ಬೆಂಗಳೂರು : ತೆಲುಗು ಮಾತ್ರವಲ್ಲ, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲಿ ಹೆಸರುವಾಸಿಯಾದ ನಟಿ ಜಯಸುಧಾ ಕೇಂದ್ರ ಸರಕಾರದ ವಿರುದ್ಧ ಗರಂ ಆಗಿದ್ದಾರೆ. ಸಿನಿಮಾದಲ್ಲಿನ ಸಾಧನೆಯನ್ನು ಗುರುತಿಸಿ ಈವರೆಗೂ ಕೇಂದ್ರದಿಂದ ಯಾವುದೇ ಪ್ರಶಸ್ತಿ ಅವರನ್ನು ಅರಸಿ ಬಂದಿಲ್ಲ. ನಂದಮೂರಿ ಬಾಲಕೃಷ್ಣ ಅವರು ನಡೆಸಿಕೊಡುವ ʻಅನ್‌ಸ್ಟಾಪೆಬಲ್ʼ ಒಟಿಟಿ ಕಾರ್ಯಕ್ರಮದಲ್ಲಿ ಕಂಗನಾ ರಣಾವತ್ (Kangana Ranaut) ಅವರ ಹೆಸರನ್ನೇ ಪ್ರಸ್ತಾಪಿಸಿ ತಾರತಮ್ಯದ ಕುರಿತು ನಟಿ ಜಯಸುಧಾ ಮಾತನಾಡಿದ್ದಾರೆ.
ನಟಿ ಜಯಸುಧಾ ಸಿನಿಮಾ ನಟನೆಯ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ರಾಜಕೀಯದಲ್ಲಿಯೂ ಜಯಸುಧಾ ಗುರುತಿಸಿಕೊಂಡಿದ್ದಾರೆ. ಇದೀಗ ಕಂಗನಾ ಅವರ ಕುರಿತು ಮಾತನಾಡಿ ‘ಕಂಗನಾ ಅವರು ಹತ್ತು ಸಿನಿಮಾಗಳಲ್ಲಿಯೂ ನಟಿಸಿಲ್ಲ. ಅವರ ಯಾವ ಸಾಧನೆಯನ್ನು ಪರಿಗಣಿಸಿ ಪದ್ಮಶ್ರೀ ಪ್ರಶಸ್ತಿ ನೀಡಿದ್ದಾರೆ. ನೂರಾರು ಚಿತ್ರಗಳಲ್ಲಿ ನಟಿಸಿರುವ ದಕ್ಷಿಣದ ಕಲಾವಿದರಿಗೆ ಯಾಕೆ ಪದ್ಮಶ್ರಿ ಪ್ರಶಸ್ತಿ’ ಇಲ್ಲವೆಂದು ಹೇಳಿದ್ದಾರೆ.
ಇದನ್ನೂ ಓದಿ | Nandamuri Balakrishna | ಅದ್ಧೂರಿಯಾಗಿ ಸೆಟ್ಟೇರಿದೆ ನಂದಮೂರಿ ಬಾಲಕೃಷ್ಣ 108ನೇ ಚಿತ್ರ: ಶ್ರೀಲೀಲಾ ನಾಯಕಿ!
ನಟಿ ಹೇಳಿದ್ದೇನು?
“ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದಕ್ಕೆ ನಮ್ಮ ತಕರಾರಿಲ್ಲ. ಅವರೊಬ್ಬ ಒಳ್ಳೆಯ ನಟಿ. ಕೇವಲ 10 ಸಿನಿಮಾಗಳಲ್ಲಿ ನಟಿಸುತ್ತಿದ್ದಂತೆ ಅವರಿಗೆ ಪದ್ಮಶ್ರೀ ಅವಾರ್ಡ್ ಸಿಕ್ಕಿತು. ಆದರೆ ನಾವು ಎಷ್ಟೋ ಸಿನಿಮಾ ಮಾಡಿದರೂ ಇನ್ನೂ ಸರ್ಕಾರದ ಗಮನಕ್ಕೆ ಬಂದಿಲ್ಲ” ಎಂದಿದ್ದಾರೆ.
ನಿರ್ದೇಶಕಿ ವಿಜಯ ನಿರ್ಮಲಾ ಕುರಿತು ಮಾತನಾಡಿ ʻʻ2002ರಲ್ಲಿ ಗಿನ್ನಿಸ್ ರೆಕಾರ್ಡ್ ಮಾಡಿದ ನಿರ್ದೇಶಕಿ ವಿಜಯ ನಿರ್ಮಲಾ ಅವರಿಗೂ ಈ ಗೌರವ ದಕ್ಕಿಲ್ಲ ಎಂಬುದೇ ಬೇಸರದ ಸಂಗತಿ. ಇಡೀ ವಿಶ್ವದಲ್ಲಿಯೇ ಮಹಿಳಾ ನಿರ್ದೇಶಕಿಯೊಬ್ಬರು 44 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ ಎಂದರೆ ವಿಜಯ ನಿರ್ಮಲಾ ಮಾತ್ರ. ಹೀಗೆ ದಕ್ಷಿಣ ಭಾರತ ಚಿತ್ರರಂಗವನ್ನು ಸರ್ಕಾರ ಕಡೆಗಣಿಸುತ್ತಿದೆʼʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Kangana Ranaut | ನಾನು ಯಾವತ್ತೂ ಆ ರೀತಿ ಡ್ಯಾನ್ಸ್ ಮಾಡಿಲ್ಲ: ಕಂಗನಾ ರಣಾವತ್