Site icon Vistara News

Kalki 2898 AD: ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ ʼಕಲ್ಕಿʼ; ಬಿಡುಗಡೆಯಾದ 5ನೇ ದಿನ ಗಳಿಸಿದ್ದು ಬರೋಬ್ಬರಿ 84 ಕೋಟಿ ರೂ.

Kalki 2898 AD

Kalki 2898 AD

ಮುಂಬೈ:  ʼಕಲ್ಕಿ 2898 ಎಡಿʼ (Kalki 2898 AD) ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ನಾಗಾಲೋಟ ಮುಂದುವರಿಸಿದೆ. ಜೂನ್ 27ರಂದು ವಿಶ್ವಾದ್ಯಂತ ತೆರೆಕಂಡ ಈ ಸೈನ್ಸ್‌ ಫಿಕ್ಷನ್‌ ದಾಖಲೆಯ ಕಲೆಕ್ಷನ್‌ ಮಾಡಿದೆ. ಅದರಲ್ಲಿಯೂ ಚಿತ್ರ ಬಿಡುಗಡೆಯಾಗಿ 5 ದಿನ ಕಳೆದರೂ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. 5ನೇ ದಿನವಾದ ಸೋಮವಾರ (ಜುಲೈ 2) ʼಕಲ್ಕಿʼ ಚಿತ್ರ ಜಾಗತಿಕವಾಗಿ ಬರೋಬ್ಬರಿ 84 ಕೋಟಿ ರೂ. ಗಳಿಸಿದೆ. ಈ ಮೂಲಕ ಮಲ್ಟಿ ಸ್ಟಾರರ್‌ ಚಿತ್ರ ಒಟ್ಟು 635 ಕೋಟಿ ರೂ. ಬಾಚಿಕೊಂಡಿದೆ.

ಭಾರತದಲ್ಲಿ ಗಳಿಸಿದ್ದೆಷ್ಟು?

ಸೋಮವಾರ ಭಾರತವೊಂದರಲ್ಲೇ ʼಕಲ್ಕಿʼ ಸುಮಾರು 34.6 ಕೋಟಿ ರೂ. ಗಳಿಸಿದೆ ಎಂದು ವರದಿಯೊಂದು ತಿಳಿಸಿದೆ. ʼʼಸೋಮವಾರ ಭಾರತದಲ್ಲಿ ಎಲ್ಲ ಭಾಷೆಗಳಲ್ಲಿ ಸೇರಿ ಸೇರಿ ಸುಮಾರು 34.6 ಕೋಟಿ ರೂ. ಬಾಚಿಕೊಂಡಿದೆ. ಇನ್ನು ಜಗತ್ತಿನ ವಿವಿಧ ಕಡೆಗಳ ಕಲೆಕ್ಷನ್‌ 45-50 ಕೋಟಿ ರೂ. ಹೀಗೆ ಒಂದೇ ದಿನ ಸುಮಾರು 84 ಕೋಟಿ ರೂ. ಬಾಚಿಕೊಂಡಿದ್ದು, ಒಟ್ಟು ಕಲೆಕ್ಷನ್‌ 635 ಕೋಟಿ ರೂ,ಗೆ ತಲುಪಿದೆʼʼ ಎಂದು ವರದಿ ತಿಳಿಸಿದೆ. ಅಧಿಕೃತ ಹೇಳಿಕೆ ಇನ್ನಷ್ಟೇ ಹೊರ ಬರಬೇಕಿದೆ. ಚಿತ್ರವನ್ನು ಸುಮಾರು 600 ಕೋಟಿ ರೂ. ಬಜೆಟ್‌ನಲ್ಲಿ ತಯಾರಿಸಲಾಗಿದ್ದು, ಈಗಾಗಲೇ ಹಾಕಿದ ದುಡ್ಡು ವಾಪಸ್‌ ಬಂದಂತಾಗಿದೆ.

ರಿಲೀಸ್‌ ಆದ 4 ದಿನಕ್ಕೆ ʼಕಲ್ಕಿʼ ಜಾಗತಿಕವಾಗಿ 550 ಕೋಟಿ ರೂ. ಗಳಿಸಿದೆ ಎಂದು ಈ ಹಿಂದೆ ಚಿತ್ರತಂಡ ಘೋಷಿಸಿತ್ತು. ಮೊದಲ ದಿನವೇ ಸಿನಿಮಾ ಸುಮಾರು 191 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು. ಆ ಮೂಲಕ ಮೊದಲ ದಿನ ಅತ್ಯಧಿಕ ಕಲೆಕ್ಷನ್‌ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ತೆಲುಗಿನ ʼಆರ್‌ಆರ್‌ಆರ್‌ʼ ಮತ್ತು ʼಬಾಹುಬಲಿ 2ʼ ಮೊದಲೆರಡು ಸ್ಥಾನಗಳಲ್ಲಿವೆ.

ಭರ್ಜರಿ ಗಳಿಕೆ

ಮೊದಲ ದಿನ ಭರ್ಜರಿ 191 ಕೋಟಿ ರೂ. ಗಳಿಸಿದ ʼಕಲ್ಕಿʼ ಆ ಮೂಲಕ ಸ್ಯಾಂಡಲ್‌ವುಡ್‌ನ ʼಕೆಜಿಎಫ್‌ 2ʼ (159 ಕೋಟಿ ರೂ.), ʼಸಲಾರ್‌ʼ (158 ಕೋಟಿ ರೂ.), ʼಲಿಯೋʼ (142.75 ಕೋಟಿ ರೂ.), ʼಸಾಹೋʼ (130 ಕೋಟಿ ರೂ.) ಮತ್ತು ʼಜವಾನ್‌ʼ (129 ಕೋಟಿ ರೂ.) ದಾಖಲೆ ಮುರಿದೆ. ಅದಾಗ್ಯೂ 223 ಕೋಟಿ ರೂ. ಕಲೆಕ್ಷನ್‌ ಮಾಡಿದ ʼಆರ್‌ಆರ್‌ಆರ್‌ʼ ಮತ್ತು 217 ಕೋಟಿ ರೂ. ಗಳಿಸಿದ ʼಬಾಹುಬಲಿ 2ʼ ಈಗಲೂ ಮೊದಲ ದಿನದ ಕಲೆಕ್ಷನ್‌ ವಿಚಾರದಲ್ಲಿ ಮೊದಲೆರಡು ಸ್ಥಾನಗಳಲ್ಲಿ ಭದ್ರವಾಗಿವೆ.

ಬಹುತಾರಾಗಣ

ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್‌ ಕಟ್‌ ಹೇಳಿರುವ ʼಕಲ್ಕಿʼಯಲ್ಲಿ ಬಹುತಾರಾಗಣವಿದೆ. ಪ್ರಭಾಸ್‌ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿ ತೆರೆ ಹಂಚಿಕೊಂಡಿದ್ದು, ಬಾಲಿವುಡ್‌ನ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ತಾರೆಗಳಾದ ಕಮಲ್‌ ಹಾಸನ್‌, ಶೋಭನಾ ಮತ್ತಿತರರು ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ: Kalki 2898 AD: ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಕಂಡ ʻಕಲ್ಕಿʼ: ಪ್ರಭಾಸ್‌ ಅಬ್ಬರಕ್ಕೆ ಬಾಕ್ಸ್ ಆಫೀಸ್‌ ಧೂಳೀಪಟ!

Exit mobile version