Site icon Vistara News

Kalki 2898 AD: ʼಕಲ್ಕಿʼ ಚಿತ್ರದಲ್ಲಿನ ಪಾತ್ರದ ಗುಟ್ಟು ರಟ್ಟು ಮಾಡಿದ ಕಮಲ್‌ ಹಾಸನ್‌; ಖಳನಾಯಕನಾಗಿ ಅಬ್ಬರಿಸುತ್ತಾರಾ ಉಲಗನಾಯಕನ್‌?

Kalki 2898 AD

Kalki 2898 AD

ಹೈದರಾಬಾದ್‌: ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ತೆಲುಗು ಚಿತ್ರ ʼಕಲ್ಕಿ 2898 ಎಡಿʼ (Kalki 2898 AD) ಸದ್ಯ ನಿರೀಕ್ಷೆ ಹುಟ್ಟು ಹಾಕಿದೆ. ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನ್ನುವ ಖ್ಯಾತಿ ಈ ಸಿನಿಮಾಕ್ಕಿದೆ. ಟಾಲಿವುಟ್‌ ಸ್ಟಾರ್‌ ಪ್ರಭಾಸ್‌, ಬಾಲಿವುಡ್‌ ಬ್ಯೂಟಿ ದೀಪಿಕಾ ಪಡುಕೋಣೆ (Prabhas-Deepika Padukone) ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಸೈನ್ಸ್‌ ಫಿಕ್ಷನ್‌ ಬಹು ತಾರಾಗಣದ ಮೂಲಕ ಕುತೂಹಲ ಕೆರಳಿಸಿದೆ. ವಿಶೇಷ ಎಂದರೆ ಘಟಾನುಘಟಿಗಳಾದ ಕಮಲ್‌ ಹಾಸನ್‌ (Kamal Haasan) ಮತ್ತು ಅಮಿತಾಭ್‌ ಬಚ್ಚನ್‌ (Amitabh Bachchan) ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಕಮಲ್‌ ಹಾಸನ್‌, ʼಕಲ್ಕಿ 2898 ಎಡಿʼ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿ ಗುಟ್ಟು ರಟ್ಟು ಮಾಡಿದ್ದಾರೆ.

ಕಮಲ್‌ ಹಾಸನ್‌ ಪಾತ್ರವೇನು?

ಭೂತ ಕಾಲ ಮತ್ತು ಭವಿಷ್ಯದ ಕಥೆ ಹೇಳಲಿರುವ ʼಕಲ್ಕಿ 2898 ಎಡಿʼ ಚಿತ್ರಕ್ಕೆ ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್‌ ಅಶ್ವಿನ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಹಿಂದೆ ಕಮಲ್‌ ಹಾಸನ್‌ ಈ ಸಿನಿಮಾದಲ್ಲಿ ಖಳ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಇದನ್ನು ಅವರು ನಿರಾಕರಿಸಿದ್ದಾರೆ. ʼʼಕಲ್ಕಿ 2898 ಎಡಿʼ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆʼʼ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿ ಅಭಿಮಾನಿಗಳ ಕುತೂಹಲ ತಣಿಸಿದ್ದಾರೆ. ಮೂಲಗಳ ಪ್ರಕಾರ, ಕಮಲ್ ಹಾಸನ್ ಚಿತ್ರದಲ್ಲಿ ಎರಡು ನಿಮಿಷಗಳ ಕಾಲ ಮಾತ್ರ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಸದ್ಯ ಚಿತ್ರದ ಚಿತ್ರೀಕರಣ ಪೂರ್ತಿಯಾಗಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ. ಆರಂಭದಲ್ಲಿ ಚಿತ್ರ ಮೇಯಲ್ಲಿ ತೆರೆಗೆ ಬರಲಿದೆ ಎನ್ನಲಾಗಿತ್ತು. ಸದ್ಯ ಎಲ್ಲ ಕೆಲಸ ಮುಗಿಯದ ಕಾರಣ ಸಿನಿಮಾ ಜುಲೈಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.

ಪೋಸ್ಟರ್‌ ರಿಲೀಸ್‌

ಮಹಾಶಿವ ರಾತ್ರಿ ಪ್ರಯುಕ್ತ ಚಿತ್ರತಂಡ ಹೊಸ ಪೋಸ್ಟರ್‌ ಬಿಡುಗಡೆ ಮಾಡಿತ್ತು. ಜತೆಗೆ ಪ್ರಭಾಸ್‌ ಪಾತ್ರದ ಪರಿಚಯ ಮಾಡಿಸಿತ್ತು. ಈ ಸಿನಿಮಾದಲ್ಲಿ ಪ್ರಭಾಸ್‌ ಭೈರವನಾಗಿ ಮಿಂಚಲಿದ್ದಾರೆ. ಸದ್ಯ ಈ ಪೋಸ್ಟರ್‌ ಮತ್ತು ಪ್ರಭಾಸ್‌ ಲುಕ್‌ ಗಮನ ಸೆಳೆದಿದೆ. ಪ್ರಭಾಸ್‌ನ ಹೊಸ ಅವತಾರಕ್ಕೆ ಅಭಿಮಾನಿಗಳು ಜೈ ಎಂದಿದ್ದಾರೆ. ʼಬಾಹುಬಲಿʼ ಚಿತ್ರದ ಬಳಿಕ ಪ್ರಭಾಸ್‌ ಮತ್ತೆ ಮಿಂಚುವುದು ಪಕ್ಕಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ʼಕಲ್ಕಿ 2898 ಎಡಿʼ ಈ ವರ್ಷದ ಅತೀ ಹೆಚ್ಚಿನ ಬಜೆಟ್‌ ಹೊಂದಿರುವ ಚಿತ್ರ ಎನಿಸಿಕೊಳ್ಳಲಿದೆ. ಈ ಚಿತ್ರದ ಬಜೆಟ್‌ ಬರೋಬ್ಬರಿ 600 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅಂದರೆ ಇತ್ತೀಚಿನ ಬಹು ಕೋಟಿ ರೂ. ಬಜೆಟ್‌ನ ʼಸಲಾರ್‌ʼ (270 ಕೋಟಿ ರೂ.), ʼಅನಿಮಲ್‌ʼ (100 ಕೋಟಿ ರೂ.) ಮತ್ತು ʼಡಂಕಿʼ (140 ಕೋಟಿ ರೂ.) ಈ ಮೂರು ಚಿತ್ರಗಳ ಒಟ್ಟು ಬಜೆಟ್‌ಗಿಂತ ಜಾಸ್ತಿ. ಅಲ್ಲದೆ 2022ರಲ್ಲಿ ತೆರೆಕಂಡ ಬಾಲಿವುಡ್‌ ಚಿತ್ರ ʼಬಹ್ಮಾಸ್ತ್ರʼಕ್ಕಿಂತಲೂ (400 ಕೋಟಿ ರೂ.) ʼಕಲ್ಕಿʼಯ ಬಜೆಟ್‌ ಅಧಿಕ. ಹೀಗಾಗಿಯೇ ಈ ಚಿತ್ರದ ಮೇಲೆ ನಿರೀಕ್ಷೆ ಗರಿಗೆದರಿದೆ.

ಇದು ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.  ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದು, ಡಿಜೋರ್ಜೆ ಸ್ಟೋಜಿಲ್ಕೋವಿಕ್ ಅವರ ಛಾಯಾಗ್ರಹಣ, ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನ ಸಿನಿಮಾಕ್ಕಿದೆ.

ಇದನ್ನೂ ಓದಿ: Kalki 2898 – AD: ʻಪ್ರಾಜೆಕ್ಟ್‌ ಕೆʼ ಸಿನಿಮಾ ಟೈಟಲ್‌ ರಿವೀಲ್‌; ಪ್ರಭಾಸ್‌, ದೀಪಿಕಾ, ಅಮಿತಾಭ್‌ ಲುಕ್‌ ಔಟ್‌!

ಏತನ್ಮಧ್ಯೆ, ಕಮಲ್ ಹಾಸನ್ ಅವರು ಶಂಕರ್ ಷಣ್ಮುಗಂ ಅವರೊಂದಿಗೆ ಇಂಡಿಯನ್ 2 ಬಹುನಿರೀಕ್ಷಿತ ಸೀಕ್ವೆಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜತೆಗೆ ಇಂಡಿಯನ್ 3 ಸಿನಿಮಾದ ಚಿತ್ರೀಕರಣವೂ ಮುಗಿದಿದೆ ಎಂದು ವರದಿಯೊಂದು ತಿಳಿಸಿದೆ. ಸದ್ಯ ‘ಇಂಡಿಯನ್ 2’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಇದು ಪೂರ್ಣಗೊಂಡ ಬಳಿಕ ‘ಇಂಡಿಯನ್ 3’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version