ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಅಭಿನಯದ ಕಬ್ಜ ಸಿನಿಮಾ (Kabzaa Movie) ವಿಶ್ವಾದ್ಯಂತ ಮಾರ್ಚ್ 17ರಂದು ಬಿಡುಗಡೆಯಾಗಿದೆ. ಎರಡನೇ ದಿನವೂ ಅದ್ಧೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಇದೀಗ 100 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಮೊದಲ ದಿನವೇ ಸಿನಿಮಾ ಕರ್ನಾಟಕದಲ್ಲಿ 26 ಕೋಟಿ ರೂ. ವಿಶ್ವಾದ್ಯಂತ 54 ಕೋಟಿ ರೂ. ಗಳಿಕೆ ಮಾಡಿದೆ ಎಂದು ತಂಡ ಹೇಳಿಕೊಂಡಿದೆ. ಹಿಂದಿ ಭಾಷೆಯಲ್ಲಿ 12 ಕೋಟಿ ರೂ. ತೆಲುಗುವಿನಲ್ಲಿ 7 ಕೋಟಿ ರೂ. ತಮಿಳಿನಲ್ಲಿ 5 ಕೋಟಿ ರೂ. ಹಾಗೂ ಮಲಯಾಳಂನಲ್ಲಿ 3 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಅಧಿಕೃತವಾಗಿ ಹೇಳಿಕೊಂಡಿದೆ.
ಉಪೇಂದ್ರ ಅವರ ವೃತ್ತಿಜೀವನದ ಬಹುದೊಡ್ಡ ಸಿನಿಮಾವಾಗಿ ಈ ಚಿತ್ರ ಹೊರಹೊಮ್ಮಿದೆ. ಹೈ ಬಜೆಟ್‌ನಲ್ಲಿ ಸಿನಿಮಾ ಮೂಡಿಬಂದಿದೆ. ಮಾರ್ಚ್ 22 ಯುಗಾದಿ ಹಬ್ಬದ ಪ್ರಯುಕ್ತ ಸಿನಿರಸಿಕರು ಭಾರಿ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ. ಸಿನಿಮಾ ನೋಡಿ ಪರಭಾಷಾ ಸೆಲಬ್ರಿಟಿಗಳು ಹೊಗಳಿದ್ದಾರೆ. ತೆರೆ ಹಿಂದಿನ ತಂತ್ರಜ್ಞರ ಕೈಚಳಕ ಸೇರಿದಂತೆ ಹಲವು ಅಂಶಗಳಿಂದಾಗಿ ಈ ಸಿನಿಮಾ ವಿಶೇಷ ಎನಿಸಿಕೊಂಡಿದೆ. ಸಿನಿಮಾದ ಯಶಸ್ಸಿನ ಖುಷಿಯನ್ನು ಹಂಚಿಕೊಳ್ಳಲು ಮಾ.19 ಸಂಜೆ 4.30ಕ್ಕೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಕ್ಸಸ್ ಮೀಟ್ ಮಾಡಲಾಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಇದನ್ನೂ ಓದಿ: Kabzaa Movie: ಕಬ್ಜ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು?
ಕೆಜಿಎಫ್, ಕಾಂತಾರ ಸಿನಿಮಾಗಳಂತೆಯೇ ಕಬ್ಜ ಕೂಡ ನಿರೀಕ್ಷೆ ಹುಟ್ಟಿಸಿರುವ ಸಿನಿಮಾವಾಗಿದೆ. ಶ್ರೀಯಾ ಶರಣ್, ಕಬೀರ್ ದುಹಾನ್ ಸಿಂಗ್, ಪ್ರಮೋದ್ ಶೆಟ್ಟಿ, ನವಾಬ್ ಷಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ವಿತರಣಾ ಹಕ್ಕನ್ನು ಲೈಕಾ ಪ್ರೊಡಕ್ಷನ್ ಸಂಸ್ಥೆ ಹಲವಾರು ಕೋಟಿ ರೂ. ಕೊಟ್ಟು ಖರೀದಿಸಿದೆ. ‘ಕೆಜಿಎಫ್’ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಕೆಲಸ ಮಾಡಿದ್ದರೆ, ‘ಕೆಜಿಎಫ್’ ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.