ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ಯಾನ್ ಇಂಡಿಯಾ ಸಿನಿಮಾವಾದ ʼಕಬ್ಜʼ (Kabzaa Trailer) ಟ್ರೈಲರ್ ಮಾರ್ಚ್ 4ರಂದು ಬಿಡುಗಡೆಗೊಂಡಿದೆ. ನಟ ಅಮಿತಾಭ್ ಬಚ್ಚನ್ ಸಂಜೆ 5 ಗಂಟೆ 2 ನಿಮಿಷಕ್ಕೆ ಮುಂಬೈನಲ್ಲಿ ಕಬ್ಜ ಟ್ರೈಲರ್ ಬಿಡುಗಡೆಗೊಳಿಸಿದ್ದಾರೆ. ಇತ್ತೀಚೆಗೆ ಮೂರನೇ ಹಾಡನ್ನು ಅದ್ಧೂರಿಯಾಗಿ ಆಡಿಯೊ ಲಾಂಚ್ ಮಾಡಲಾಗಿದೆ.
ಚಿತ್ರದ ಕಥಾವಸ್ತುವನ್ನು ಟ್ರೈಲರ್‌ನಲ್ಲಿ ನಿಖರವಾಗಿ ಬಹಿರಂಗಪಡಿಸಲಾಗಿಲ್ಲ. 1940ರ ದಶಕದಲ್ಲಿ ಉಪೇಂದ್ರ ಪೊಲೀಸ್ ಅಧಿಕಾರಿ ಮತ್ತು ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರುವಂತೆ ಇದೆ. ಮತ್ತೊಂದೆಡೆ ಈ ಚಿತ್ರದಲ್ಲಿ ಬ್ರಿಟಿಷ್ ಕಾಲದ ಕಥೆ, ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ನಂತರದ ಕಥೆ ಇರುವ ಸುಳಿವನ್ನು ಟ್ರೈಲರ್ ನೀಡಿದೆ. ಕಿಚ್ಚ ಸುದೀಪ್ ಈ ಬಗ್ಗೆ ಮಾತನಾಡಿ ʻʻಒಳ್ಳೆಯ ಕಥೆಗಳ ಭಾಗವಾಗುವುದು ಅಪರೂಪ. ಅಂಡರ್‌ವರ್ಲ್ಡ್ ಕಥೆ ನಿಮ್ಮ ಗಮನವನ್ನು ಸೆಳೆಯುವಂತಿದೆ. ಚಿತ್ರದ ಕೊನೆಯವರೆಗೂ ನಿಮ್ಮನ್ನು ಹಿಡಿದಿಟ್ಟುಕೊಳ್ಳುವಲ್ಲಿ ಕಬ್ಜ ಹಿಂಜರಿಯದು ಎಂದು ನಾನು ಹೇಳಬಲ್ಲʼʼ ಎಂದರು. ನಟ ಮುರಳಿ ಶರ್ಮಾ, ತೆಲುಗಿನ ಹಿರಿಯ ನಟ ಕೋಟ ಶ್ರೀನಿವಾಸ ರಾವ್ ಇನ್ನೂ ಕೆಲವರನ್ನು ವಿಲನ್ ಪಾತ್ರದಲ್ಲಿ ತೋರಿಸಿದ್ದಾರೆ.
ಇದನ್ನೂ ಓದಿ: Kabzaa Movie: ʻಕಬ್ಜʼ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್: ಹೊಸ ಪೋಸ್ಟರ್ ಔಟ್!
ಚಿತ್ರಕ್ಕೆ ನಿರ್ದೇಶಕ ಆರ್.ಚಂದ್ರು ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಐಎಂಡಿಬಿ ಬಿಡುಗಡೆ ಮಾಡಿರುವ 2023ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಇರುವ ಕನ್ನಡದ ಏಕೈಕ ಸಿನಿಮಾ ಇದಾಗಿದೆ.
ಶ್ರೀ ಸಿದ್ಧೇಶ್ವರ ಎಂಟರ್‌ಪ್ರೈಸಸ್ ನಿರ್ಮಿಸಿರುವ ‘ಕಬ್ಜ’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಸಿನಿಮಾದಲ್ಲಿ ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದಾರೆ. ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದ ಕಲಾವಿದರು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ಕೆಜಿಎಫ್’ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಕೆಲಸ ಮಾಡಿದ್ದರೆ, ‘ಕೆಜಿಎಫ್’ ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.