ಬಾಯಿಗೆ ಬಂದಂತೆ ಮಾತನಾಡುವುದೇ ಕೆಲವರಿಗೆ ಚಾಳಿಯಾಗಿಬಿಟ್ಟಿರುತ್ತದೆ. ಅದರಲ್ಲೂ ಸೋಷಿಯಲ್ ಮೀಡಿಯಾ ಇದೆ ಅಂತಾ ಮನಸ್ಸಿಗೆ ಬಂದಂತೆ ಪೋಸ್ಟ್ ಹಾಕಿದರೆ ಜೈಲು ಕಂಬಿ ಎಣಿಸೋದು ಗ್ಯಾರಂಟಿ. ಹೀಗೆ ಸುಖಾಸುಮ್ಮನೆ ಸಿನಿಮಾಗಳ ಕುರಿತಾಗಿ ಕೆಟ್ಟದಾಗಿ ವಿಮರ್ಶೆ ಮಾಡಿ ಪೋಸ್ಟ್ ಹಾಕುತ್ತಿದ್ದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಯಾವತ್ತೋ ಮಾಡಿದ್ದ ತಪ್ಪಿಗೆ ಇಂದು ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಆ ವ್ಯಕ್ತಿ ಬೇರಾರೂ ಅಲ್ಲ ‘ಕೆಜಿಎಫ್-2’ ಹಾಗೂ ‘RRR’ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದ ಕಮಲ್ ಆರ್. ಖಾನ್.
ವಿವಾದಗಳ ಸರದಾರ ಅಂತಾನೆ ಕಮಲ್ ಆರ್. ಖಾನ್ನ ಕರೆಯಲಾಗುತ್ತದೆ. ಇನ್ನು ಇದೇ ವ್ಯಕ್ತಿ 2020ರಲ್ಲಿ ಮಾಡಿದ್ದ ಕಾಂಟ್ರವರ್ಷಿಯಲ್ ಟ್ವೀಟ್ ಸಂಬಂಧ ಅಂದರ್ ಆಗಿದ್ದಾನೆ. 2020 ರಲ್ಲೂ ನಟ ಇರ್ಫಾನ್ ಖಾನ್ ಹಾಗೂ ರಿಶಿ ಕಪೂರ್ ನಿಧನರಾದ ಸಂದರ್ಭದಲ್ಲಿ ಕಮಲ್ ಆರ್. ಖಾನ್ ಇಂತಹ ಟ್ವೀಟ್ ಮಾಡಿದ್ದ. ರಿಶಿ ಕಪೂರ್ ಆಸ್ಪತ್ರೆಯಲ್ಲಿದ್ದಾಗ ‘ಸರ್ ನೀವು ಹುಷಾರಾಗಿ ಬನ್ನಿ, 2-3 ದಿನದಲ್ಲಿ ಮದ್ಯದ ಅಂಗಡಿಗಳು ತೆರೆದುಬಿಡುತ್ತವೆ?’ ಎಂದಿದ್ದ ವಿವಾದಾತ್ಮಕ ವಿಮರ್ಶಕ.
ಪೊಲೀಸರ ಪ್ಲ್ಯಾನ್..!
ಹೀಗೆ ಬಾಯಿಗೆ ಬಂದಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನು ಹಾಕುತ್ತಾ, ರೂಲ್ಸ್ ಬ್ರೇಕ್ ಮಾಡಿದ್ದ ಕಮಲ್ ಆರ್. ಖಾನ್ ಮುಂಬೈ ಪೊಲೀಸರ ಅತಿಥಿಯಾಗಿದ್ದಾನೆ. ಕಮಲ್ ಆರ್. ಖಾನ್ ವಿವಾದಾತ್ಮಕ ಟ್ವೀಟ್ಗಳ ಕುರಿತು ರಾಹುಲ್ ಕನ್ವಾಲ್ ಎಂಬುವವರು 2020ರಲ್ಲಿ ದೂರು ದಾಖಲಿಸಿದ್ದರು. ದೂರು ಪಡೆದಿದ್ದ ಪೊಲೀಸರ ಕೈಗೆ ಕಮಲ್ ಆರ್. ಖಾನ್ ಸಿಕ್ಕಿರಲಿಲ್ಲ. ಭಾರತದಲ್ಲಿ ಆತ ಇಲ್ಲದ ಕಾರಣಕ್ಕೆ ಬಂಧಿಸಲು ಆಗಿರಲಿಲ್ಲ. ಇಂದು ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಕಮಲ್ ಆರ್. ಖಾನ್ ಬರುತ್ತಿದ್ದಂತೆ ಪೊಲೀಸರು ಬಲೆಗೆ ಕೆಡವಿದ್ದಾರೆ.
ಕಮಲ್ ಆರ್. ಖಾನ್ ಕುರಿತು ಸಿನಿಮಾ ಅಭಿಮಾನಿಗಳ ಆಕ್ರೋಶ ಜೋರಾಗಿದೆ. ಅದರಲ್ಲೂ ಭಾರತದ ಬಾಕ್ಸ್ ಆಫಿಸ್ನಲ್ಲಿ ಹೊಸ ಇತಿಹಾಸ ಬರೆದಿರುವ ‘ಕೆಜಿಎಫ್-2’ ಹಾಗೂ ‘RRR’ ಕುರಿತು ನೆಗೆಟಿವ್ ವಿಮರ್ಶೆ ಮಾಡಿದ್ದ. ಸಿನಿಮಾಗಳು ಚೆನ್ನಾಗಿಲ್ಲ ಎಂದು ಹಾಗೂ ನಟ ಯಶ್ ಬಗ್ಗೆ ಹಗುರವಾಗಿ ಟ್ವೀಟ್ ಮಾಡಿದ್ದ. ‘RRR’ ಕುರಿತಾಗಿಯೂ ವ್ಯಂಗ್ಯವಾಗಿ ಮಾತನಾಡಿದ್ದ ಕಮಲ್ ಆರ್. ಖಾನ್. ಈ ರೀತಿಯ ಹೇಳಿಕೆಗಳು ಅಭಿಮಾನಿಗಳಿಗೆ ಕೋಪ ತರಿಸಿತ್ತು. ಕೊನೆಗೂ ಕಮಲ್ ಆರ್. ಖಾನ್ ಪೊಲೀಸರ ಅತಿಥಿಯಾಗಿದ್ದು, ವಿಚಾರಣೆ ಮುಂದುವರಿದಿದೆ.
ಇದನ್ನೂ ಓದಿ: ಬಂಧಿತ ಐಎಎಸ್ ಅಧಿಕಾರಿ ಜತೆ ಅಮಿತ್ ಶಾ ಇದ್ದ ಫೋಟೊ ಹಂಚಿಕೊಂಡ ಚಿತ್ರ ನಿರ್ಮಾಪಕ ಬಂಧನ