Site icon Vistara News

Kalki 2898 AD Review: ʼಕಲ್ಕಿʼ ಚಿತ್ರರಂಗದ ಇತಿಹಾಸದಲ್ಲೇ ಮೈಲಿಗಲ್ಲು ಎಂದ ಪ್ರೇಕ್ಷಕರು; ಹೀಗಿದೆ ನೋಡುಗರ ಪ್ರತಿಕ್ರಿಯೆ

Kalki 2898 AD Review

Kalki 2898 AD Review

ಮುಂಬೈ: ಈ ವರ್ಷದ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಚಿತ್ರ ʼಕಲ್ಕಿ 2898 ಎಡಿʼ (Kalki 2898 ADಬೆಟ್ಟದಷ್ಟು ನಿರೀಕ್ಷೆ ಹೊತ್ತು ತೆರೆಗೆ ಬಂದಿದೆ. ಪ್ರಭಾಸ್‌-ದೀಪಿಕಾ ಪಡುಕೋಣೆ-ಅಮಿತಾಭ್‌ ಬಚ್ಚನ್‌ ಮೊದಲ ಬಾರಿಗೆ ತೆರೆ ಹಂಚಿಕೊಂಡ ಈ ಸಿನಿಮಾದ ಮೊದಲ ಶೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ನೋಡಿದವರು ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಸುತ್ತಿದ್ದು, ಬಹುತೇಕರು ಇದನ್ನು ಮಾಸ್ಟರ್‌ ಪೀಸ್‌ ಎಂದೇ ಕರೆದಿದ್ದಾರೆ (Kalki 2898 AD Review).

ನಾಗ್‌ ಅಶ್ವಿನ್‌ ನಿರ್ದೇಶನದ ಈ ಸೈನ್ಸ್‌ ಫಿಕ್ಷನ್‌ ಚಿತ್ರಕ್ಕೆ ಪ್ರೇಕ್ಷರು ಫಿದಾ ಆಗಿದ್ದಾರೆ. ಭಾರತೀಯ ಸಿನಿಮಾ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲು ಎಂದು ಅನೇಕರು ಕೊಂಡಾಡಿದ್ದಾರೆ. ಅಧ್ಬುತ ಕಥೆ ಮತ್ತು ವಿಷುವಲ್ಸ್‌ ನೋಡುಗರ ಗಮನ ಸೆಳೆಯುತ್ತಿದೆ. ಪೌರಾಣಿಕ ಮತ್ತು ಆಧುನಿಕ ಕಾಲಘಟ್ಟದ ಕಥೆಯನ್ನು ಹಿತವಾಗಿ ಬೆರೆಸಿ ತೆರೆ ಮೇಲೆ ಮೂಡಿಸಿರುವ ಈ ವಿಶಿಷ್ಟ ಪ್ರಯತ್ನಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರೇಕ್ಷಕರು ಏನಂದ್ರು?

ʼʼಕಲ್ಕಿ 2898 ಎಡಿʼ ಭಾರತೀಯ ಚಿತ್ರರಂಗದಲ್ಲೇ ಅದ್ಭುತ ಸಿನಿಮಾ. ಇದೊಂದು ಮೈಲಿಗಲ್ಲು. ತೆರೆ ಮೇಲೆ ಮೂಡುವ ದೃಶ್ಯಗಳು ಬೇರೊಂದು ಲೋಕಕ್ಕೆ ನಮ್ಮನ್ನು ಕೊಂಡೊಯ್ಯುತ್ತವೆ. ತೆರೆ ಮೇಲೆ ಏನೆಲ್ಲ ಮ್ಯಾಜಿಕ್‌ ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಿದ್ದಾರೆʼʼ ಎಂದು ಒಬ್ಬರು ಬರೆದುಕೊಂಡಿದ್ದಾರೆ. ʼʼಬ್ಲ್ಯಾಕ್‌ ಬಸ್ಟರ್‌. ಫಸ್ಟ್‌ ಆಫ್‌ ಸ್ವಲ್ಪ ನಿಧಾನವಾಗಿ ಸಾಗುತ್ತದೆ. ಇಂಟರ್‌ವೆಲ್‌ ಸೀನ್‌ ಅದ್ಭುತ. ಸೆಕೆಂಡ್‌ ಆಫ್‌ ಚಿಂದಿ. ಅದರಲ್ಲಿಯೂ ಕ್ಲೈಮಾಕ್ಸ್‌ನ ಕೊನೆಯ 10 – 15 ಮರೆಯಲು ಸಾಧ್ಯವೇ ಇಲ್ಲʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ.

ʼʼಅಮಿತಾಭ್‌ ಬಚ್ಚನ್‌ ಮತ್ತು ಪ್ರಭಾಸ್‌ ಗಮನ ಸೆಳೆಯುತ್ತಾರೆ. ಸೆಕೆಂಡ್‌ ಆಫ್‌ ಹಾಲಿವುಡ್‌ ಚಿತ್ರಗಳ ಮಾದರಿಯಲ್ಲಿ ಮೂಡಿ ಬಂದಿದೆ. ಈ ಸೈನ್ಸ್‌ ಫಿಕ್ಷನ್‌ ಮಹಾಭಾರತದ ಕಥೆಯನ್ನು ಒಳಗೊಂಡಿದ್ದು, ಪ್ರತಿಯೊಬ್ಬರೂ ತಪ್ಪದೇ ನೋಡಬೇಕುʼʼ ಎಂದು ವೀಕ್ಷಕರೊಬ್ಬರು ಸಲಹೆ ನೀಡಿದ್ದಾರೆ.

ಸಿನಿಮಾದ ಕಥೆ, ವಿಷುವಲ್ಸ್‌, ಅಭಿನಯಕ್ಕೆ ಪೂರ್ಣಾಂಕ ನೀಡಿದ ಪ್ರೇಕ್ಷಕರು ನಿರ್ದೇಶಕ ನಾಗ್‌ ಅಶ್ವಿನ್‌ ಅವರಿಗೆ ಸೆಲ್ಯೂಟ್‌ ಹೊಡೆದಿದ್ದಾರೆ. ʼʼತಂಡದ ಪ್ರತಿಯೊಬ್ಬರೂ ಅದ್ಭುತ ಕೆಲಸ ಮಾಡಿದ್ದಾರೆ. ಅದರಲ್ಲಿಯೂ ನಿರ್ದೇಶಕ ನಾಗ್‌ ಅಶ್ವಿನ್‌ ಅವರ ಕಾರ್ಯವಂತೂ ಇನ್ನು ಒಂದು ಹೆಜ್ಜೆ ಮುಂದೆ. ಪೌರಾಣಿ ಕತೆ ಮತ್ತು ವಿಜ್ಞಾನವನ್ನು ಹದವಾಗಿ ಬೆರೆಸಿ ಮ್ಯಾಜಿಕ್‌ ಸೃಷ್ಟಿಸಿದ್ದಾರೆ. ಎರಡನೇ ಭಾಗಕ್ಕಾಗಿ ಕಾಯುತ್ತಿದ್ದೇವೆʼʼ ಎಂದು ನೋಡುಗರೊಬ್ಬರು ಬರೆದಿದ್ದಾರೆ.

ಅಭಿನಯಕ್ಕೆ ಮೆಚ್ಚುಗೆ

ವಿಷುವಲ್ಸ್‌, ನಿರ್ದೇಶನ, ಕಥೆಯ ಜತೆಗೆ ಕಲಾವಿದರ ಅಭಿನಯಕ್ಕೂ ಪ್ರೇಕ್ಷಕರು ಜೈ ಎಂದಿದ್ದಾರೆ. ಅದರಲ್ಲಿಯೂ ಅಮಿತಾಭ್‌, ಪ್ರಭಾಸ್‌, ದೀಪಿಕಾ, ಕಮಲ್‌ ಹಾಸನ್‌ ಅವರ ನಟನೆ ಎಲ್ಲರ ಗಮನ ಸೆಳೆದಿದೆ. ʼʼಅಮಿತಾಭ್‌ ಫಸ್ಟ್‌ ಹಾಫ್‌ನಲ್ಲಿ ಮಿಂಚಿದರೆ ಸೆಕೆಂಡ್‌ ಆಪ್‌ನಲ್ಲಿ ಪ್ರಭಾಸ್‌ ಮತ್ತು ದೀಪಿಕಾ ಗಮನ ಸೆಳೆಯುತ್ತಾರೆ. ಕೆಲವೇ ನಿಮಿಷಗಳಲ್ಲಿ ಬಂದು ಹೋಗುವ ವಿಲನ್‌ ಕಮಲ್‌ ಹಾಸನ್‌ ಅಬಿನಯವೂ ಗಮನ ಸೆಳೆಯುತ್ತದೆʼʼ ಎಂದು ಒಬ್ಬರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಅಶ್ವತ್ಥಾಮನಾಗಿ ಅಮಿತಾಭ್‌, ಗರ್ಭಿಣಿ ದೀಪಿಕಾ, ಪ್ರಭಾಸ್‌ ಕಲ್ಕಿಯನ್ನು ಎತ್ತಿಕೊಂಡಿರುವ ದೃಶೃವನ್ನಂತೂ ಮರೆಯಲು ಸಾಧ್ಯವೇ ಇಲ್ಲ ಎಂದು ಇನ್ನೊಬ್ಬರು ಹೇಳಿದ್ದು, ಸಿನಿಮಾ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ.

ಇನ್ನು ಕೆಲವರಿಗೆ ಕಲ್ಕಿ ಸಿನಿಮಾ ಇಷ್ಟವಾಗಿದ್ದರೂ ಅದರಲ್ಲಿನ ಕೆಲವೊಂದು ಅಂಶಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಸಿನಿಮಾ, ನಿರ್ದೇಶನ, ಅಭಿನಯ, ವಿಷುವಲ್ಸ್‌ ಎಲ್ಲವೂ ಚೆನ್ನಾಗಿದೆ. ಆದರೆ ಕಥೆ ತುಂಬ ನಿಧಾನವಾಗಿ ಸಾಗುತ್ತದೆ ಎಂದು ಒಬ್ಬರು ಹೇಳಿದರೆ ಇನ್ನೊಬ್ಬರು ಸಂಗೀತ ಅಷ್ಟೇನೂ ಗಮನ ಸೆಳೆಯುವುದಿಲ್ಲ ಎಂದಿದ್ದಾರೆ. ಮತ್ತೊಬ್ಬರು ಚಿತ್ರ ಚೆನ್ನಾಗಿದೆ. ಆದರೆ ಪದೇ ಪದೆ ನೋಡುವಷ್ಟಿಲ್ಲ. ಒಮ್ಮೆ ಮಾತ್ರ ನೋಡಬಹುದು ಎಂದಿದ್ದಾರೆ. ಒಟ್ಟಿನಲ್ಲಿ ಬಹುಭಾಷೆಯಲ್ಲಿ ತೆರೆಕಂಡ ಸಿನಿಮಾ ಗಮನ ಸೆಳೆದಿರುವುದಂತು ಸತ್ಯ.

ಇದನ್ನೂ ಓದಿ: Rishab Shetty: ಕುಂದಾಪುರಕ್ಕೆ ಆಗಮಿಸಿದ ʼಕಲ್ಕಿʼಯ ಬುಜ್ಜಿ; ಪ್ರಭಾಸ್‌ ಕಾರು ರೈಡ್‌ ಮಾಡಿದ ರಿಷಬ್‌ ಶೆಟ್ಟಿ ಹೇಳಿದ್ದೇನು?

Exit mobile version