-ಶಿವರಾಜ್ ಡಿ.ಎನ್.ಎಸ್
ಸಾಮಾನ್ಯ ಮನುಷ್ಯನೊಬ್ಬನ ಜೀವನದಲ್ಲಿ ನಡೆಯುವ ವಿಚಿತ್ರ ಘಟನೆ. ಪರಿವರ್ತನೆಯೋ, ಪರಿಸ್ಥಿತಿಯೋ ಏನೋ ಇವತ್ತು ಹೊಗಳುವವರು, ನಾಳೆ ಉಗುಳುತ್ತಾರೆ. ಸೈನಿಕ ಅಂದರೆ ಬಂದೂಕು ಹಿಡಿದು ಗಡಿಯಲ್ಲಿ ಎದೆಯೊಡ್ಡಿ ನಿಲ್ಲುವವರಷ್ಟೆ ಅಲ್ಲ, ಸೇನೆಯ ಅಡುಗೆ ಕೋಣೆಯಲ್ಲಿ ಸೌಟ್ ಹಿಡಿಯುವರು, ಯುದ್ಧ ಭೂಮಿಯಲ್ಲಿ ಸ್ಟೇರಿಂಗ್ ಹಿಡಿಯುವವರೂ ಸೈನಿಕರೆ. ಊರಿನ ಒಳಿತಿಗಾಗಿ ಏನಾದರೂ ತ್ಯಾಗ ಮಾಡಬಹುದು ಆದರೆ ನಮ್ಮ ಜೀವವನ್ನೆ ತ್ಯಾಗ ಮಾಡುವಂತ ಸ್ಥಿತಿ ಎದುರಾದರೆ.? ಇಂತಹ ಹತ್ತಾರು ಗಮನಾರ್ಹ ವಿಷಯಗಳ ಸುತ್ತ ಸುತ್ತುವ ಕಥೆಯೇ ಕಾಲಾಪತ್ಥರ್ (Kaalapatthar Film Review).
ಸಿನಿಮಾ ಅದ್ಭುತ ಛಾಯಗ್ರಹಣದೊಂದಿಗೆ ಒಂದು ಸುಂದರ ಹಳ್ಳಿಯ ವಾತಾವರಣ ಸೃಷ್ಟಿಸುತ್ತ ತೆರೆದುಕೊಳ್ಳುತ್ತದೆ. ಕಥೆ ಸಾಗುತ್ತ ಬರಡು ಬಯಲು ಪ್ರದೇಶದ ಕುಗ್ರಾಮದ ಯುವಕ ಶಂಕರ್ ಸೇನೆಯಲ್ಲಿದ್ದಾನೆ. ಅವನ ಊರಿನಲ್ಲಿ ನೀರು, ರಸ್ತೆ, ರಾಜಕೀಯ ಮುಂತಾದ ಸಮಸ್ಯೆಗಳಿವೆ. ಅಣ್ಣಾವ್ರ ಅಭಿಮಾನಿಯಾಗಿರುವ ಶಂಕರ್‌ಗೂ ಅವನದೇ ಆದ ಸಮಸ್ಯೆಯ ಜತೆಗೆ ಅವನಿಗಾಗಿ ಕಾಯತ್ತಿರುವ ಪ್ರೇಯಸಿಯೂ ಇದ್ದಾಳೆ. ಇಂತಹ ವಿಷಯ ಮಂಡನೆ ಮಾಡಿ ಪ್ರೇಕ್ಷಕರೊಂದಿಗೆ ಕನೆಕ್ಟಾಗಲೂ ಶುರುವಾಗುತ್ತದೆ. ಬಂದೂಕು ಹಿಡಿಯುವ ಆಸೆ ಇರುವ ಶಂಕರ್‌ನ ಕೈಯಿಗೆ ಸೇನೆಯಲ್ಲಿ ಸೌಟ್ ಕೊಟ್ಟಿದ್ದಾರೆ. ಅದು ಯಾಂತ್ರಿಕವಾದರು ಆನಂದದಿಂದ ಅನುಭವಿಸುತ್ತಲೆ, ಏನೆ ಮಾಡಿದರೂ ಸ್ಟೈಲಾಗಿ ಮಾಡುತ್ತ, ತನ್ನ ಪಾಡಿಗೆ ತಾನು ಕಾರ್ಯನಿರ್ವಹಿಸುತ್ತಿರುತ್ತಾನೆ.
ಹೀಗೆ ಒಮ್ಮೆ ಸಮಯ ನೋಡಿ ಕ್ಯಾಂಪಿಗೆ ನುಗ್ಗಿ ಏನೊ ಕಿತಾಪತಿ ಮಾಡಲು ಮುಂದಾಗಿದ್ದ ವೈರಿಗಳನ್ನು ಕಾಣುವ ಶಂಕರ ಏಕಾಂಗಿಯಾಗಿ ಸ್ಟೋರ್ ರೂಮು, ಅಡುಗೆ ಕೋಣೆಯನ್ನೆಲ್ಲ ಅಟ್ಟಾಡಿಸಿ, ತನ್ನ ಚಮಚ-ಸೌಟು ಬಕೇಟಿನಲ್ಲಿ ಬಡಿದಾಡಿ ಹೆಡೆಮುರಿಕಟ್ಟಿ, ತಾನೂ ಗಾಯಗೊಂಡು ಆಸ್ಪತ್ರೆ ಸೇರುತ್ತಾನೆ. ಹೀಗೆ ವೈರಿಗಳೊಂದಿಗೆ ಹೋರಾಡಿದ ಕುರಿತು ವಿಶೇಷ ಕಾರ್ಯಕ್ರಮ ಮಾಡಿ ಬಿತ್ತರಿಸುವ ನ್ಯೂಸ್ ಚಾನೆಲ್‌ಗಳೆಲ್ಲ ಶಂಕರನ ಹೀರೋ ಮಾಡುವುದರ ಜತೆಗೆ ಅವನ ಊರನ್ನೂ ತಲುಪಿ, ದೇಶಕ್ಕಾಗಿ ಇಷ್ಟೆಲ್ಲ ಮಾಡಿರುವ ನಿಮ್ಮೂರಿನ ಯೋಧನಿಗಾಗಿ ಗ್ರಾಮಸ್ಥರು ಏನ್ಮಾಡ್ತಿರಿ.? ಎನ್ನುವ ಪ್ರಶ್ನೆ ಮಾಡುತ್ತಾರೆ. ಆಗ ಊರ ಗೌಡರು ಊರು ಕಾಯೋ ಶಿವ ಬೇರೆಯಲ್ಲ, ದೇಶ ಕಾಯೊ ಶಂಕರ ಬೇರೆಯಲ್ಲ, ಅವನದೂ ನಮ್ಮೂರಿನಲ್ಲೊಂದು ಪ್ರತಿಮೆಯನ್ನೇ ಮಾಡಿ ನಿಲ್ಲಿಸುತ್ತೇವೆ ಎಂದು ತೀರ್ಮಾನಿಸುತ್ತಾರೆ.
ಸೈನಿಕ ಶಂಕರ ಮನೆಗಷ್ಟೆ ಅಲ್ಲ, ಊರಿಗೆ ಊರೆ ಹೆಮ್ಮೆಪಡುವಂತ ಶಂಕರ್ರಣ್ಣನಾಗಿ ನಿಲ್ಲುತ್ತಾನೆ. ಕೋಟೆ ಬಾಗಿಲ ಬಳಿ ಕರಿಕಲ್ಲಿನಿಂದ ಕೆತ್ತುವ ಅವನ ಪ್ರತಿಮೆಯೂ ನಿಲ್ಲುತ್ತದೆ. ಅದು ಅಲ್ಲಿಯ ರಾಜಕಾರಣಿಗೆ ಹಿಡಿಸುವುದಿಲ್ಲ. ಹೀಗೆ ಕಥೆಯ ವೈಚಿತ್ರ್ಯ ತೆರದು ಕೊಳ್ಳುತ್ತಾ,.. ಪ್ರೇಕ್ಷಕರ ಕುತೂಹಲವನ್ನೂ ಕೆರಳಿಸುತ್ತ ಸಾಗುತ್ತದೆ. ಅಲ್ಲಿಂದಾಚೆಗೆ ಶಂಕರನ ಹಾಗೂ ಊರಿನ ಒಳಗೊರಗೆ ಏನಾಗುತ್ತದೆ ಎನ್ನುವುದೇ ಸಿನಿಮಾ.
ಸಾಮಾನ್ಯವಾಗಿ ಯಾವಾಗ ಮನೆಗೆ ಬರ್ತಿಯಪ್ಪ ಮಗನೇ ಅಂತಾ ತಂದೆ-ತಾಯಿ ಕಣ್ಣೀರು ಹಾಕೋದು ನೋಡಿರುವ ಪ್ರೇಕ್ಷಕರು, ನೀನು ಮನೆಯಿಂದ ಯಾವಾಗ ಹೋಗ್ತಿಯಪ್ಪ ಅಂತ ಕಣ್ಣೀರು ಹಾಕುತ್ತ ಕೈ ಮುಗಿದು ಕೇಳಿಕೊಳ್ಳುವುದನ್ನು ಈ ಸಿನಿಮಾದಲ್ಲಿ ನೋಡಬಹುದು. ನಿಜ ಜೀವನದಲ್ಲಿಯೂ ನಡೆಯಬಹುದಾದ ಕೆಲ ವಿಚಿತ್ರ ಘಟನೆಗಳು ಯಾರೊಬ್ಬರಿಗೂ ಹೇಳಿಕೊಳ್ಳಲಾಗದ, ಹೇಳಿಕೊಂಡರೂ ನಂಬಲಾಗದ ಸಂದಿಗ್ಧ ಸ್ಥಿತಿಗೆ ತಲುಪುವ ಮನುಷ್ಯನ ಪಾಡು, ಕಾಯಕವೇ ಕೈಲಾಸ ಎನ್ನುವ ತತ್ವ ಖುದ್ದು ಅಣ್ಣಾವ್ರೆ (ಡಾ. ರಾಜಕುಮಾರ್) ತೆರೆಗೆ ಬಂದು ಹೇಳುವಂತ ವಿಶೇಷ ದೃಶ್ಯವನ್ನೂ ಈ ಸಿನಿಮಾದಲ್ಲಿ ಕಾಣಬಹುದು.
ಕಾಕತಾಳಿಯವೋ, ವಿಧಿ ಲಿಖಿತವೊ, ಕೆಲ ಅಹಂಕಾರ ಪ್ರದರ್ಶನ ದೃಶ್ಯದಲ್ಲಿ ಪ್ರಸ್ತುತದಲ್ಲಿರುವ ಮನಸ್ಥಿತಿಯೊಂದರ ಪರಿಸ್ಥಿತಿಗೆ ಕೈಗನ್ನಡಿ ಅನ್ನಿಸಬಹುದು. ಅಣ್ಣಾವ್ರು ಅಭಿಮಾನಿಗಳನ್ನು ದೇವರು ಎಂದದ್ದು ಯಾಕೆ ಎನ್ನುವುದರ ಹಿಂದಿನ ಸತ್ಯವೂ ಈ ಚಿತ್ರದಲ್ಲಿ ಹೇಳಿರುವಂತೆಯೇ ಇರಬಹುದೇನೂ ಅನಿಸುತ್ತದೆ. ರಾವಣಾ ಕೃತಿಯನ್ನು ಬಹಿರಂಗವಾಗಿ ಒಪ್ಪದ ಒಬ್ಬ ಮನುಷ್ಯ ಅಂತರಂಗದಲ್ಲಿ ತನಗೆ ಗೊತ್ತಿಲ್ಲದಂತೆ ಅಪ್ಪಿಕೊಂಡಿರುತ್ತಾನೆ ಎನ್ನುವ ವಿಷಯ, ದುಡಿಮೆಯೇ ದೇವರು ಎನ್ನುವ ಬರಹದ ಅಡಿಯಲ್ಲಿ ಇಸ್ಪೀಟು ಆಡುವ ದೃಶ್ಯ ನೆನಪಿನಲ್ಲಿ ಉಳಿಯುತ್ತದೆ.
ನಿರ್ದೇಶಕನಾಗುವ ಕನಸು ಹೊತ್ತು ಚಿತ್ರರಂಗ ಪ್ರವೇಶಿಸಿ ಕೆಂಡಸಂಪಿಗೆ ಚಿತ್ರದ ಮೂಲಕ ನಟನಾಗಿ ಸೈ ಎನಿಸಿಕೊಂಡಿದ್ದ ವಿಕ್ಕಿವರುಣ್, ಈ ಚಿತ್ರದಲ್ಲಿ ನಿರ್ದೇಶಕನಾಗಿ ಸೈ ಎನಿಸಿಕೊಳ್ಳುವುದರ ಜತೆಗೆ ನಟನೆಯನ್ನೂ ನಿರ್ವಹಿಸಿರುವುದು ಪ್ರಶಂಸನೀಯ. ನಾಯಕಿಯಾಗಿ ಧನ್ಯ ರಾಮ್ ಕುಮಾರ್, ಊರ ಗೌಡನಾಗಿ ಟಿ.ಎಸ್. ನಾಗಾಭರಣ , ರಾಜಕಾರಣಿಯ ಪಾತ್ರದ ರಾಜೇಶ್ ನಟರಂಗ, ನಟನ ಅಪ್ಪನ ಪಾತ್ರದಲ್ಲಿ ಶಿವಪ್ರಸಾದ್ ಎಲ್ಲರೂ ಪಾತ್ರಗಳಿಗೆ ವಿಶೇಷ ಮೆರಗು ನೀಡಿದ್ದಾರೆ.
ಪ್ರೀತಿ-ಪ್ರೇಮ-ಪ್ರಣಯಕ್ಕೆ ಇನ್ನೂ ತುಸು ಜಾಗ ನೀಡಬೇಕಿತ್ತು ಅನಿಸಬಹುದು. ಆದರೆ ಸಿನಿಮಾದ ಮುಖ್ಯ ಕಥೆ ಅದಲ್ಲದೇ ಇರುವುದರಿಂದ ಈಗ ಎಷ್ಟು ಇದ್ಯೋ ಅಷ್ಟೇ ಚೆಂದ. ಇತ್ತ ಹಳೆ ಮೈಸೂರು ಅಲ್ಲ, ಅತ್ತ ಉತ್ತರ ಕರ್ನಾಟಕದ ಹಳ್ಳಿಯೂ ಅಲ್ಲ. ಅಂತಹದ್ದೇ ಯಾವುದೊ ಹಳ್ಳಿ ಎನ್ನಬಹುದಾದ ಒಂದು ಕಾಲ್ಪನಿಕ ಹಳ್ಳಿಯಲ್ಲಿ ನಡೆಯುವ ಕಥೆ ಎನ್ನುವಂತೆ ಡೈರೆಕ್ಟರ್ ಗಟ್ಟಿ ಮನಸ್ಸು ಮಾಡಿ ಒಂದು ಪ್ರಾದೇಶಿಕತೆಯೊಂದಿಗೆ ಹೆಣೆದಿದ್ದರೇ ಚಿತ್ರ ಇನ್ನೂ ಗಂಭೀರ ಆಗಬಹುದಿತ್ತೇನೊ. ಕೆಲವು ಕಡೆ ಕಲಾ ನಿರ್ದೇಶಕರೂ ಇನ್ನೂ ತುಸು ಶ್ರಮವಹಿಸಬೇಕಿತ್ತು ಅನಿಸಬಹುದು.
ಅನೂಪ್ ಸೀಳಿನ್ 2.0 ಸಂಗೀತ, ವಿ.ನಾಗೇಂದ್ರ ಪ್ರಸಾದ್ ಹಾಗು ಪ್ರಮೋದ್ ಮರವಂತೆ ಅವರ ಸಾಹಿತ್ಯ, ಸಂಭಾಷಣೆ, ಸತ್ಯಪ್ರಕಾಶ್ ಅವರ ಕತೆ ಎಲ್ಲವೂ ವಾವ್ ಎನಿಸುತ್ತದೆ. ಎಲ್ಲ ಕಲಾವಿದರೂ ಅಭಿನಯವೂ ಅಚ್ಚುಕಟ್ಟಾಗಿದೆ, ಛಾಯಾಗ್ರಹಣವು ಇಷ್ಟವಾಗುತ್ತದೆ. ವಿಷಯಗಳಿಗೆ ಪ್ರಮುಖ್ಯತೆ ಕೊಟ್ಟು ಕಟ್ಟಿರುವ ‘ಕಾಲಾಪತ್ಥರ್’ ಒಟ್ಟಾರೆಯಾಗಿ ಎಲ್ಲ ವರ್ಗದ ಪ್ರೇಕ್ಷಕರನ್ನು ರಂಜಿಸಬಹುದಾದ ಸಿನಿಮಾ ಎನ್ನಬಹುದು. ಯಾವುದೇ ನಿರೀಕ್ಷೆ ಇಲ್ಲದೆ ಚಿತ್ರಮಂದಿರಕ್ಕೆ ಭೇಟಿ ಕೊಟ್ಟರೆ ಕ್ಲಾಸ್ ಸಿನಿ ಪ್ರೇಮಿಗಳಿಗೂ ಇಲ್ಲಿರುವ ಮಾಸ್ ಕೂಡ ಇಷ್ಟವಾಗುತ್ತದೆ.