, ಆದರೆ ಅಷ್ಟೇ ಅಲ್ಲ. ಇದರ ಪ್ರತಿಯೊಂದು ತುಣುಕೂ ವಿಸ್ತೃತವಾದ ಫ್ಲ್ಯಾಷ್‌ಬ್ಯಾಕ್‌ನೊಂದಿಗೆ ತಾರ್ಕಿಕವಾಗಿ ಒಂದು ಸಣ್ಣ ಕಥೆಯಾಗಿದೆ. ಆದರೆ ಜವಾನ್ ನಿಮಗೆ ಒಂದೇ ಕಥೆಯಲ್ಲಿ ಹೆಚ್ಚು ಕಾಲ ಉಳಿಯಲು ಬಿಡದೆ ಮುಂದಿನದಕ್ಕೆ ಬೇಗನೆ ಹಾರುತ್ತದೆ.

ಈ ಸಿನಿಮಾದಲ್ಲಿ ಎರಡು ಸಮಾನಾಂತರ ಕಥೆಗಳು ಏಕಕಾಲದಲ್ಲಿ ನಡೆಯುತ್ತವೆ. ಒಂದರಲ್ಲಿ, ಫೋರ್ಸ್ ಒನ್ಸ್‌ನ ಮುಖ್ಯಸ್ಥೆ ನರ್ಮದಾ (ನಯನತಾರಾ), 376 ಪ್ರಯಾಣಿಕರ ಜೀವಗಳನ್ನು ಅಪಾಯಕ್ಕೆ ಸಿಲುಕಿಸಿ ಹೈಜಾಕ್ ಮಾಡಿದ ವಿಕ್ರಮ್ ರಾಥೋಡ್‌(ಶಾರುಖ್)ಗಾಗಿ ಹುಡುಕುತ್ತಿದ್ದಾಳೆ. ಎರಡನೇ ಕಥೆಯಲ್ಲಿ ನರ್ಮದಾ ಮತ್ತು ಆಜಾದ್ ರಾಥೋಡ್ (ಶಾರುಖ್)‌ ಪರಸ್ಪರ ಪ್ರೀತಿಯಲ್ಲಿ ಬೀಳುವುದನ್ನು ತೋರಿಸುತ್ತದೆ. ಏತನ್ಮಧ್ಯೆ ಶಸ್ತ್ರಾಸ್ತ್ರ ವ್ಯಾಪಾರಿ ಕಾಲಿಗೆ (ವಿಜಯ್ ಸೇತುಪತಿ) ವಿಕ್ರಮ್ ರಾಥೋಡ್ ಜತೆಗೆ ಹಳೆಯ ಶತ್ರುವಿದ್ದು, ಅದು ಕತೆಯಲ್ಲಿ ಬೆಳೆಯತ್ತ ಹೋಗುತ್ತದೆ. ಎಸ್‌ಆರ್‌ಕೆ ಅವರ ಸ್ಟಾರ್‌ಡಮ್‌ಗೆ ಹೊಂದಿಕೆಯಾಗುವಂತೆ ವಿಜಯ್ ಸೇತುಪತಿ ತಮ್ಮದೇ ಆದ ಮೋಡಿ ಮತ್ತು ಗುರುತ್ವಾಕರ್ಷಣೆಯನ್ನು ತರುತ್ತಾರೆ. ಅವರ ಭಾಗಗಳು ಶಕ್ತಿಯುತವಾಗಿವೆ. ಯುವ ಮತ್ತು ವಯಸ್ಸಾದ ಎರಡು ಅವತಾರಗಳಲ್ಲಿ ಸೇತುಪತಿ ಭಯ ಹುಟ್ಟಿಸುತ್ತಾರೆ. ಅವರಿಬ್ಬರು ಮುಖಾಮುಖಿಯಾಗುವ ಕ್ಲೈಮ್ಯಾಕ್ಸ್‌ ದೃಶ್ಯವನ್ನು ಅದ್ಭುತವಾಗಿ ಬರೆಯಲಾಗಿದೆ ಮತ್ತು ಹಾಸ್ಯದ ಛಾಯೆಯೊಂದಿಗೆ ಚಿತ್ರೀಕರಿಸಲಾಗಿದೆ. ನಯನತಾರಾ ಚಿತ್ರಕ್ಕೆ ತಾಜಾತನವನ್ನು ತರುತ್ತಾರೆ.

ಜವಾನ್ ಒಂದು ಕ್ಷಣವೂ ಬೋರ್‌ ಎನಿಸುವುದಿಲ್ಲ. ನಿಮ್ಮ ಕಣ್ಣುಗಳು ಮತ್ತು ಮನಸ್ಸನ್ನು ಪರದೆಯ ಮೇಲೆ ಕೇಂದ್ರೀಕರಿಸುವಂತೆ, ಅಲ್ಲಿ ನಡೆಯುವ ಕ್ರಿಯೆಯನ್ನು ನೀವು ಕಳೆದುಕೊಳ್ಳಲು ಬಯಸದಂತೆ ಮಾಡುತ್ತದೆ. ಇದೊಂದು ಪೈಸಾ ವಸೂಲ್ ಚಿತ್ರ.

ಇದನ್ನೂ ಓದಿ: Jawan First Reviews: ಸೌತ್‌ ಮಾಸ್‌, ನಾರ್ತ್ ಕ್ಲಾಸ್‌ ಮಿಕ್ಸ್‌; ʻಜವಾನ್‌ʼಗೆ ಫ್ಯಾನ್ಸ್‌ಗಳ ಜೈಕಾರ!

Exit mobile version