ಬೆಂಗಳೂರು : ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರು ತಮ್ಮ ಮುಂದಿನ ಚಿತ್ರ ʻಎಮರ್ಜೆನ್ಸಿʼ ಚಿತ್ರೀಕರಣವನ್ನು ಮುಗಿಸಿದ್ದಾರೆ. ಇದೇ ಮೊದಲ ಬಾರಿಗೆ ನಟಿ ನಟನೆ ಜತೆಗೆ ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಈ ಸಿನಿಮಾಗಾಗಿ ತಮ್ಮೆಲ್ಲ ಆಸ್ತಿಯನ್ನು ಅಡ ಇಟ್ಟಿರುವುದಾಗಿ ಇನ್ಸ್ಟಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ತಮ್ಮ ಪೋಸ್ಟ್ನಲ್ಲಿ ನಟಿ ಸುದೀರ್ಘವಾಗಿ ಬರೆದುಕೊಂಡಿದ್ದು ʻʻನಾನು ನನ್ನನ್ನು ಈ ಸಿನಿಮಾಗೆ ಮುಡಿಪಾಗಿಟ್ಟಿದ್ದೇನೆ. ಡೆಂಗ್ಯೂ ಜ್ವರದಿಂದ ಬಳಲಿದ್ದೇನೆ. ಕಡಿಮೆ ರಕ್ತ ಕಣಗಳ ನಡುವೆಯೂ ನಾನು ಶೂಟಿಂಗ್ನಲ್ಲಿ ಭಾಗಿಯಾಗಿದ್ದೇನೆ. ಅಷ್ಟೇ ಅಲ್ಲದೇ ಈ ಸಿನಿಮಾಗಾಗಿ ನನ್ನೆಲ್ಲ ಆಸ್ತಿಗಳನ್ನು ಅಡ ಇಟ್ಟಿದ್ದೇನೆ. ನಾನು ಸೋಷಿಯಲ್ ಮೀಡಿಯಾದಲ್ಲಿ ನನ್ನ ಭಾವನೆಗಳ ಬಗ್ಗೆ ತುಂಬ ಮುಕ್ತವಾಗಿ ಹೇಳಿದ್ದೇನೆ. ಏಕೆಂದರೆ ನಾನು ಅನಗತ್ಯವಾಗಿ ಚಿಂತಿಸುವುದನ್ನು ಬಯಸುವುದಿಲ್ಲ ಮತ್ತು ನಾನು ಎಡವುವುದನ್ನು ನೋಡಲು ಬಯಸುವವರು ನನ್ನನ್ನು ನೋಯಿಸಲು ಎಲ್ಲವನ್ನೂ ಮಾಡುತ್ತಿದ್ದಾರೆ. ನನ್ನ ನೋವಿನಿಂದ ಅವರಿಗೆ ಆನಂದವನ್ನು ನೀಡಲು ನಾನು ಬಯಸುವುದಿಲ್ಲ. ನಿಮ್ಮ ಕನಸುಗಳಿಗಾಗಿ ಅಥವಾ ನಿಮಗೆ ಬೇಕಾದುದನ್ನು ನೀವು ಕಷ್ಟಪಟ್ಟು ದುಡಿದು ಪಡೆದುಕೊಳ್ಳಬೇಕು. ಈ ಹಿಂದಿಗಿಂತಲೂ ಈ ಸಿನಿಮಾ ನನಗೆ ಪುನರ್ಜನ್ಮವಾಗಿದೆ. ನನ್ನ ತಂಡಕ್ಕೆ ಧನ್ಯವಾದಗಳು. ನನಗೆ ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಮಾತ್ರ ಬೇಕುʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Kangana Ranaut | ನಾನು ಯಾವತ್ತೂ ಆ ರೀತಿ ಡ್ಯಾನ್ಸ್ ಮಾಡಿಲ್ಲ: ಕಂಗನಾ ರಣಾವತ್
ಎಮರ್ಜೆನ್ಸಿ ಸಿನಿಮಾದಲ್ಲಿ ಕಂಗನಾ ಅವರು ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿತೇಶ್ ಶಾ ಕಥೆಯನ್ನು ಬರೆದಿದ್ದು, ಈ ಹಿಂದೆ ಅವರು ಕಂಗನಾ ಅವರ ಕೊನೆಯ ಚಿತ್ರ ಧಾಕಡ್ ಅನ್ನು ಸಹ ಬರೆದಿದ್ದಾರೆ. ಆದರೆ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಗಳಿಕೆ ಕಂಡಿರಲಿಲ್ಲ. ಅನುಪಮ್ ಖೇರ್, ಮಿಲಿಂದ್ ಸೋಮನ್, ಮಹಿಮಾ ಚೌಧರಿ, ಸತೀಶ್ ಕೌಶಿಕ್ ಮತ್ತು ಶ್ರೇಯಸ್ ತಲ್ಪಾಡೆ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ಅಸ್ಸಾಂನಲ್ಲಿ ಶೂಟಿಂಗ್ ಶೆಡ್ಯೂಲ್ ಮುಗಿಸಿದೆ. ಚಿತ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪಾತ್ರವನ್ನು ಶ್ರೇಯಸ್ ತಲ್ಪಾಡೆ ನಿರ್ವಹಿಸಲಿದ್ದಾರೆ. ʻಮೆಂಟಲ್ ಹೈ ಕ್ಯಾʼ, ʻಪಂಗಾʼ, ʻತಲೈವಿʼ ಮತ್ತು ʻಧಾಕಡ್ʼ ಸಿನಿಮಾಗಳಲ್ಲಿ ಕಂಗನಾ ಸೋತಿದ್ದಾರೆ. ಆದರೆ ಈ ಸಿನಿಮಾ ಗೆಲ್ಲುವ ವಿಶ್ವಾಸ ಅವರದಾಗಿದೆ.
ಇದನ್ನೂ ಓದಿ | Kangana Ranaut | 10 ಸಿನಿಮಾಗಳಲ್ಲಿ ನಟಿಸುತ್ತಿದ್ದಂತೆ ಕಂಗನಾಗೆ ಪದ್ಮಶ್ರೀ ಪ್ರಶಸ್ತಿ, ನಮಗೇಕಿಲ್ಲ: ನಟಿ ಜಯಸುಧಾ