ಇತ್ತೀಚೆಗೆ ತೆರೆಕಂಡ ‘ಲವ್ ಬರ್ಡ್ಸ್’ ಸಿನಿಮಾದ (Love Birds Kannada Movie) ನಿರ್ದೇಶಕ ಪಿ.ಸಿ.ಶೇಖರ್ ಮತ್ತು ನಿರ್ಮಾಪಕ ಕಡ್ಡಿಪುಡಿ ಚಂದ್ರು (Kaddipudi Chandru) ನಡುವಿನ ಹಣಕಾಸು ವ್ಯವಹಾರದ ಸಂಘರ್ಷ ಈಗಾಗಲೇ ಸದಾಶಿವ ನಗರದ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸಿನಿಮಾದಲ್ಲಿ 20 ಲಕ್ಷ ರೂಪಾಯಿಗೆ ಕೆಲಸ ಮಾಡಲು ಒಪ್ಪಂದವಾಗಿತ್ತು. ನಂತರ ಎಡಿಟಿಂಗ್ಗೆ ಜಾಸ್ತಿ ಖರ್ಚಾದ ಕಾರಣ ಹೆಚ್ಚುವರಿ 5 ಲಕ್ಷ ರೂಪಾಯಿ ನೀಡುವುದಾಗಿ ಚಂದ್ರು ಹೇಳಿದ್ದರು. ಆದರೆ ಪೂರ್ತಿ ಹಣ ಕೊಟ್ಟಿಲ್ಲ. ಕೇಳಿದ್ದಕ್ಕೆ ಬೆದರಿಕೆ ಹಾಕಿದ್ದಾರೆ. ನನಗೆ ಸಂಪೂರ್ಣ ಹಣ ಕೊಟ್ಟಿದ್ದಾಗಿ ದಾಖಲೆ ಮಾಡಿ, ನಕಲಿ ಸಹಿ ಹಾಕಿದ್ದಾರೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ಪ್ರಕರಣ ಸಂಬಂಧ ಈಗ ನಿರ್ಮಾಪಕ ಕಡ್ಡಿಪುಡಿ ಚಂದ್ರು ವಿಡಿಯೊ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ‘ಲವ್ ಬರ್ಡ್ಸ್ ಸಿನಿಮಾ ವಿಚಾರವಾಗಿ ನಿರ್ದೇಶಕ ಪಿ.ಸಿ.ಶೇಖರ್ ಅವರು ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರಿಗೆ ಎಷ್ಟು ಸಂಭಾವನೆ ಕೊಡುತ್ತೇನೆ ಎಂದು ನಾನು ಹೇಳಿದ್ದೆನೋ, ಅಷ್ಟೂ ನಾನು ಕೊಟ್ಟಿದೇನೆ. ಆದರೂ ಅವರು ಪೊಲೀಸರಿಗೆ ದೂರು ಕೊಟ್ಟಿರುವುದರಿಂದ ನಾನು ಈ ವಿಷಯವನ್ನು ನಮ್ಮ ನಿರ್ಮಾಪಕರ ಸಂಘಕ್ಕೆ ಮತ್ತು ಫಿಲ್ಮ್ ಚೇಂಬರ್ಗೆ ಹೇಳಿದ್ದೇನೆ. ಅಲ್ಲಿಯೂ ಚರ್ಚೆ ನಡೆಯುತ್ತಿದೆ. ಅವರೂ ಕೂಡ ಕೂಲಂಕಷವಾಗಿ ಪರಿಶೀಲನೆ ಮಾಡಿದ್ದಾರೆ. ಸೋಮವಾರ ಮಾಧ್ಯಮಗೋಷ್ಠಿ ಕರೆದು ಮಾತಾಡುತ್ತೇವೆ. ಪಿ.ಸಿ.ಶೇಖರ್ಗೆ ಮಾತ್ರವಲ್ಲ ಎಲ್ಲ ಕಲಾವಿದರಿಗೂ ಹಣ ಕೊಟ್ಟಿದ್ದೇನೆ. ಆದರೆ ಸಿನಿಮಾದ ಪ್ರಿಂಟ್ ಮತ್ತು ಪಬ್ಲಿಸಿಟಿ ಹಣವೂ ನನ್ನ ಕೈ ಸೇರಿಲ್ಲ. ನೋಡೋಣ, ಕಾನೂನು ಪ್ರಕಾರವೇ ಬಗೆಹರಿಸಿಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ನಿರ್ದೇಶಕ-ನಿರ್ಮಾಪಕರ ನಡುವೆ ಗಲಾಟೆ; ಕಡ್ಡಿಪುಡಿ ಚಂದ್ರು ವಿರುದ್ಧ ಪಿ.ಸಿ.ಶೇಖರ್ ಪೊಲೀಸರಿಗೆ ದೂರು
ಪಿಸಿ ಶೇಖರ್ ದೂರು ಏನು?
ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಿರ್ದೇಶನದ ಲವ್ ಬರ್ಡ್ಸ್ ಸಿನಿಮಾ ನಿರ್ದೇಶನ ಮಾಡಿದ ಪಿ.ಸಿ.ಶೇಖರ್ ಅವರು ‘ಮೊದಲಿಗೆ 20 ಲಕ್ಷ ರೂಪಾಯಿಗೆ ಸಿನಿಮಾ ನಿರ್ದೇಶನ ಮಾಡಲು ಒಪ್ಪಂದವಾಗಿತ್ತು. ಆದರೆ ಕಡ್ಡಿಪುಡಿ ಚಂದ್ರು ಅವರು ಸಿನಿಮಾ ಎಡಿಟಿಂಗ್ ಜವಾಬ್ದಾರಿಯನ್ನೂ ನನಗೆ ಕೊಟ್ಟರು ಮತ್ತು ಅದಕ್ಕಾಗಿ ಹೆಚ್ಚುವರಿ 5 ಲಕ್ಷ ಪಾವತಿಸುವುದಾಗಿ ತಿಳಿಸಿದ್ದರು. ಆದರೆ ಬಳಿಕ ಅವರು ನನಗೆ ಕೊಟ್ಟಿದ್ದು ಆರೂವರೆ ಲಕ್ಷ ರೂಪಾಯಿ ಮಾತ್ರ. ಇನ್ನೂ 18,50000 ರೂಪಾಯಿ ಕೊಡಲಿಲ್ಲ. ನಾನು ಅವರಿಗೆ ಕೇಳಿದರೂ ಒಪ್ಪಲಿಲ್ಲ. ನನಗೆ ಬೆದರಿಕೆ ಹಾಕಿದರು. ನನ್ನ ಕರೆಗಳನ್ನು ಸ್ವೀಕರಿಸುವುದನ್ನೇ ಬಿಟ್ಟರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಅಷ್ಟೇ ಅಲ್ಲ, ತಾವು ನಿರ್ದೇಶಕರಿಗೆ ಸಂಪೂರ್ಣ ಹಣ ಸಂದಾಯ ಮಾಡಿದ್ದಾಗಿ ದಾಖಲೆಯಲ್ಲಿ ಉಲ್ಲೇಖಿಸಿ, ನನ್ನ ಸಹಿಯನ್ನು ನಕಲಿ ಮಾಡಿ ಹಾಕಿ ವಾರ್ತಾ ಇಲಾಖೆಗೆ ಸಲ್ಲಿಸಿದ್ದಾರೆ ಎಂದೂ ಆರೋಪಿಸಿದ್ದಾರೆ.