Site icon Vistara News

Jr. NTR : ಅಮೆಜಾನ್‌ ಸ್ಟುಡಿಯೋಸ್‌ನ ಜೇಮ್ಸ್‌ ಜತೆ ಕಾಲ ಕಳೆದ ಜೂ. ಎನ್‌ಟಿಆರ್‌; ವೈರಲ್‌ ಆಯ್ತು ಪೋಸ್ಟ್‌

#image_title

ಹೈದರಾಬಾದ್‌: ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ಆಸ್ಕರ್‌ ಪ್ರಶಸ್ತಿ ಗೆದ್ದ ಮೇಲೆ ಸಿನಿಮಾದ ನಟರಾದ ಜೂ.ಎನ್‌ಟಿಆರ್‌ ಹಾಗೂ ರಾಮ್‌ಚರಣ್‌ ಭಾರೀ ಸುದ್ದಿಯಲ್ಲಿದ್ದಾರೆ. ಅಂದ ಹಾಗೆ ಜೂ.ಎನ್‌ಟಿಆರ್‌ (Jr. NTR) ಅವರು ಇತ್ತೀಚೆಗೆ ಅಮೆಜಾನ್‌ ಸ್ಟುಡಿಯೋಸ್‌ನ ಅಂತಾರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಜೇಮ್ಸ್‌ ಫಾರೆಲ್‌ ಅವರೊಂದಿಗೆ ಪಾರ್ಟಿ ಮಾಡಿದ್ದು, ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿವೆ.

ಈ ಪಾರ್ಟಿಯ ಫೋಟೋಗಳನ್ನು ಸ್ವತಃ ಜೂ.ಎನ್‌ಟಿಆರ್‌ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಜೇಮ್ಸ್‌ ಅವರೊಂದಿಗೆ ಮಾತನಾಡಿ ನಗುತ್ತಿರುವ ಫೋಟೋ, ನಿರ್ದೇಶಕ ರಾಜಮೌಳಿ ಮತ್ತು ಕೊರಟಾಲ ಶಿವ ಅವರೊಂದಿಗೆ ತಾವು ಹಾಗೂ ಜೇಮ್ಸ್‌ ಇರುವ ಫೋಟೋವನ್ನು ಕಾಣಬಹುದಾಗಿದೆ. ಈ ಫೋಟೋಗಳನ್ನು ಹಂಚಿಕೊಂಡಿರುವ ನಟ, “ಒಂದು ಸಂಜೆಯನ್ನು ಸ್ನೇಹಿತರು ಮತ್ತು ಹಿತೈಷಿಗಳೊಂದಿಗೆ ಕಳೆದಿದ್ದೇನೆ. ನಮ್ಮೊಂದಿಗೆ ಭಾಗಿಯಾಗಿದ್ದಕ್ಕೆ ಜೇಮ್ಸ್‌ ಮತ್ತು ಎಮಿಲಿ ಅವರಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.


ನಟನ ಈ ಪೋಸ್ಟ್‌ ಇನ್‌ಸ್ಟಾಗ್ರಾಂನ ತುಂಬೆಲ್ಲ ಹರಿದಾಡಿದ್ದು, ವೈರಲ್‌ ಆಗಿದೆ. ಅಭಿಮಾನಿಗಳು ನಟನ ಪೋಸ್ಟ್‌ಗೆ ಲೈಕ್‌, ಶೇರ್‌ ಮಾಡುವುದಷ್ಟೇ ಅಲ್ಲದೆ, ಮುಂದಿನ ಸಿನಿಮಾಕ್ಕೆ ಶುಭ ಹಾರೈಸಲಾರಂಭಿಸಿದ್ದಾರೆ.

ಈ ಹಿಂದೆ ಜೂ.ಎನ್‌ಟಿಆರ್‌ ಅವರು ಆಸ್ಕರ್‌ ಪ್ರಶಸ್ತಿಯೊಂದಿಗೆ ಫೋಟೋ ತೆಗೆಸಿಕೊಂಡು ಅದನ್ನು ಹಂಚಿಕೊಂಡಿದ್ದು, “ನಾವು ಮಾಡಿ ತೋರಿಸಿದ್ದೇವೆ” ಎಂದು ಹೇಳಿಕೊಂಡಿದ್ದರು. ಹಾಗೆಯೇ ಆಸ್ಕರ್‌ ಗೆಲ್ಲುವುದಕ್ಕೆ ಕಾರಣರಾದ ಎಂ.ಎಂ.ಕೀರವಾಣಿ, ರಾಜಮೌಳಿ, ಚಂದ್ರಬೋಸ್‌ ಮತ್ತು ಪೂರ್ತಿ ಚಿತ್ರತಂಡಕ್ಕೆ ಅಭಿನಂದನೆ ಹೇಳಿದ್ದರು.


ಜೂ.ಎನ್‌ಟಿಆರ್‌ ಅವರು ವಾರ್‌ 2 ಸಿನಿಮಾದಲ್ಲಿ ಹೃತಿಕ್‌ ರೋಷನ್‌ ಅವರ ಜತೆಗೆ ಕಾಣಿಸಿಕೊಳ್ಳಲಿದ್ದಾರೆ. ಅಯನ್‌ ಮುಖರ್ಜಿ ಅವರು ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಈ ಬಗ್ಗೆ ಚಿತ್ರ ವಿಶ್ಮೇಷಕ ತರಣ್‌ ಆದರ್ಸ್‌ ಅವರು ಟ್ವಿಟರ್‌ನಲ್ಲಿ ಮಾಹಿತಿ ಕೊಟ್ಟಿದ್ದರು. “ಇದು ಅಧಿಕೃತ. ವಾರ್‌ 2 ಸಿನಿಮಾದಲ್ಲಿ ಹೃತಿಕ್‌ ಹಾಗೂ ಜೂ.ಎನ್‌ಟಿಆರ್‌ ಒಟ್ಟಿಗೆ ನಟಿಸಲಿದ್ದಾರೆ” ಎಂದು ತಿಳಿಸಿದ್ದರು. ಹೃತಿಕ್‌ ಅವರ ವಾರ್‌ ಸಿನಿಮಾದ 2019ರಲ್ಲಿ ಬಿಡುಗಡೆಗೊಂಡು ಯಶಸ್ಸು ಕಂಡಿತ್ತು.

ಅದಷ್ಟೇ ಅಲ್ಲದೆ ಜೂ.ಎನ್‌ಟಿಆರ್‌ ಅವರು ಕೊರಟಾಲ ಶಿವ ಅವರೊಂದಿಗೆ ಮತ್ತೊಂದು ಚಿತ್ರ ಮಾಡುತ್ತಿರುವುದಾಗಿಯೂ ತಿಳಿಸಿದ್ದಾರೆ. ʼಎನ್‌ಟಿಆರ್‌ 30′ ಹೆಸರಿನ ಈ ಸಿನಿಮಾದಲ್ಲಿ ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಅವರು ಜೂ.ಎನ್‌ಟಿಆರ್‌ಗೆ ಜತೆಯಾಗಿ ನಟಿಸಲಿದ್ದಾರೆ.

Exit mobile version