Site icon Vistara News

Kalki 2898 AD: ʼಕಲ್ಕಿʼ ಚಿತ್ರಕ್ಕಾಗಿ ಕನ್ನಡದಲ್ಲಿ ಡಬ್‌ ಮಾಡಲಿದ್ದಾರೆ ದೀಪಿಕಾ ಪಡುಕೋಣೆ

Kalki 2898 AD

Kalki 2898 AD

ಮುಂಬೈ: ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಪೈಕಿ ʼಕಲ್ಕಿ 2898 ಎಡಿʼ (Kalki 2898 AD) ಕೂಡ ಒಂದು. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ಇದು ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನಿಸಿಕೊಂಡಿದೆ. ಟಾಲಿವುಡ್‌ ಸ್ಟಾರ್‌ ಪ್ರಭಾಸ್‌, ಬಾಲಿವುಡ್‌ ಬ್ಯೂಟಿ ದೀಪಿಕಾ ಪಡುಕೋಣೆ (Prabhas-Deepika Padukone) ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಸೈನ್ಸ್‌ ಫಿಕ್ಷನ್‌ ಈಗಾಗಲೇ ಕುತೂಹಲ ಮೂಡಿಸಿದೆ. ಇವರ ಜತೆಗೆ ಘಟಾನುಘಟಿ ಕಲಾವಿದರಾದ ಬಾಲಿವುಡ್‌ನ ಅಮಿತಾಭ್‌ ಬಚ್ಚನ್‌ (Amitabh Bachchanಮತ್ತು ಕಮಲ್‌ ಹಾಸನ್‌ (Kamal Haasan) ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಚಿತ್ರದ ಬಗ್ಗೆ ಮಹತ್ವದ ಅಪ್‌ಡೇಟ್‌ ಹೊರ ಬಿದ್ದಿದ್ದು, ಕನ್ನಡ ಅವತರಣಿಕೆಯಲ್ಲಿ ತಮ್ಮ ಪಾತ್ರಕ್ಕೆ ದೀಪಿಕಾ ಪಡುಕೋಣೆ ಸ್ವತಃ ಡಬ್‌ ಮಾಡಲಿದ್ದಾರೆ ಎನ್ನಲಾಗಿದೆ.

ವಿವಿಧ ಭಾಷೆಗಳಲ್ಲಿ ʼಕಲ್ಕಿ 2898 ಎಡಿʼ ಸಿನಿಮಾ ತೆರೆಗೆ ಬರಲಿದೆ. ಈ ಪೈಕಿ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತಮ್ಮ ಪಾತ್ರಕ್ಕೆ ಸ್ವತಃ ದೀಪಿಕಾ ಅವರೇ ಡಬ್‌ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 2006ರಲ್ಲಿ ತೆರೆಕಂಡ ಉಪೇಂದ್ರ ಅಭಿನಯದ ಕನ್ನಡದ ʼಐಶ್ವರ್ಯಾʼ ಚಿತ್ರದ ಮೂಲಕ ದೀಪಿಕಾ ಬಣ್ಣದ ಲೋಕ ಪ್ರವೇಶಿಸಿದ್ದರು. ಅದರ ಬಳಿಕ ಅವರು ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅವರು ಕನ್ನಡದಲ್ಲಢ ಡಬ್‌ ಮಾಡಿರುತ್ತಿರುವ ವಿಚಾರ ಕೇಳಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ.

ಜೂನ್‌ 27ರಂದು ಬಿಡುಗಡೆ

ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್‌ ಅಶ್ವಿನ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಬಹು ತಾರಾಗಣ ಹೊಂದಿರುವ ಚಿತ್ರ ಜೂನ್ 27ರಂದು ತೆರೆಗೆ ಬರಲಿದೆ. ಮೊದಲಿಗೆ ಮೇ 9ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಆದರೆ ಚುನಾವಣೆಯ ಕಾರಣ ಸಿನಿಮಾ ರಿಲೀಸ್‌ ಡೇಟ್‌ವನ್ನು ಮುಂದೂಡಲಾಗಿತ್ತು. ಸದ್ಯ ಚಿತ್ರೀಕರಣ ಪೂರ್ಣಗೊಳಿಸಿರುವ ತಂಡ ಪೋಸ್ಟ್‌ ಪ್ರೊಡಕ್ಷನ್‌ ಕಾರ್ಯದಲ್ಲಿ ನಿರತವಾಗಿದೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ ಮೊದಲೇ ಒಪ್ಪಂದ ಮಾಡಿಕೊಂಡಂತೆ ಈ ತಿಂಗಳಲ್ಲಿ ಪ್ರೊಮೊಷನ್‌ ನಡೆಸಿಕೊಂಡಲಿದ್ದಾರೆ. ಅದರ ಭಾಗವಾಗಿ ವಿವಿಧ ಮಾಧ್ಯಮಗಳು ಅವರ ಸಂದರ್ಶನವನ್ನು ಚಿತ್ರೀಕರಿಸಲು ತಯಾರಿ ನಡೆಸಿವೆ ಎನ್ನಲಾಗಿದೆ. ಇದರ ಜತೆಗೆ ಡಬ್ಬಿಂಗ್‌ ಅನ್ನೂ ಅವರು ಪೂರ್ಣಗೊಳಿಸಲಿದ್ದಾರೆ. ಸೆಪ್ಟಂಬರ್‌ನಲ್ಲಿ ಮಗು ಜನಿಸುವ ನಿರೀಕ್ಷೆ ಇದ್ದು, ಬಾಕಿ ಇರುವ ಸಿನಿಮಾ ಚಟುವಟಿಕೆಗಳನ್ನೆಲ್ಲ ನಡೆಸಿ ದೀಪಿಕಾ ಜೂನ್‌ ಬಳಿಕ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ.

ಅಶ್ವತ್ಥಾಮನಾಗಿ ಗಮನ ಸೆಳೆದ ಅಮಿತಾಭ್‌

ಸುಮಾರು 6,000 ವರ್ಷಗಳ ಕಥೆಯನ್ನು ತೆರೆ ಮೇಲೆ ಮೂಡಿಸಲಿರುವ ʼಕಲ್ಕಿ 2898 ಎಡಿʼ ಚಿತ್ರದಲ್ಲಿ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಅವರು ಅಶ್ವತ್ಥಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅವರ ಲುಕ್‌ ರಿಲೀಸ್‌ ಆಗಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ. ಏ. 21ರಂದು ಚಿತ್ರತಂಡ ಅಮಿತಾಭ್‌ ಅವರ ಪಾತ್ರವನ್ನು ರಿವೀಲ್‌ ಮಾಡಿದೆ. ಜತೆಗೆ ಶಿವರಾತ್ರಿಯಂದು ಪ್ರಭಾಸ್‌ ಅವರ ಫಸ್ಟ್‌ಲುಕ್‌ ಬಿಡುಗಡೆ ಮಾಡಲಾಗಿತ್ತು. ಇದು ಕೂಡ ಅಭಿಮಾನಿಗಳನ್ನು ಆಕರ್ಷಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: Kalki 2898 – AD: ʻಪ್ರಾಜೆಕ್ಟ್‌ ಕೆʼ ಸಿನಿಮಾ ಟೈಟಲ್‌ ರಿವೀಲ್‌; ಪ್ರಭಾಸ್‌, ದೀಪಿಕಾ, ಅಮಿತಾಭ್‌ ಲುಕ್‌ ಔಟ್‌!

ವೈಜಯಂತಿ ಮೂವೀಸ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಬಾಲಿವುಡ್‌ ನಟಿ ದಿಶಾ ಪಠಾಣಿ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ್ದ ನಾಗ್‌ ಅಶ್ವಿನ್‌, ʼʼಈ ಸಿನಿಮಾದ ಕಥೆ ಮಹಾಭಾರತದ ಕಾಲಘಟ್ಟಲ್ಲಿ ಆರಂಭವಾಗಿ ಕ್ರಿ.ಶ. 2898ರಲ್ಲಿ ಕೊನೆಗೊಳ್ಳಲಿದೆ. ಆ ಮೂಲಕ ಸುಮಾರು 6,000 ವರ್ಷಗಳ ಕಥೆಯನ್ನು ತೆರೆ ಮೇಲೆ ಮೂಡಿಸಲಿದ್ದೇವೆ. ಇದಕ್ಕಾಗಿ ಬಹಳಷ್ಟು ಶ್ರಮ ವಹಿಸಿದ್ದೇವೆʼʼ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು.

Exit mobile version