Site icon Vistara News

Kaatera Movie: ಅಂಬಾರಿ ಹೊತ್ತ ಆನೆ ಅರ್ಜುನನಿಗೆ ಗೌರವ ಸಲ್ಲಿಸಿದ ʼಕಾಟೇರʼ ಚಿತ್ರ; ಭಾವುಕ ಸಾಲಿನಲ್ಲೇನಿದೆ?

kaatera

kaatera

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Darshan) ಅಭಿಮಾನಿಗಳಿಗೆ ವರ್ಷಾಂತ್ಯದಲ್ಲಿ ಹಬ್ಬದ ವಾತಾವರಣ. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಪೈಕಿ ಒಂದಾದ ʼಕಾಟೇರʼ (Kaatera Movie) ಇಂದು (ಡಿಸೆಂಬರ್‌ 29) ತೆರೆಕಂಡಿದೆ. ರಾಜ್ಯಾದ್ಯಂತ ಈ ಸಿನಿಮಾಕ್ಕೆ ಭರ್ಜರಿ ಸ್ವಾಗತ ಸಿಕ್ಕಿದೆ. ಮೊದಲ ದಿನದ ಶೋ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದೆ. ಈ ಮಧ್ಯೆ ಸಿನಿಮಾ ತಂಡ ಇತ್ತೀಚೆಗಷ್ಟೇ ಕಾಡಾನೆ ದಾಳಿಯಿಂದ ಮೃತಪಟ್ಟ, 8 ಬಾರಿ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತ ಆನೆ ಅರ್ಜುನನಿಗೆ (Elephant Arjuna) ಬೆಳ್ಳಿ ಪರದೆಯ ಮೇಲೆ ಸಲ್ಲಿಸಿದೆ. ಇದರಿಂದ ಹಲವರು ಭಾವುಕರಾಗಿದ್ದಾರೆ.

ದೊಡ್ಡ ಪರದೆಯ ಮೇಲೆ ಬಂದ ಅರ್ಜುನನಿಗೆ ಗೌರವ ಸಲ್ಲಿಸುವ ಸಾಲುಗಳನ್ನು ಕಂಡ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರತಂಡ ಪರದೆಯ ಮೇಲೆ ದರ್ಶನ್ ಅವರು ಅರ್ಜುನನ ಪಕ್ಕ ನಿಂತಿರುವ ಫೋಟೊ ಹಾಕಿ, ಅದರ ಪಕ್ಕದಲ್ಲಿ, “ನಾಡ ದೇವಿ ಚಾಮುಂಡಿಯ ಅಂಬಾರಿಯನ್ನು ಹೊತ್ತು ದಸರೆಯ ವೈಭವವನ್ನು ಜಗತ್ತಿನಾದ್ಯಂತ ಕಣ್ತುಂಬಿಸಿ, ಕಣ್ಮರೆಯಾದ ದೈತ್ಯ ಮತ್ತು ದೈವ ಜೀವ ‘ಅರ್ಜುನ’. ಇದಕ್ಕೆ ನಮ್ಮ ಕಾಟೇರ ಚಿತ್ರ ಅರ್ಪಣೆ” ಎಂದು ಬರೆದುಕೊಂಡಿದೆ. ಆ ಮೂಲಕ ಹಲವರ ಮೆಚ್ಚುಗೆಗೆ ಪಾತ್ರವಾಗಿದ್ದ ಆನೆಗೆ ಗೌರವ ಸಲ್ಲಿಸಿದೆ. ದರ್ಶನ್‌ ಮೂಲತಃ ಪ್ರಾಣಿಪ್ರಿಯರು. ಇದೀಗ ಅವರ ಸಿನಿಮಾವನ್ನು ಅರ್ಜುನನಿಗೆ ಅರ್ಪಿಸಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ತರುಣ್ ಸುಧೀರ್​ ನಿರ್ದೇಶಿಸಿರುವ, ರಾಕ್​ಲೈನ್​ ವೆಂಕಟೇಶ್​ ನಿರ್ಮಾಣದ ‘ಕಾಟೇರ’ ಚಿತ್ರದ ಮೂಲಕ ಮಾಲಾಶ್ರೀ-ರಾಮು ದಂಪತಿ ಪುತ್ರಿ ಆರಾಧನಾ ರಾಮ್​ ಬಣ್ಣದ ಲೋಕಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಹಾಡು, ಟ್ರೈಲರ್‌ ಮೂಲಕ ಗಮನ ಸೆಳೆದಿರುವ ಅವರು ಉತ್ತಮ ನಾಯಕಿಯಾಗಿ ಬೆಳೆಯುವ ಭರವಸೆ ಮೂಡಿಸಿದ್ದಾರೆ. ಹಿರಿಯ ಕಲಾವಿದರಾದ ಶ್ರುತಿ, ಕುಮಾರ್‌ ಗೋವಿಂದ್‌ ಮತ್ತಿತರರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ: Kaatera Movie: ಪ್ರಿ ಬುಕ್ಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್‌; ಟಿಕೆಟ್‌ಗಳು ಸೂಪರ್‌ ಸೋಲ್ಡೌಟ್‌!

ಪುಂಡಾನೆಯ ಜತೆ ಕಾದಾಡಿ ಮಡಿದಿದ್ದ ಅರ್ಜುನ

ಕೆಲವು ದಿನಗಳ ಹಿಂದೆ ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ನಡೆದ ಆನೆ ಕಾರ್ಯಾಚರಣೆ ವೇಳೆ ಪುಂಡಾನೆಯ ಜತೆ ಕಾದಾಡಿ ಕ್ಯಾಪ್ಟನ್, ಸೀನಿಯರ್, ಬಲಭೀಮ ಎಂದೇ ಖ್ಯಾತವಾಗಿದ್ದ ಹಾಗೂ ಮೈಸೂರಿನ ಜಗದ್ವಿಖ್ಯಾತ ದಸರಾ ಜಂಬೂಸವಾರಿಯಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಮೃತಪಟ್ಟಿತ್ತು. ಕಾಡಾನೆ ಸೆರೆ ಕಾರ್ಯಾಚರಣೆಗೆ 64 ವರ್ಷದ ಅರ್ಜುನನನ್ನು ಬಳಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅರ್ಜುನನಿಗೆ ವಯಸ್ಸಾದ ಕಾರಣಕ್ಕೆ ಅರ್ಜುನನಿಗೆ ಅಂಬಾರಿ ಹೋರುವುದನ್ನೇ ನಿಲ್ಲಿಸಲಾಗಿದೆ. ಆದರೂ 64 ವರ್ಷದ ಅರ್ಜುನನ್ನು ಕಾಡಿನ ಪುಂಡಾನೆ ಸೆರೆ ಕಾರ್ಯಾಚರಣೆಗೆ ಬಳಿಸರುವುದು ಕಾನೂನು ಬಾಹಿರ ಎಂದು ಅರಣ್ಯಾಧಿಕಾರಿಗಳ ವಿರುದ್ಧ ವನ್ಯಜೀವಿ ತಜ್ಞರು ಅಸಮಾಧಾನ ಹೊರಹಾಕಿದ್ದರು. ಬಳಿಕ ಅರ್ಜುನನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಇದೀಗ ಸರ್ಕಾರ ಹಾಸನ ಮತ್ತು ಮೈಸೂರಿನಲ್ಲಿ ಅರ್ಜುನನಿಗೆ ಸ್ಮಾರಕ ನಿರ್ಮಿಸಲು ತೀರ್ಮಾನಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version