ಚೆನ್ನೈ: ಉಳಗನಾಯಗನ್ ಕಮಲ್ ಹಾಸನ್ (Kamal Haasan) ಹಾಗೂ ವಿಷನರಿ ಡೈರೆಕ್ಟರ್ ಮಣಿರತ್ನಂ (Mani Ratnam) 37 ವರ್ಷದ ಬಳಿಕ ಮತ್ತೆ ಕೈ ಜೋಡಿಸಿರುವುದು ಗೊತ್ತೇ ಇದೆ. ಕಮಲ್ ನಟಿಸುತ್ತಿರುವ ಮಣಿರತ್ನಂ ನಿರ್ದೇಶಿಸುತ್ತಿರುವ ಈ ಚಿತ್ರದ ಟೈಟಲ್ ರಿವೀಲ್ ಆಗಿದೆ. 2.55 ನಿಮಿಷದ ವಿಡಿಯೋ ಝಲಕ್ ಮೂಲಕ ಕಮಲ್ ಅಭಿನಯದ 234ನೇ ಸಿನಿಮಾದ ಶೀರ್ಷಿಕೆ ಏನು? ಯಾವ ಜಾನರ್? ಎಂಬ ಬಗ್ಗೆ ಸಣ್ಣದೊಂದು ಸುಳಿವು ಅಭಿಮಾನಿಗಳಿಗೆ ಸಿಕ್ಕಿದೆ.
ಟೈಟಲ್ ಏನು?
ಕಮಲ್ ಹಾಗೂ ಮಣಿರತ್ನಂ ಜೋಡಿಯ ಸಿನಿಮಾಗೆ ʼಥಗ್ ಲೈಫ್ʼ ಎಂಬ ಶೀರ್ಷಿಕೆ ಇಡಲಾಗಿದೆ. ರಂಗರಾಯ ಸತ್ಯವೇಲ್ ನಾಯಕನ್ ಆಗಿ ಎಂಟ್ರಿ ಕೊಟ್ಟಿರುವ ಕಮಲ್ ಹಾಸನ್ ತಾನೊಬ್ಬ ಗ್ಯಾಂಗ್ ಸ್ಟರ್ ಎಂದು ಪರಿಚಯ ಮಾಡಿಕೊಳ್ಳುತ್ತಾರೆ. ಭರ್ಜರಿ ಆ್ಯಕ್ಷನ್ ಮೂಲಕ ವಿರೋಧಿಗಳಿಗೆ ಟಕ್ಕರ್ ಕೊಡುವ ಉಳಗನಾಯಗನ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ಟೈಟಲ್ ಅನೌನ್ಸ್‌ಮೆಂಟ್ ವಿಡಿಯೊದಲ್ಲಿ ಪ್ರಮುಖ ಆಕರ್ಷಣೆಯಾಗಿದೆ.
ಪಕ್ಕಾ ಆ್ಯಕ್ಷನ್ ಎಂಟರ್ ಟೈನರ್ ಕಥಾನಕ ‘ಥಗ್ ಲೈಫ್’ ಸಿನಿಮಾದಲ್ಲಿ ತ್ರಿಷಾ ಕೃಷ್ಣನ್, ದುಲ್ಕರ್ ಸಲ್ಮಾನ್, ಜಯಂರವಿ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ರಾಜ್ ಕಮಲ್ ಇಂಟರ್ ನ್ಯಾಷನಲ್ ಫಿಲ್ಮ್ಸ್ ಹಾಗೂ ಮದ್ರಾಸ್ ಟಾಕೀಸ್ ನಡಿ ಕಮಲ್ ಹಾಸನ್, ಮಣಿರತ್ನಂ, ಆರ್.ಮಹೇಂದ್ರನ್ ಮತ್ತು ಶಿವ ಅನಂತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಉದಯನಿಧಿ ಸ್ಟಾಲಿನ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಎ.ಆರ್.ರೆಹಮಾನ್ ಚಿತ್ರದ ಸಂಗೀತ ನಿರ್ದೇಶನ, ಶ್ರೀಕರ್ ಪ್ರಸಾದ್ ಸಂಕಲನ, ರವಿ ಕೆ. ಚಂದ್ರನ್ ಛಾಯಾಗ್ರಹಣ ʼಥಗ್ ಲೈಫ್ʼ ಸಿನಿಮಾದಲ್ಲಿದೆ. 1987ರಲ್ಲಿ ಕಮಲ್ ಹಾಸನ್ ನಟನೆಯ, ಮಣಿರತ್ನಂ ನಿರ್ದೇಶನದ ‘ನಾಯಕನ್’ ಸಿನಿಮಾ ರಿಲೀಸ್ ಆಗಿತ್ತು. ಇದಾದ ಬಳಿಕ ಸುಮಾರು 37 ವರ್ಷಗಳ ಬಳಿಕ ಸೂಪರ್ ಹಿಟ್ ಜೋಡಿ ಒಂದಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ.
ಸದ್ಯ ಕಮಲ್ ಹಾಸನ್ ಎಸ್.ಶಂಕರ್ ನಿರ್ದೇಶನದ ಇಂಡಿಯನ್ 2 ಚಿತ್ರದಲ್ಲಿ ನಿರತರಾಗಿದ್ದಾರೆ. ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಈ ಚಿತ್ರ 2024ರ ಎಪ್ರಿಲ್‌ನಲ್ಲಿ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್ ಅಗರ್ವಾಲ್ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್, ಎಸ್.ಜೆ.ಸೂರ್ಯ, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ನಡುಮುಡಿ ವೇಣು, ವಿವೇಕ್ ಮತ್ತಿತರರು ನಟಿಸಿದ್ದಾರೆ. ಸುಮಾರು 250 ಕೋಟಿ ರೂ. ವೆಚ್ಚದಲ್ಲಿ ಚಿತ್ರ ತಯಾರಾಗಲಿದೆ.
ಇದನ್ನೂ ಓದಿ: Kamal Haasan: ಕಮಲ್ ಹಾಸನ್-ಮಣಿರತ್ನಂ ಕಾಂಬೋ ಸಿನಿಮಾ; ಫಸ್ಟ್ ಲುಕ್ ಔಟ್!
ಇತ್ತ ಮಣಿರತ್ನಂ ʼಪೊನ್ನಿಯಿನ್ ಸೆಲ್ವಂʼ ಸರಣಿ ಚಿತ್ರಗಳ ಯಶಸ್ಸಿನಲ್ಲಿದ್ದಾರೆ. ವಿಕ್ರಮ್, ಐಶ್ವರ್ಯಾ ರೈ ಬಚ್ಚನ್, ಜಯಂ ರವಿ, ಕಾರ್ತಿ, ತ್ರಿಷಾ ಕೃಷ್ಣನ್, ಪ್ರಭು, ಶರತ್ ಕುಮಾರ್, ಐಶ್ವರ್ಯಾ ಲಕ್ಷ್ಮೀ ಮತ್ತಿತರರ ಬಹುತಾರಾಗಣ ಹೊಂದಿದ್ದ ಈ ಸರಣಿ ಚಿತ್ರಗಳು ಕಳೆದ ವರ್ಷ ಮತ್ತು ಈ ವರ್ಷ ತೆರೆಗೆ ಬಂದಿದ್ದವು. ಕಾದಂಬರಿ ಆಧಾರಿತ ಈ ಐತಿಹಾಸಿಕ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿವೆ. ಜತೆಗೆ ವಿಮರ್ಶಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ