Site icon Vistara News

Sadguru Jaggi Vasudev: ಆಸ್ಪತ್ರೆ ಬೆಡ್‌ನಲ್ಲಿ ಸದ್ಗುರು; ದಿಗ್ಭ್ರಾಂತರಾದ ಕಂಗನಾ!

Kangana Ranaut with sadguru

ಬೆಂಗಳೂರು: ಗಂಭೀರವಾದ ಸಮಸ್ಯೆಯಿಂದಾಗಿ ಮೆದುಳಿನ ಸರ್ಜರಿಗೆ (Brain Surgery) ಒಳಗಾಗಿರುವ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್‌ (Sadguru Jaggi Vasudev), ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯ ಐಸಿಯು ಬೆಡ್‌ನಿಂದಲೇ ಅವರು ಮಾಡಿರುವ ವಿಡಿಯೊ ಸಂದೇಶ ಇದೀಗ ವೈರಲ್‌ (viral video) ಆಗಿದೆ. ಸದ್ಗುರು ಅವರ ಬಗ್ಗೆ ಈ ಸುದ್ದಿ ಕೇಳಿದ ಕೂಡಲೇ ಕಂಗನಾ ರಣಾವತ್ ಮಂಕಾಗಿದ್ದರಂತೆ. ನಟಿ ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಸದ್ಗುರು ಬಗ್ಗೆ ಕಂಗನಾ ರಣಾವತ್ ಹೇಳಿದ್ದೇನು?

ಸದ್ಗುರು ಅವರೊಂದಿಗಿನ ಭೇಟಿ ಮತ್ತು ಕೊಯಮತ್ತೂರಿನ ಇಶಾ ಫೌಂಡೇಶನ್‌ಗೆ ನಟಿ ಭೇಟಿ ಕೊಟ್ಟಿರುವ ಫೋಟೊಗಳನ್ನು ಕಂಗನಾ ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ. ಬುಧವಾರ (ಮಾ.20) ರಾತ್ರಿ ನಟಿ ಎಕ್ಸ್‌ನಲ್ಲಿ ʻʻನಾನು ಸದ್ಗುರುಜಿ ಐಸಿಯು ಹಾಸಿಗೆಯ ಮೇಲೆ ಮಲಗಿರುವುದನ್ನು ನೋಡಿದೆ. ದೇವರೇ ಕುಸಿದುಬಿದ್ದಂತೆ ಭಾಸವಾಯ್ತು. ಅವರು ನಮ್ಮಂತೆ ಮೂಳೆಗಳು, ರಕ್ತ, ಮಾಂಸ ಹೊಂದಿದ್ದಾರೆ ಎಂದು ನನಗೆ ಎಂದಿಗೂ ಅನಿಸಿರಲಿಲ್ಲ. ಭೂಮಿಯು ಪಲ್ಲಟಗೊಂಡಿದೆ ಎಂದು ನಾನು ಭಾವಿಸಿದೆ. ಒಂದು ಕ್ಷಣ ನನ್ನ ತಲೆ ತಿರುಗಿ ಹೋಯ್ತು. ನಾನು ಈ ವಾಸ್ತವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎನಿಸಿತು. ಇದನ್ನು ನಂಬಬಾರದು ಎಂದುಕೊಂಡೆ. ನಂತರ ಕಣ್ಣೀರು ಬಂತು. ಲಕ್ಷಾಂತರ ಭಕ್ತರು ನನ್ನಂತೇ ದುಃಖವನ್ನು ಹಂಚಿಕೊಳ್ಳುತ್ತಾರೆ. ಈ ಕ್ಷಣ ನಿರ್ಜೀವವಾಗಿದೆʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Sadguru Jaggi Vasudev: ಆಸ್ಪತ್ರೆ ಬೆಡ್‌ನಲ್ಲೂ ಸದ್ಗುರು ಜಗ್ಗಿ ವಾಸುದೇವ್‌ ತಮಾಷೆ! ವೈರಲ್‌ ಆಯ್ತು ವಿಡಿಯೋ

ಪ್ರಧಾನಿ ನರೇಂದ್ರ ಮೋದಿ ಅವರು ಸದ್ಗರುವಿನೊಂದಿಗೆ ಮಾತನಾಡಿದ್ದು, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. “ಸದ್ಗುರು ಅವರೊಂದಿಗೆ ಮಾತನಾಡಿದ್ದೇನೆ. ಅವರಿಗೆ ಉತ್ತಮ ಆರೋಗ್ಯ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದೇನೆ” ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೋದಿಯವರ ಸಂದೇಶಕ್ಕೆ ಪ್ರತಿಕ್ರಿಯಿಸಿದ ಸದ್ಗುರು, “ಪ್ರೀತಿಯ ಪ್ರಧಾನ ಮಂತ್ರಿಜೀ, ನನ್ನ ಬಗ್ಗೆ ಕಳವಳ ಪಡಬೇಡಿ. ನಿಮಗೆ ಮುನ್ನಡೆಸಲು ಒಂದು ದೇಶವೇ ಇದೆ. ನಿಮ್ಮ ಕಾಳಜಿಯಿಂದ ನನ್ನ ಹೃದಯ ತುಂಬಿದೆ. ನಾನು ಚೇತರಿಕೆಯ ಹಾದಿಯಲ್ಲಿದ್ದೇನೆ. ಧನ್ಯವಾದ” ಎಂದಿದ್ದಾರೆ.

ಸದ್ಗುರುಗಳ ಬಗ್ಗೆ ಆಸ್ಪತ್ರೆ ಏನು ಹೇಳಿದೆ?

ದೆಹಲಿಯ ಇಂದ್ರಪ್ರಸ್ಥ ಅಪೋಲೋ ಹಾಸ್ಪಿಟಲ್ಸ್‌ನ ಹಿರಿಯ ಸಲಹೆಗಾರ, ನರರೋಗ ತಜ್ಞ ಡಾ. ವಿನಿತ್ ಸೂರಿ ಅವರ ಬಳಿ ಮಾರ್ಚ್ 15ರ ಮಧ್ಯಾಹ್ನ 3.45ರ ಸುಮಾರಿಗೆ ಸದ್ಗುರು ತೀವ್ರ ತಲೆನೋವಿನ ಕಾರಣ ಸಮಾಲೋಚಿಸಿದ್ದರು. ವಿನಿತ್ ಸೂರಿ ಅವರು ತಕ್ಷಣವೇ ಇದು ಸಬ್-ಡ್ಯೂರಲ್ ಹೆಮಟೋಮಾ ಇರಬಹುದು ಎಂದು ಶಂಕಿಸಿದ್ದರು. ತುರ್ತು MRI ಸ್ಕ್ಯಾನ್‌ಗೆ ಸಲಹೆ ನೀಡಿದ್ದರು. ಅದೇ ದಿನ ಸಂಜೆ 4.30ಕ್ಕೆ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ಸದ್ಗುರು ಮೆದುಳಿನ ಎಂಆರ್‌ಐ ಮಾಡಿಸಿಕೊಂಡರು. ಮೆದುಳಿನಲ್ಲಿ ಭಾರೀ ರಕ್ತಸ್ರಾವ ಕಂಡುಬಂದಿತ್ತು.

24-48 ಗಂಟೆಗಳ ಅವಧಿಯಲ್ಲಿನ ಹೊಸ ರಕ್ತಸ್ರಾವದ ಜೊತೆಗೆ, 3-4 ವಾರಗಳ ಅವಧಿಯ ಹಿಂದಿನ ದೀರ್ಘಕಾಲದ ರಕ್ತಸ್ರಾವದ ಗುರುತೂ ಇತ್ತು. ಸದ್ಗುರುಗಳಿಗೆ ತಕ್ಷಣವೇ ಆಸ್ಪತ್ರೆಗೆ ಸೇರಲು ಸಲಹೆ ನೀಡಲಾಯಿತು. ಆದರೆ ಅವರು ಮಾರ್ಚ್ 15ರಂದು ಸಂಜೆ 6 ಗಂಟೆಗೆ ಮತ್ತು ಮಾರ್ಚ್ 16ರಂದು ಇಂಡಿಯಾ ಟುಡೇ ಸಮಾವೇಶದಲ್ಲಿ ಭಾಗವಹಿಸಲಿದ್ದರು.

ಕಳೆದ ನಾಲ್ಕು ವಾರಗಳಿಂದ ಸದ್ಗುರು ತೀವ್ರ ತಲೆನೋವಿನಿಂದ ಬಳಲುತ್ತಿದ್ದರು ಎಂದು ಆಸ್ಪತ್ರೆ ತಿಳಿಸಿದೆ. ನೋವಿನ ತೀವ್ರತೆಯ ಹೊರತಾಗಿಯೂ, ಅವರು ತಮ್ಮ ಸಾಮಾನ್ಯ ದೈನಂದಿನ ವೇಳಾಪಟ್ಟಿ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಮುಂದುವರಿಸಿದರು ಮತ್ತು ಮಾರ್ಚ್ 8ರಂದು ಮಹಾ ಶಿವರಾತ್ರಿ ಕಾರ್ಯಕ್ರಮವನ್ನು ಸಹ ನಡೆಸಿದರು.

Exit mobile version