Site icon Vistara News

Kalki 2898 AD: ʼಕಲ್ಕಿʼ ಕಲಾವಿದರಿಗೆ ದುಬಾರಿ ಸಂಭಾವನೆ: ಪ್ರಭಾಸ್‌ಗೆ 80 ಕೋಟಿ ರೂ.; ದೀಪಿಕಾ, ಬಿಗ್‌ಬಿ, ಕಮಲ್‌ಗೆ ಸಿಕ್ಕಿದ್ದೆಷ್ಟು?

Kalki 2898 AD

Kalki 2898 AD

ಮುಂಬೈ: ಈ ವರ್ಷದ ಬಹು ನಿರೀಕ್ಷಿತ, ಅತ್ಯಂತ ದುಬಾರಿ ಚಿತ್ರ ಎನ್ನುವ ಖ್ಯಾತಿಯ ʼಕಲ್ಕಿ 2898 ಎಡಿʼ (Kalki 2898 AD) ವಿವಿಧ ಭಾಷೆಗಳಲ್ಲಿ ಇಂದು (ಜೂನ್‌ 27) ವಿಶ್ವಾದ್ಯಂತ ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ವಿಷುವಲ್ಸ್‌, ಕಥೆ, ನಿರ್ದೇಶನ, ಅಭಿನಯ ಹೀಗೆ ಚಿತ್ರದ ಪ್ರತಿಯೊಂದು ವಿಭಾಗವನ್ನೂ ಪ್ರೇಕ್ಷಕರು ಕೊಂಡಾಡುತ್ತಿದ್ದಾರೆ. ಪೌರಾಣಿಕ ಕಥೆ ಮತ್ತು ವಿಜ್ಞಾನವನ್ನು ಹದವಾಗಿ ಬೆರೆಸಿ ತೆರೆ ಮೇಲೆ ಮ್ಯಾಜಿಕ್‌ ಸೃಷ್ಟಿಸಿದ ನಿರ್ದೇಶಕ ನಾಗ್‌ ಅಶ್ವಿನ್‌ ಅವರ ಪ್ರತಿಭೆಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಸುಮಾರು 600 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಕಲಾವಿದರು ದಾಖಲೆಯ ಸಂಭಾವನೆ ಪಡೆದುಕೊಂಡಿದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಹಾಗಾದರೆ ಯಾರು ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ? ಈ ವರದಿ ಓದಿ.

ಮೂಲಗಳ ಪ್ರಕಾರ ತೆಲುಗು ಸೂಪರ್‌ ಸ್ಟಾರ್‌ ಪ್ರಭಾಸ್‌ ʼಕಲ್ಕಿʼ ಚಿತ್ರಕ್ಕಾಗಿ ದುಬಾರಿ ಸಂಭಾವನೆ ಪಡೆದಿದ್ದಾರೆ. ಈ ಚಿತ್ರದಲ್ಲಿ ಅತ್ಯಧಿಕ ಸಂಭಾವನೆಯನ್ನು ಅವರು ಜೇಬಿಗಿಳಿಸಿದ್ದಾರೆ ಎನ್ನಲಾಗಿದೆ. ಅದೇ ರೀತಿ ನಾಯಕಿ ದೀಪಿಕಾ ಪಡುಕೋಣೆ, ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅಮಿತಾಭ್‌ ಬಚ್ಚನ್‌, ಕಮಲ್‌ ಹಾಸನ್‌ ಅವರಿಗೂ ದುಬಾರಿ ಸಂಭಾವನೆ ನೀಡಲಾಗಿದೆ ಎನ್ನಲಾಗುತ್ತಿದೆ.

ಪ್ರಭಾಸ್‌ಗೆ 80 ಕೋಟಿ ರೂ.!

ʼಕಲ್ಕಿʼ ಚಿತ್ರದ ಭೈರವ ಪಾತ್ರಕ್ಕಾಗಿ ಪ್ರಭಾಸ್‌ ಅತ್ಯಧಿಕ 80 ಕೋಟಿ ರೂ. ಪಡೆದಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಸಾಮಾನ್ಯವಾಗಿ ಪ್ರಭಾಸ್‌ ಚಿತ್ರವೊಂದಕ್ಕೆ 150 ಕೋಟಿ ರೂ. ಚಾರ್ಚ್‌ ಮಾಡುತ್ತಾರಂತೆ. ಆದರೆ ಈ ಸಿನಿಮಾಕ್ಕಾಗಿ ಅವರು ಅದರ ಅರ್ಧ ಸಂಭಾವನೆ ಮಾತ್ರ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇದರ ಜತೆಗೆ ಸುಮತಿ ಎಂಬ ಗರ್ಭಿಣಿ ಪಾತ್ರ ಮಾಡಿರುವ ದೀಪಿಕಾ ಈ ತೆಲುಗು ಚಿತ್ರಕ್ಕಾಗಿ ಬರೋಬ್ಬರಿ 20 ಕೋಟಿ ರೂ. ಪಡೆದುಕೊಂಡಿದ್ದಾರೆ. ʼಕಲ್ಕಿʼ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಬಹಳಷ್ಟು ತೂಕ ಇದ್ದು, ಟ್ರೈಲರ್‌ನಲ್ಲೇ ಗಮನ ಸೆಳೆದಿದ್ದರು. ಈ ಚಿತ್ರಕ್ಕಾಗಿ 3 ವರ್ಷ ಮೀಸಲಿಟ್ಟ ದೀಪಿಕಾ ದುಬಾರಿ ಸಂಭಾವನೆ ಜೇಬಿಗಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

ಇವರ ಜತೆಗೆ ಅಶ್ವತ್ಥಾಮನಾಗಿ ಮಿಂಚಿರುವ ಅಮಿತಾಭ್‌ ಬಚ್ಚನ್‌ ಮತ್ತು ಯಾಸ್ಕಿನ್‌ ಪಾತ್ರದಲ್ಲಿ ಮೋಡಿ ಮಾಡುತ್ತಿರುವ ಕಮಲ್‌ ಹಾಸನ್‌ ಅವರಿಗೂ ತಲಾ 20 ಕೋಟಿ ರೂ. ನೀಡಲಾಗಿದೆಯಂತೆ. ಪ್ರಭಾಸ್‌-ದೀಪಿಕಾ ಜತೆಗೆ ಇವರ ಪಾತ್ರವೂ ಗಮನ ಸೆಳೆಯುತ್ತಿದೆ. ಅದಾಗ್ಯೂ ಸಂಭಾವನೆ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಎಲ್ಲಿಯೂ ಮಾಹಿತಿ ಬಹಿರಂಗಪಡಿಸಿಲ್ಲ.

ವೈಜಯಂತಿ ಮೂವೀಸ್‌ ನಿರ್ಮಾಣದ ʼಕಲ್ಕಿ 2898 ಎಡಿʼ ಚಿತ್ರವನ್ನು ಈಗಾಗಲೇ ಪ್ರೇಕ್ಷಕರು ಎರಡೂ ಕೈ ಚಾಚಿ ಸ್ವಾಗತಿಸಿದ್ದಾರೆ. ದೇಶಾದ್ಯಂತ ಈಗಾಗಲೇ 19 ಲಕ್ಷಕ್ಕಿಂತ ಅಧಿಕ ಟಿಕೆಟ್‌ ಮಾರಾಟವಾಗಿದೆ. ಈ ಪೈಕಿ ತೆಲುಗೊಂದರಿಂಲೇ 15 ಲಕ್ಷ ಟಿಕೆಟ್‌ ಬಿಕರಿಯಾಗಿದೆ. ಮೊದಲ ದಿನ ಭಾರತದಲ್ಲಿ 100 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: Kalki 2898 AD Review: ʼಕಲ್ಕಿʼ ಚಿತ್ರರಂಗದ ಇತಿಹಾಸದಲ್ಲೇ ಮೈಲಿಗಲ್ಲು ಎಂದ ಪ್ರೇಕ್ಷಕರು; ಹೀಗಿದೆ ನೋಡುಗರ ಪ್ರತಿಕ್ರಿಯೆ

Exit mobile version