Site icon Vistara News

Kaatera Review: ಕಮರ್ಷಿಯಲ್ ಚೌಕಟ್ಟಿನ ನಡುವೆಯೂ ಉತ್ತಮ ಸಂದೇಶಗಳ ಹೂರಣ

Kaatera darshan

ಶಿವರಾಜ್‌ ಡಿ.ಎನ್. ಎಸ್.‌

ಕಮರ್ಷಿಯಲ್ ಚೌಕಟ್ಟಿನ ನಡುವೆಯೂ ಉತ್ತಮ ಕತೆ, ಸಂಭಾಷಣೆ, ತರ್ಕಬದ್ಧ ಹೊಡೆದಾಟದೊಂದಿಗೆ ಅತ್ಯುತ್ತಮ ಸಂದೇಶಗಳನ್ನ ಪ್ರೇಕ್ಷಕರಿಗೆ ದಾಟಿಸಲು ಯತ್ನಿಸಿದ ಚಿತ್ರ ‘ಕಾಟೇರ’. ಮಾಸ್ತಿಯವರ ಸಂಭಾಷಣೆಯೇ ಈ ಸಿನಿಮಾದ ಆಸ್ತಿ ಅನ್ನಬಹುದು. ಕಾಟೇರಮ್ಮನಿಗೆ ನೂರ ಏಳು + ಒಂದು ಬರೋಬ್ಬರಿ ನರ ಬಲಿ ಅಲ್ಲ, ನರರಾಕ್ಷಸರನ್ನು ಬಲಿಕೊಟ್ಟು ತಮ್ಮ ಫ್ಯಾನ್ ಗಳಿಗೆ ಹೊಸವರ್ಷಕ್ಕೆ ಭರ್ಜರಿ ಸಿನಿಮಾ ಕೊಟ್ಟಿದ್ದಾರೆ ಚಾಲೇಂಜಿಂಗ್ ಸ್ಟಾರ್ ದರ್ಶನ್.

ಉಳುವವನೇ ಭೂಮಿ ಒಡೆಯ ಕಾಯ್ದೆ ಜಾರಿಯಾಗುವ ಹಿಂದಿನ ಮತ್ತು ನಂತರದ ದಿನಗಳಲ್ಲಿ ನಡೆದ ರೈತರ ಹೋರಾಟ, ಜಾತೀಯತೆ ಪಿಡುಗು, ಮರ್ಯಾದೆ ಹತ್ಯೆ, ಉಳ್ಳವರ ದರ್ಪ, ಸದ್ಯದ ಸಮಾಜದಲ್ಲಿ ಇನ್ನೂ ಅಲ್ಲಿ ಇಲ್ಲಿ ಅಳಿಯದೆ ಉಳಿದುಕೊಂಡಿರುವಂತಹ ಅನೇಕ ದೌರ್ಜನ್ಯದ ವಿರುದ್ಧ ಭೀಮನಹಳ್ಳಿಯ ಭೀಮನಂತ ಶೂರ ಕಾಟೇರ ಹೇಗೆ ಹೋರಾಡುತ್ತಾನೆ ಅನ್ನೋದೇ ಮೇಲ್ನೋಟದ ಸಿನಿಮಾವಾದರೂ ಉಚ್ಚಳ್ಳು, ಎಳ್ಳು ರಾಗಿ, ಉಳ್ಳಿ, ಮೆಣಸಿ ಅಂತಾ ಆ ಕಾಲದಿಂದ ಉತ್ತು ಬಿತ್ತು, ಗೇಣಿ, ಸುಂಕ, ಜೀತ ಬಾಧೆನೆಲ್ಲ ದಾಟಿ ತಾತನ ಕಾಲದಿಂದ ಉಳಿಸಿಕೊಂಡು ಬಂದಿರೊ ಬಡವರ ಮನೆಯ ಅಷ್ಟೊ ಇಷ್ಟೊ ಹೊಲಗದ್ದೆಗಳ ಇತಿಹಾಸ ನೆನಪಿಸುವಂತ ಸಿನಿಮಾ.

ಕುಡುಗೋಲು, ಮಚ್ಚು ತಟ್ಟುತ್ತಲೇ ಭಾವನಾತ್ಮಕ ದೃಶ್ಯಗಳಲ್ಲಿ ಹೃದಯ ಮುಟ್ಟುತ್ತಾನೆ ಕಾಟೇರ. ಅಕ್ಕನ ಕೆಣಕಿದಾಗ ಕೆರಳುವ ಪ್ರೀತಿಯ ತಮ್ಮ, ಹಣೆಗೆ ಮುತ್ತಿಡುವ ಪ್ರಿಯತಮ, ಊರನ್ನ ಊರ ಜನರನ್ನ ಕಾಯೋ ಭೀಮನಾಗಿ ಅಭಿಮಾನಿಗಳ ಎದೆಯಲ್ಲಿ ಹಚ್ಚೆ ಚುಚ್ಚಿದ್ದಾನೆ ಕಾಟೇರ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದಲ್ಲಿ ಕಾಣಿಸಿಕೊಂಡಿರುವ ಎರಡೂ ಶೇಡಿನಲ್ಲೂ ಅದ್ಭುತವಾಗಿ ಅಭಿನಯಿಸಿದ್ದಾರೆ. ಆರಾಧನಾ ಅವರು ಅಭಿನಯಲ್ಲಿ ತಮ್ಮ ಅತ್ಯುತ್ತಮ ಪ್ರಯತ್ನವನ್ನ ಸಾಬೀತುಪಡಿಸಿರುವುದು ಅವರ ಪರಿಶ್ರಮವಾದರೆ ಇಂತಹ ಪಾತ್ರ ಮೊದಲ ಚಿತ್ರದಲ್ಲೇ ಸಿಕ್ಕಿರುವುದು ಅವರ ಅದೃಷ್ಟ ಅನ್ನಬಹುದು. ಉಳಿದೆಲ್ಲ ಪಾತ್ರ ವರ್ಗವೂ ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದೆ. ಬೀರಾದಾರ್ ಮತ್ತು ಮಾಸ್ಟರ್ ರೋಹಿತ್ ನಗಿಸುತ್ತಲೆ ಕಣ್ತುಂಬಿಸಿ ಮನ ತುಂಬಿಕೊಳ್ಳುತ್ತಾರೆ.

ಇದನ್ನೂ ಓದಿ: Kaatera Movie: ಅಕುಲ್ ಕಂಡಾಗ ಅನುಶ್ರೀಗೆ ಆಗೈತಂತೆ ಶ್ಯಾನೆ ಪಿರೂತಿ!

ರಿವರ್ಸ್ ಪ್ಲೇನೊಂದಿಗೆ ಸಾಗುವ ಜಿಗ್ ಜಾಗ್ ಚಿತ್ರಕತೆ, ತರುಣ್ ಸುಧೀರ್ ಹಾಗೂ ಜಡೇಶ್ ಅವರು ಬರೆದಿರುವಂತ ಕಥೆ ಇಷ್ಟವಾಗುತ್ತದೆ. ಹತ್ತಾರು ಪಾತ್ರಗಳು ವಿಷಯಗಳೂ ಸಿನಿಮಾದುದ್ದ ಇದ್ದರೂ ಯಾವುದೂ ತುರುಕಿದ್ದಾರೆ ಅನಿಸದಂತೆ ತರ್ಕಬದ್ಧವಾಗಿ ಕತೆ ಹೆಣೆದಿದ್ದಾರೆ. ಹರಿಕೃಷ್ಣರವರ ಸಂಗೀತವೂ ಸೊಗಸಾಗಿದ್ದು, ನೋಡ್ತಾ ನೋಡ್ತ ಆಗೋಗಯ್ತೆ ಸ್ಯಾನೆ ಪಿರುತಿ ಖಂಡಿತ ತೆರೆಮೇಲೆ ನೋಡ್ತಾ ನೋಡ್ತಾನೆ ಇಷ್ಟವಾಗುತ್ತದೆ. ಇನ್ನು ಸಂಭಾಷಣೆ ನಿಜಕ್ಕೂ ಈ ಚಿತ್ರದ ಜೀವಾಳ. ಅದರಲ್ಲೂ ಕೊನೆಯ ಒಂದು ದೃಶ್ಯದ ಸಂಭಾಷಣೆ, ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಲ್ಲ, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎನ್ನುವ ಕುವೆಂಪು ಅವರ ಜಾತ್ಯತೀತ ಪರಿಕಲ್ಪನೆ ವಿಶ್ವಮಾನವ ಸಂದೇಶವನ್ನ ಸಾರುತ್ತದೆ. ಕೈಮುಗಿದು ಹೇಳುವ ಆ ದೃಶ್ಯ ಕೈಕಾಲು ಮುರಿಯುವಂತ ಹೊಡೆದಾಟದ ದೃಶ್ಯಕ್ಕೆ ಸಮಾ ಎನ್ನಬಹುದು.
ಮಾತುಗಳು ಸಿನಿಮಾದ ವಿಷಯ ಬಿಟ್ಟು ಹೊರಗೆಲ್ಲೂ ಜಗ್ಗಿಲ್ಲ. ಸಿನಿಮಾದ ವಿಷಯವೂ ಅಷ್ಟೆ, ಕಾಟೇರನ ಪ್ರೀತಿ ಪ್ರೇಮ ವಾತ್ಸಲ್ಯ ಎಲ್ಲವೂ ಅಡಕವಾಗಿದ್ದೂ ರೈತರ ಹೊಲ, ಕಾಟೇರನ ಬಲ ಮತ್ತು ಛಲದಿಂದಾಚೆ ಎಲ್ಲೂ ಹೋಗಿಲ್ಲ. ಆಕ್ಸನ್‌ ಸೀನ್‌ ಬಗ್ಗೆ ಹೇಳುವುದಾದರೆ ಅಷ್ಟು ಬೇಕಿರಲಿಲ್ಲ ಅನಿಸಿದರೂ ಕೈಗೆ ಕೊಳ ಹಾಕಿದ್ದಾಗ ನಡೆಯುವ ಹೊಡೆದಾಟದ ದೃಶ್ಯ ವಾವ್ ಎನ್ನುವಂತಿದೆ.

ಇದನ್ನೂ ಓದಿ: Kaatera Movie: ʼಕಾಟೇರʼ ಚಿತ್ರ ನೋಡಿ ದರ್ಶನ್‌ ಪತ್ನಿ ಹೇಳಿದ್ದೇನು?

ಚಿತ್ರಕ್ಕೆ ಆಯ್ಕೆಯಾಗಿರುವ ವಿಷಯ ಅದ್ಭುತ. ಆದರೆ ಕೇವಲ ಬೋರ್ಡಿನಲ್ಲಷ್ಟೆ ಕಾಣುವ ಚಾಮರಾಜನಗರ ಮಾತಿನ ಭಾಷೆಯಲ್ಲೂ ಇದ್ದರೆ ಇನ್ನೂ ಚೆಂದವೆನಿಸಬಹುದಿತ್ತು. ಚಿತ್ರದಲ್ಲಿ ಚಾಮರಾಜನಗರದ ಜನಪದ ಮಹಾಕಾವ್ಯಗಳಲ್ಲಿ ಕಾಣುವ ಮಹದೇಶ್ವರ, ಮಂಟೆಸ್ವಾಮಿ, ಬಿಳಿಗಿರಿರಂಗಪ್ಪ ಯಾರೂ ಕಾಣದಿರುವುದು ವಿಪರ್ಯಾಸ. ಹೋಗಲಿ ಹೇಗಿದ್ದರೂ ಇರುವ ಕಾಟೇರಮ್ಮನನ್ನ ಕೋಣ ಕಡಿಯುತ್ತಿದ್ದ ಕೊತ್ತನೂರು ತೆಳ್ಳನೂರಿನ ಮಾರಮ್ಮನಿಗೊ ಹನೂರ್ ಮಾರಮ್ಮನಿಗೊ ಕನೆಕ್ಟ್ ಮಾಡಿದ್ದರಂತೂ ಇದೊಂದು ಅಮೋಘ ಅನ್ನುವಂತಾಗಬಹುದಿತ್ತೇನೊ!
ಅಂಬಾರಿ ಆನೆ ಅರ್ಜುನನಿಗೆ ಸಿನಿಮಾ ಅರ್ಪಣೆಯಾಗಿರುವ ‘ಕಾಟೇರ’ ಸಿನಿಮಾ ತನ್ನ ಗಟ್ಟಿತನದಿಂದ ಗಮನ ಸೆಳೆಯುತ್ತದೆ.

Exit mobile version