ಬೆಂಗಳೂರು: ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಪೈಕಿ ಒಂದಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ಕಾಟೇರ (Kaatera Movie) ಬಿಡುಗಡೆಯಾಗಿದೆ. ಅಭಿಮಾನಿಗಳು ಎರಡೂ ಕೈ ಚಾಚಿ ಈ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಮಾಸ್ ಅಂಶಗಳ ಜತೆಗೆ ಕಥೆಗೂ ಪ್ರಾಮುಖ್ಯತೆ ನೀಡಲಾಗಿದೆ ಎಂದು ಚಿತ್ರ ನೋಡಿದ ಹಲವರು ಅಭಿಪ್ರಾಯಪಟ್ಟಿದ್ದಾರೆ. ಸತ್ಯ ಘಟನೆ ಆಧಾರಿತ ಈ ಸಿನಿಮಾ ನೋಡಿ ಹಲವರು ಕಣ್ಣೀರು ಸುರಿಸಿದ್ದಾರೆ. ‘ಕಾಟೇರ’ ವೀಕ್ಷಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಭಾವುಕರಾಗಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿಜಯಲಕ್ಷ್ಮೀ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʼಈಗಷ್ಟೇ ʼಕಾಟೇರʼ ಸಿನಿಮಾ ನೋಡಿದೆ. ಇದೊಂದು ಅದ್ಭುತ ಅನುಭವ. ಹಲವು ದೃಶ್ಯಗಳನ್ನು ನೀರು ತುಂಬಿದ ಕಣ್ಣುಗಳಿಂದಲೇ ನೋಡಿದೆ. ದರ್ಶನ್ ಅವರ ಕಠಿಣ ಪರಿಶ್ರಮದ ಕುರಿತು ಹೆಮ್ಮೆಯಾಗುತ್ತಿದೆ. ಅವರ ಕಠಿಣ ಪರಿಶ್ರಮ ನನ್ನನ್ನು ಕಾಡಿದೆʼ ಎಂದು ವಿಜಯಲಕ್ಷ್ಮೀ ಬರೆದುಕೊಂಡಿದ್ದಾರೆ.
ಜತೆಗೆ ನಿರ್ದೇಶಕ ತರುಣ್ ಸುಧೀರ್ ಅವರನ್ನೂ ಹೊಗಳಿದ್ದಾರೆ. ʼತರುಣ್ ನಿಮ್ಮ ಈ ಸಿನಿಮಾದ ಕುರಿತು ಖಂಡಿತವಾಗಿಯೂ ಹೇಳಬೇಕಾದ ಮಾತಿದೆ. ʼಕಾಟೇರʼ ಇಲ್ಲಿಯವರೆಗಿನ ಸಿನಿಮಾಗಳಲ್ಲಿ ಅತ್ಯುತ್ತಮವಾದದ್ದು. ಖಂಡಿತವಾಗಿಯೂ ಕಾಟೇರ ಸಿನಿಮಾ ನನ್ನ ಅಚ್ಚುಮೆಚ್ಚಿನ ಸಿನಿಮಾವಾಗಿದೆ. ಎಲ್ಲ ದರ್ಶನ್ ಅಭಿಮಾನಿಗಳಿಗೆ ಕೇಳುವುದಿಷ್ಟೇ, ಈ ಮಾಸ್ಟರ್‌ಪೀಸ್ ಸಿನಿಮಾ ನೋಡಲು ಮರೆಯಬೇಡಿ. ಕಾಟೇರದ ತಂಡಕ್ಕೆ ಶುಭಹಾರೈಕೆಗಳುʼ ಎಂದು ವಿಜಯಲಕ್ಷ್ಮೀ ಹಾರೈಸಿದ್ದಾರೆ.
ಆರಾಧನಾ ರಾಮ್‌ಗೆ ವಿಜಯಲಕ್ಷ್ಮೀ ಬಗ್ಗೆ ಏನಂದ್ರು?
“ಕಾಟೇರʼ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ಆರಾಧನಾ ರಾಮ್‌ಗೆ ಶುಭಾಶಯಗಳು. ಜತೆಗೆ ಈ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿರುವ ನಮ್ಮ ಮನೆಯ ಹುಡುಗ ಚಂದು ಮತ್ತು ಸೂರಜ್‌ಗೆ ಶುಭ ಹಾರೈಕೆಗಳುʼ ಎಂದು ವಿಜಯಲಕ್ಷ್ಮೀ ಪೋಸ್ಟ್ ಮಾಡಿದ್ದಾರೆ.
ಆನ್‌ಲೈನ್ ಬುಕಿಂಗ್‌ನಲ್ಲೇ ಸಿನಿಮಾ 2.5 ಕೋಟಿ ರೂ.
ಕನ್ನಡದ ಸಿನಿಮಾ, ರೈತರ ಸಿನಿಮಾ ಎಂದೇ ಬಿಂಬಿತವಾಗಿರುವ ʼಕಾಟೇರ’ದಲ್ಲಿ ದರ್ಶನ್ ರಸ್ಟಿಕ್ ಲುಕ್ ಟ್ರೈಲರ್‌ನಲ್ಲಿ ಅಭಿಮಾನಿಗಳಿಗೆ ಹುಚ್ಚೆಬ್ಬಿಸಿತ್ತು. ವರ್ಷಾರಂಭದಲ್ಲಿ ತೆರೆಕಂಡ ʼಕ್ರಾಂತಿ’ ನಂತರ ʼಕಾಟೇರ’ನಾಗಿ ದರ್ಶನ್ ತೆರೆಗೆ ಬಂದಿದ್ದು, ಮೊದಲ ದಿನದ ಆನ್‌ಲೈನ್ ಬುಕಿಂಗ್‌ನಲ್ಲೇ ಸಿನಿಮಾ 2.5 ಕೋಟಿ ರೂ. ಬಾಚಿಕೊಂಡಿದೆ.
ಇದನ್ನೂ ಓದಿ: Kaatera Movie: ಕುರಿಗಾಹಿಗೆ ದರ್ಶನ್ ಮಾಡಿರುವ ಸಹಾಯ ನೋಡಿ ಹೆಮ್ಮೆಯಾಯ್ತು; ಕುಮಾರ್ ಗೋವಿಂದ್!
ಪ್ರದರ್ಶನ ಬುಕಿಂಗ್‌ನಲ್ಲೂ ʼಕಾಟೇರʼ ದಾಖಲೆ ಬರೆದಿದೆ. 389 ಏಕ ಪರದೆ, 72 ಮಲ್ಟಿಪ್ಲೆಕ್ಸ್‌ಗಳಿಂದ ಇಂದು (ಡಿಸೆಂಬರ್ 29) 1,670 ಶೋಗಳು ನಿಗದಿಯಾಗಿವೆ. ರಾಜ್ಯಾದ್ಯಂತ ದರ್ಶನ್ ಅವರ 158 ಮೆಗಾ ಕಟೌಟ್‌ಗಳನ್ನು ಹಾಕಲಾಗಿದೆ. 21 ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿ ಶೋಗಳು ಆರಂಭವಾಗಿವೆ. 43 ಥಿಯೇಟರ್‌ಗಳಲ್ಲಿ ಬೆಳಗ್ಗೆ 3 ಗಂಟೆಗೆ, 77 ಕಡೆ ಬೆಳಗಿನ ಜಾವ 4ಕ್ಕೆ, ಬೆಳಗ್ಗೆ 5ಕ್ಕೆ 89 ಹಾಗೂ 105 ಚಿತ್ರಮಂದಿರಗಳಲ್ಲಿ 6 ಗಂಟೆಗೆ ಶೋ ಆರಂಭವಾಗಿದೆ. ಸೂರ್ಯ ಮೂಡುವ ಮುನ್ನವೇ ʼಕಾಟೇರʼ ಸಿನಿಮಾದ 335 ಶೋಗಳು ಆರಂಭವಾಗಿದ್ದು, ಇದು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ