ಬೆಂಗಳೂರು: ಕಾಂತಾರ ಸಿನಿಮಾ (Kantara Movie) ವಿಶ್ವಾದ್ಯಂತ ಭಾರಿ ಪ್ರಶಂಸೆಯನ್ನು ಪಡೆದುಕೊಂಡಿದೆ. ಈ ನಡುವೆ ಹಿರಿಯ ನಟ ಕಮಲಹಾಸನ್ ಅವರು ಕಾಂತಾರ ಯಶಸ್ಸಿನ ಕುರಿತು ರಿಷಬ್ ಶೆಟ್ಟಿ ಅವರಿಗೆ ಪತ್ರವನ್ನೇ ಬರೆದಿದ್ದಾರೆ. ಫ್ರೇಮ್‌ನಲ್ಲಿರುವ ಪತ್ರದ ಫೋಟೊವನ್ನು ರಿಷಬ್ ಶೆಟ್ಟಿ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ʻʻಇಂಡಿಯಾದ ಲೆಜೆಂಡ್ ಕಮಲ್ ಹಾಸನ್ ಅವರಿಂದ ಸುಂದರವಾದ ಸಂದೇಶವನ್ನು ಸ್ವೀಕರಿಸುವುದರಲ್ಲಿ ಬಹಳಷ್ಟು ಅರ್ಥವಿದೆ. ಕಮಲ್ ಸರ್ ಅವರ ಈ ಸರ್ಪ್ರೈಸ್ ಗಿಫ್ಟ್ ನೋಡಿ ತುಂಬಾ ಬೆಚ್ಚಿ ಬಿದ್ದೆ ಮತ್ತು ಬೆರಗಾದೆ. ಈ ಅಮೂಲ್ಯ ಕೊಡುಗೆಗಾಗಿ ಧನ್ಯವಾದಗಳು ಸರ್” ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.
ಪತ್ರದಲ್ಲಿ ಏನಿದೆ?
ಪತ್ರದಲ್ಲಿ ಕಮಲ್ ಹಾಸನ್ ʻʻಕಾಂತಾರದಂತಹ ಚಲನಚಿತ್ರವು ನಿಮ್ಮ ಮನಸ್ಸಿನಲ್ಲಿ ಉಳಿದು ಅರಳುತ್ತದೆ. ನಾನು ದೇವರಿಲ್ಲದ ಮನುಷ್ಯ, ಆದರೂ ಹೆಚ್ಚಿನವರಲ್ಲಿ ಒಬ್ಬರ ಅಗತ್ಯವನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನಮ್ಮ ಹೆಚ್ಚಿನ ಪುರಾಣಗಳಲ್ಲಿ ಚಿತ್ರಿಸಿರುವ ದೇವರುಗಳಲ್ಲಿ ಸಹಾನುಭೂತಿಯ ಕೊರತೆಯಿದೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ದ್ರಾವಿಡರಾದ ನಮ್ಮದು ಮಾತೃಪ್ರಧಾನ ಸಮಾಜ. ಅದು ನಿಮ್ಮ ಚಿತ್ರದ ಕೊನೆಯ ದೃಶ್ಯದಲ್ಲಿ ಕಂಡುಬರುತ್ತದೆ. ಅಲ್ಲಿ ದೇವರು ತಂದೆಗಿಂತ ಹೆಚ್ಚಾಗಿ ತಾಯಿಯಂತೆ ವರ್ತಿಸುತ್ತಾರೆ” ಎಂದಿದ್ದಾರೆ. ಕಾಂತಾರ ಚಿತ್ರವನ್ನು ಕ್ಲಾಸಿಕ್ ಎಂದು ಹಾಡಿ ಹೊಗಳಿದ್ದಾರೆ ಕಮಲಹಾಸನ್.
ಇದನ್ನೂ ಓದಿ | Kantara Movie | ʻಕಾಂತಾರʼ ಪ್ರಭಾವದಿಂದ ದೈವದ ದರ್ಶನ ಸೇವೆಯನ್ನು ಕಣ್ತುಂಬಿಕೊಂಡ ನೂರಾರು ವಿದ್ಯಾರ್ಥಿಗಳು
ʻʻನೀವು ಎಂಟಿ ವಾಸುದೇವನ್ ನಾಯರ್ ಅವರ ನಿರ್ಮಾಲ್ಯಂ ಎಂಬ ಚಲನಚಿತ್ರವನ್ನು ನೋಡಿರಲಿಕ್ಕಿಲ್ಲ. ನಿಮ್ಮ ಚಿತ್ರವು ಆ ಕ್ಲಾಸಿಕ್‌ನ ಛಾಯೆಯನ್ನು ಹೊಂದಿದೆ. ನಿಮ್ಮ ಸಿನಿಮೀಯ ಡಿಎನ್‌ಎ ನಿಮಗೆ ತಿಳಿದಿಲ್ಲದ ಅನೇಕ ಪೂರ್ವಜರನ್ನು ಹೊಂದಿದೆ. ಆದರೆ ನೀವು ಮಾತನಾಡುವ ಸಿನಿಮೀಯ ಭಾಷೆ ಅವರಿಂದ ಬಂದಿದೆ ಎಂಬುದನ್ನು ನೆನಪಿಡಿʼ ಎಂದು ಬರೆದಿದ್ದಾರೆ.
ಕಾಂತಾರ ಬಿಡುಗಡೆಯಾದ ಸಂದರ್ಭದಲ್ಲಿ ಕಮಲ್ ಹಾಸನ್ ಅವರು ಕಾಂತಾರ ಸಿನಿಮಾವನ್ನು ಮೆಚ್ಚಿ ಹಾಡಿ ಹೊಗಳಿದ್ದರು. ಕಾಂತಾರ ಸಿನಿಮಾ ವೀಕ್ಷಿಸಿ, ರಿಷಭ್ ಶೆಟ್ಟಿ ಅವರಿಗೆ ಬೆನ್ನು ತಟ್ಟಿದ್ದರು. ಅಲ್ಲದೇ, ರಿಷಬ್ ಅವರು ಕತೆ ಹೇಳಿದ ರೀತಿ ಪ್ರೇರಣಾದಾಯಕವಾಗಿದೆ ಎಂದು ಕಮಲ್ ಹಾಸನ್ ಹೇಳಿದ್ದರು.
ಕಾಂತಾರಾ ಸಿನಿಮಾವು, ಸಾಂಸ್ಕೃತಿಕ ಹಿನ್ನೆಲೆ, ತಾಂತ್ರಿಕ ವೈಭವವನ್ನು ಸಮನಾಗಿ ಮಿಳಿತವಾದ ಚಿತ್ರವಾಗಿದೆ. ಕಾಂತಾರ ಸಿನಿಮಾ 2023ರ ಆಸ್ಕರ್ ನಾಮನಿರ್ದೇಶನಕ್ಕೆ ಅರ್ಹವಾಗಿರುವ ಚಲನಚಿತ್ರಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಎಂಬುದು ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ | Kantara movie | ವಿವಾದಿತ ಪಡುಬಿದ್ರಿ ದೈವಸ್ಥಾನದ ನೇಮೋತ್ಸವ ಮುಂದೂಡಿಕೆ, ದೈವಕ್ಕೆ ಬೆದರಿತೇ ಆಡಳಿತ ಮಂಡಳಿ?