ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ಮತ್ತು ಶ್ರಿಯಾ ಶರಣ್ ಅಭಿನಯದ ಕಬ್ಜ ಸಿನಿಮಾ (Kabzaa Movie) ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾಗಿದೆ. ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಗೊಂಡಿದೆ. ಮೊದಲ ದಿನ ವಿಶ್ವಾದ್ಯಂತ 54 ಕೋಟಿ ರೂ. ಗಳಿಕೆ ಮಾಡಿದೆ ಎಂದು ಕನ್ನಡದ ಹಲವು ಮಾಧ್ಯಮಗಳು ಚಿತ್ರತಂಡದ ಮೂಲವನ್ನು ಉಲ್ಲೇಖಿಸಿ ವರದಿ ಮಾಡಿದ್ದವು. ಆದರೆ ಕಬ್ಜ ಸಿನಿಮಾ ಮೊದಲ ದಿನ 10.35 ಕೋಟಿ ರೂ. ಗಳಿಸಿದೆ ಎಂದು ಡಿಎನ್‌ಎ (DNA) ವರದಿ ಮಾಡಿದೆ. ಈ ಚಿತ್ರದ ನಿಜವಾದ ಗಳಿಕೆ ಎಷ್ಟು ಎಂಬ ಚರ್ಚೆ ಶುರುವಾಗಿವೆ.
ಸೋಷಿಯಲ್ ಮೀಡಿಯಾ ಪ್ರಕಾರ ಮೊದಲ ದಿನ ಕಬ್ಜ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಡಿಎನ್‌ಎ ವರದಿಯಂತೆ ʻʻ Sacnilk ಒದಗಿಸಿದ ಮಾಹಿತಿಯ ಪ್ರಕಾರ, ಕಬ್ಜ ಎಲ್ಲಾ ಭಾಷೆಗಳಿಂದ 10.35 ಕೋಟಿ ರೂ. ಗಳಿಸಿದೆ. ವರದಿಯು ಭಾಷೆಗಳಿಗೆ ಅನುಗುಣವಾಗಿ ಡೇಟಾವನ್ನು ಡಿಕೋಡ್ ಮಾಡಿದೆ. ಕನ್ನಡ ಆವೃತ್ತಿ 8.20 ಕೋಟಿ ರೂ. ಗಳಿಸಿದ್ದರೆ, ತೆಲುಗು 1.20 ಕೋಟಿ ರೂ. ಹಿಂದಿ ಆವೃತ್ತಿ ಕೇವಲ 7 ಲಕ್ಷ ರೂ ಕಲೆಕ್ಷನ್ ಮಾಡಿದೆ. ಮಲಯಾಳಂ ಆವೃತ್ತಿ ಕೇವಲ 1 ಲಕ್ಷ ಕಲೆಕ್ಷನ್ ಮಾಡಿದೆ. ಆಕ್ಯುಪೆನ್ಸಿಗೆ ಸಂಬಂಧಿಸಿದಂತೆ, ಕನ್ನಡ ಆವೃತ್ತಿಯು ಶುಕ್ರವಾರ 47% ಆಕ್ಯುಪೆನ್ಸಿಯನ್ನು ಕಂಡಿದೆʼʼ ಎಂದು ವರದಿ ಮಾಡಿದೆ.
ಇದು ಯಶ್ ಮತ್ತು ಪ್ರಶಾಂತ್ ನೀಲ್ ಅವರ ಕೆಜಿಎಫ್ ಸಿನಿಮಾದ ಕಾಪಿ ಎಂದು ಅನೇಕ ಸಿನಿ ಪ್ರೇಕ್ಷಕರು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಮೊದಲ ದಿನ 10.35 ಕೋಟಿ ರೂ. ಗಳಿಕೆ ಕಂಡಿರುವ ಮಾಹಿತಿಯನ್ನೂ ಎಕನಾಮಿಕ್ ಟೈಮ್ಸ್ ಕೂಡ ವರದಿ ಮಾಡಿದೆ. ನೆಟ್ಟಿಗರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಕಬ್ಜ ಕುರಿತಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Kabzaa Movie: ಎರಡನೇ ದಿನಕ್ಕೆ 100 ಕೋಟಿ ರೂ. ಕ್ಲಬ್ ಸೇರಿದ ಕಬ್ಜ!
ಚಿತ್ರತಂಡದ ಮಾಹಿತಿ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ ಪ್ರಕಾರ, ಕಬ್ಜ ಮೊದಲ ದಿನ ಕರ್ನಾಟಕದಲ್ಲಿ 26 ಕೋಟಿ ರೂ. ವಿಶ್ವಾದ್ಯಂತ 54 ಕೋಟಿ ರೂ. ಗಳಿಕೆ ಮಾಡಿದೆ. ಹಿಂದಿ ಭಾಷೆಯಲ್ಲಿ 12 ಕೋಟಿ ರೂ. ತೆಲುಗುವಿನಲ್ಲಿ 7 ಕೋಟಿ ರೂ. ತಮಿಳಿನಲ್ಲಿ 5 ಕೋಟಿ ರೂ. ಹಾಗೂ ಮಲಯಾಳಂನಲ್ಲಿ 3 ಕೋಟಿ ರೂ. ಕಲೆಕ್ಷನ್ ಮಾಡಿದೆ. ಎರಡನೇ ದಿನಕ್ಕೆ 100 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ, ಕಬ್ಜ ಸಿನಿಮಾ ಗಳಿಕೆ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಅಂಕಿ ಸಂಖ್ಯೆಗಳು ಒಂದಕ್ಕೊಂದು ತಾಳೆಯಾಗದೇ ಹಿನ್ನಲೆಯಲ್ಲಿ, ಅನುಮಾನಗಳು ಶುರುವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.
ಸಿನಿಮಾ ತಂಡ
ಕೆಜಿಎಫ್, ಕಾಂತಾರ ಸಿನಿಮಾಗಳಂತೆಯೇ ಕಬ್ಜ ಕೂಡ ನಿರೀಕ್ಷೆ ಹುಟ್ಟಿಸಿರುವ ಸಿನಿಮಾವಾಗಿದೆ. ಶ್ರೀಯಾ ಶರಣ್, ಕಬೀರ್ ದುಹಾನ್ ಸಿಂಗ್, ಪ್ರಮೋದ್ ಶೆಟ್ಟಿ, ನವಾಬ್ ಷಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ವಿತರಣಾ ಹಕ್ಕನ್ನು ಲೈಕಾ ಪ್ರೊಡಕ್ಷನ್ ಸಂಸ್ಥೆ ಹಲವಾರು ಕೋಟಿ ರೂ. ಕೊಟ್ಟು ಖರೀದಿಸಿದೆ. ‘ಕೆಜಿಎಫ್’ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಕೆಲಸ ಮಾಡಿದ್ದರೆ, ‘ಕೆಜಿಎಫ್’ ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.