ಹೈದರಾಬಾದ್: ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ತೆಲುಗು ಚಿತ್ರ ʼಕಲ್ಕಿ 2898 ಎಡಿʼ (Kalki 2898 AD) ಸದ್ಯ ನಿರೀಕ್ಷೆ ಹುಟ್ಟು ಹಾಕಿದೆ. ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನ್ನುವ ಖ್ಯಾತಿ ಈ ಸಿನಿಮಾಕ್ಕಿದೆ. ಟಾಲಿವುಟ್ ಸ್ಟಾರ್ ಪ್ರಭಾಸ್, ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ (Prabhas-Deepika Padukone) ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಸೈನ್ಸ್ ಫಿಕ್ಷನ್ ಈಗಾಗಲೇ ಕುತೂಹಲ ಮೂಡಿಸಿದೆ. ಇದೀಗ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು ಪ್ರಭಾಸ್ ಪಾತ್ರದ ಹೆಸರು ರಿವೀಲ್ ಆಗಿದೆ.
ಭೈರವನಾಗಿ ಪ್ರಭಾಸ್
ಭೂತ ಮತ್ತು ಭವಿಷ್ಯದ ಕಥೆ ಹೇಳಲಿರುವ ʼಕಲ್ಕಿ 2898 ಎಡಿʼ ಚಿತ್ರಕ್ಕೆ ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮಹಾಶಿವ ರಾತ್ರಿ ಪ್ರಯುಕ್ತ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಜತೆಗೆ ಪ್ರಭಾಸ್ ಪಾತ್ರದ ಪರಿಚಯ ಮಾಡಿಸಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಭೈರವನಾಗಿ ಮಿಂಚಲಿದ್ದಾರೆ. ಸದ್ಯ ಈ ಪೋಸ್ಟರ್ ಮತ್ತು ಪ್ರಭಾಸ್ ಲುಕ್ ಗಮನ ಸೆಳೆದಿದೆ. ಪ್ರಭಾಸ್‌ನ ಹೊಸ ಅವತಾರಕ್ಕೆ ಅಭಿಮಾನಿಗಳು ಜೈ ಎಂದಿದ್ದಾರೆ. ʼಬಾಹುಬಲಿʼ ಚಿತ್ರದ ಬಳಿಕ ಪ್ರಭಾಸ್ ಮತ್ತೆ ಮಿಂಚುವುದು ಪಕ್ಕಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
From the future streets of Kasi, Introducing 'BHAIRAVA' from #Kalki2898AD.#Prabhas #Kalki2898ADonMay9 @SrBachchan @ikamalhaasan @deepikapadukone @nagashwin7 @DishPatani @Music_Santhosh @VyjayanthiFilms @Kalki2898AD pic.twitter.com/GzJyO3V5iQ
— Kalki 2898 AD (@Kalki2898AD) March 8, 2024
ಕುತೂಹಲ ಕೆರಳಿಸಿದ ಕಥೆ
ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ್ದ ನಾಗ್ ಚೈತ್ಯನ್ಯ, ʼʼಈ ಸಿನಿಮಾದ ಕಥೆ ಮಹಾಭಾರತದ ಕಾಲಘಟ್ಟಲ್ಲಿ ಆರಂಭವಾಗಿ ಕ್ರಿ.ಶ. 2898ರಲ್ಲಿ ಕೊನೆಗೊಳ್ಳಲಿದೆ. ಆ ಮೂಲಕ ಸುಮಾರು 6,000 ವರ್ಷಗಳ ಕಥೆಯನ್ನು ತೆರೆ ಮೇಲೆ ಮೂಡಿಸಲಿದ್ದೇವೆ. ಇದಕ್ಕಾಗಿ ಬಹಳಷ್ಟು ಶ್ರಮ ವಹಿಸಿದ್ದೇವೆʼʼ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು.
ಇನ್ನೊಂದು ವಿಶೇಷ ಎಂದರೆ ಈ ಚಿತ್ರದಲ್ಲಿನ ತಾರಾಗಣ. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಜತೆಗೆ ಘಟಾನುಘಟಿಗಳಾದ ಕಮಲ್ ಹಾಸನ್ ಮತ್ತು ಅಮಿತಾಭ್ ಬಚ್ಚನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟಿ ದಿಶಾ ಪಠಾಣಿ ಕೂಡ ಅಭಿನಯಿಸುತ್ತಿದ್ದಾರೆ.
ಬಜೆಟ್ ಎಷ್ಟು?
ʼಕಲ್ಕಿ 2898 ಎಡಿʼ ಈ ವರ್ಷದ ಅತೀ ಹೆಚ್ಚಿನ ಬಜೆಟ್ ಹೊಂದಿರುವ ಚಿತ್ರ ಎನಿಸಿಕೊಳ್ಳಲಿದೆ. ಈ ಚಿತ್ರದ ಬಜೆಟ್ ಬರೋಬ್ಬರಿ 600 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅಂದರೆ ಇತ್ತೀಚಿನ ಬಹು ಕೋಟಿ ರೂ. ಬಜೆಟ್‌ನ ʼಸಲಾರ್ʼ (270 ಕೋಟಿ ರೂ.), ʼಅನಿಮಲ್ʼ (100 ಕೋಟಿ ರೂ.) ಮತ್ತು ʼಡಂಕಿʼ (140 ಕೋಟಿ ರೂ.) ಈ ಮೂರು ಚಿತ್ರಗಳ ಒಟ್ಟು ಬಜೆಟ್‌ಗಿಂತ ಜಾಸ್ತಿ. ಅಲ್ಲದೆ 2022ರಲ್ಲಿ ತೆರೆಕಂಡ ಬಾಲಿವುಡ್ ಚಿತ್ರ ʼಬಹ್ಮಾಸ್ತ್ರʼಕ್ಕಿಂತಲೂ (400 ಕೋಟಿ ರೂ.) ʼಕಲ್ಕಿʼಯ ಬಜೆಟ್ ಅಧಿಕ. ಹೀಗಾಗಿಯೇ ಈ ಚಿತ್ರದ ಮೇಲೆ ನಿರೀಕ್ಷೆ ಗರಿಗೆದರಿದೆ.
ಇದನ್ನೂ ಓದಿ: Kalki 2898 – AD: ʻಪ್ರಾಜೆಕ್ಟ್ ಕೆʼ ಸಿನಿಮಾ ಟೈಟಲ್ ರಿವೀಲ್; ಪ್ರಭಾಸ್, ದೀಪಿಕಾ, ಅಮಿತಾಭ್ ಲುಕ್ ಔಟ್!
ಯಾವಾಗ ಬಿಡುಗಡೆ?
2024ರ ಮೇ 9ರಂದು ಈ ಚಿತ್ರ ತೆರೆ ಕಾಣಲಿದೆ. ಇದು ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದು, ಡಿಜೋರ್ಜೆ ಸ್ಟೋಜಿಲ್ಕೋವಿಕ್ ಅವರ ಛಾಯಾಗ್ರಹಣ, ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನ ಸಿನಿಮಾಕ್ಕಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ