Site icon Vistara News

Kangana Ranaut: ರಾಜಕೀಯಕ್ಕಿಂತ ಸಿನಿಮಾ ಬೆಸ್ಟ್​ ಎಂದ ಕಂಗನಾ! ಪೊಲಿಟಿಕಲ್​ ಜರ್ನಿ ವಿವರಿಸಿದ ನಟಿ

Kangana Ranaut says work in the film industry is easier than politics

ಬೆಂಗಳೂರು: ಕಂಗನಾ ರಣಾವತ್ (Kangana Ranaut) ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಮಂಡಿ ಕ್ಷೇತ್ರದಿಂದ ಗೆದ್ದಿದ್ದಾರೆ. ಇದೀಗ ಕಂಗನಾ ಅವರು ಸಂದರ್ಶನವೊಂದರಲ್ಲಿ ರಾಜಕೀಯಕ್ಕಿಂತ ಸಿನಿಮಾಗಳಲ್ಲಿ ಕೆಲಸ ಮಾಡುವುದು ತುಂಬಾ ಸುಲಭ ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆಯೂ ರಾಜಕೀಯಕ್ಕೆ ಸೇರಲು ಹಲವು ಆಫರ್‌ಗಳು ಬಂದಿದ್ದವು ಎಂದು ಹೇಳಿಕೊಂಡಿದ್ದಾರೆ.

ಸಂದರ್ಶನದ ವೇಳೆ ಕಂಗನಾ ಮಾತನಾಡಿ, “ರಾಜಕೀಯಕ್ಕೆ ಸೇರಲು ನನ್ನನ್ನು ಸಂಪರ್ಕಿಸಿದ್ದು ಇದೇನು ಮೊದಲಲ್ಲ. ನಾನು ಈ ಹಿಂದೆ ಹಲವಾರು ಇತರ ಆಫರ್‌ಗಳನ್ನು ಸ್ವೀಕರಿಸಿದ್ದೇನೆ. ʻಗ್ಯಾಂಗ್‌ಸ್ಟರ್ʼ ಸಿನಿಮಾ ಬಳಿಕವೇ ನನಗೆ ಆಫರ್‌ ಬಂದಿತ್ತು. ನನ್ನ ದೊಡ್ಡಪ್ಪ ಕೂಡ ಶಾಸಕರಾಗಿದ್ದರು. ಹಾಗಾಗಿ ರಾಜಕೀಯ ಹಿನ್ನೆಲೆಯ ಕುಟುಂಬ ನಮ್ಮದಾಗಿದ್ದರಿಂದ ಹಲವು ನಾಯಕರು ನಮ್ಮನ್ನು ಸಂಪರ್ಕಿಸುತ್ತಾರೆ. ಇದು ತುಂಬಾ ಸಾಮಾನ್ಯವಾಗಿದೆ. ವಾಸ್ತವವಾಗಿ, ನನ್ನ ತಂದೆಗೆ ಆಫರ್ ಬಂದಿತ್ತು. ನನ್ನ ತಂಗಿ ಆ್ಯಸಿಡ್ ದಾಳಿಯಿಂದ ಬದುಕುಳಿದ ನಂತರ ರಾಜಕೀಯ ಸೇರಲು ಆಫರ್ ಬಂದಿತ್ತುʼʼಎಂದು ಹೇಳಿಕೊಂಡಿದ್ದಾರೆ.

ರಾಜಕೀಯಕ್ಕಿಂತ ಸಿನಿಮಾಗಳಲ್ಲಿ ಕೆಲಸ ಮಾಡುವುದು ತುಂಬಾ ಸುಲಭ ಎಂದು ಹೇಳಿಕೊಂಡಿದ್ದಾರೆ ಕಂಗನಾ. ʻʻನಾನು ಹೆಚ್ಚಾಗಿ ನನ್ನ ಆಸಕ್ತಿದಾಯಕ ಕ್ಷೇತ್ರಗಳಿಗೆ ಗಮನ ಕೊಡುವ ವ್ಯಕ್ತಿ. ನಟನೆ, ಬರಹ, ನಿರ್ದೇಶನ, ಸಿನಿಮಾ ಹೀಗೆ ಎಲ್ಲದರಲ್ಲಿಯೂ ನನಗೆ ಆಸಕ್ತಿ ತುಂಬ ಇದೆ. ಇನ್ನು ರಾಜಕೀಯಕ್ಕಿಂತ ಸಿನಿಮಾಗಳಲ್ಲಿ ಕೆಲಸ ಮಾಡುವುದು ತುಂಬಾ ಸುಲಭ. ರಾಜಕೀಯದಲ್ಲಿ ತೊಂದರೆಗೊಳಗಾದ ಜನರು ಮಾತ್ರ ನಿಮ್ಮನ್ನು ನೋಡಲು ಬರುತ್ತಾರೆ. ಆದರೆ ಸಿನಿಮಾದಲ್ಲಿ ಹಾಗಲ್ಲ. ಸಿನಿಮಾ ನೋಡಲು ಹೋದವರು ಮರಳಿ ಬರುವಾಗ ನಿರಾಳರಾಗಿ ಬರುತ್ತಾರೆʼʼಎಂದರು.

ಇದನ್ನೂ ಓದಿ: Kangana Ranaut Saree Fashion: ದೇಸಿ ಸೀರೆ ನೇಯ್ದ ನೇಕಾರರಿಗೆ ಥ್ಯಾಂಕ್ಸ್ ಹೇಳಿದ ಕಂಗನಾ ರಣಾವತ್!

ಇನ್ನು ಕಂಗನಾ ಅವರ ಎಮರ್ಜೆನ್ಸಿ ಸಿನಿಮಾ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಬೇಕಿದೆ. ಈ ಸಿನಿಮಾದಲ್ಲಿ ಕಂಗನಾ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಎಮರ್ಜೆನ್ಸಿಯಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಕೂಡ ಕಾಣಿಸಿಕೊಂಡಿದ್ದಾರೆ. ಎಮರ್ಜೆನ್ಸಿ ಸಿನಿಮಾದಲ್ಲಿ ಕಂಗನಾ ಅವರು ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿತೇಶ್ ಶಾ ಕಥೆಯನ್ನು ಬರೆದಿದ್ದು, ಈ ಹಿಂದೆ ಅವರು ಕಂಗನಾ ಅವರ ಕೊನೆಯ ಚಿತ್ರ ಧಾಕಡ್ ಅನ್ನು ಸಹ ಬರೆದಿದ್ದಾರೆ. ಆದರೆ ಬಾಕ್ಸ್‌ ಆಫೀಸ್‌ನಲ್ಲಿ ಸಿನಿಮಾ ಗಳಿಕೆ ಕಂಡಿರಲಿಲ್ಲ. ಅನುಪಮ್ ಖೇರ್, ಮಿಲಿಂದ್ ಸೋಮನ್, ಮಹಿಮಾ ಚೌಧರಿ, ಸತೀಶ್ ಕೌಶಿಕ್ ಮತ್ತು ಶ್ರೇಯಸ್ ತಲ್ಪಡೆ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪಾತ್ರವನ್ನು ಶ್ರೇಯಸ್ ತಲ್ಪಡೆ ನಿರ್ವಹಿಸಲಿದ್ದಾರೆ.

ಸಿಐಎಸ್ಎಫ್ ಕಾನ್ಸ್‌ಟೇಬಲ್ ಕಪಾಳಮೋಕ್ಷ

ಕಂಗನಾ ರಣಾವತ್ ಜೂನ್ 6 ರಂದು ನವದೆಹಲಿಗೆ ಪ್ರಯಾಣಿಸುತ್ತಿದ್ದಾಗ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಐಎಸ್ಎಫ್ ಕಾನ್ಸ್‌ಟೇಬಲ್ ಕಪಾಳಮೋಕ್ಷ ಮಾಡಿದ್ದರು. 2020 ರಲ್ಲಿ, ಕಂಗನಾ ರಣಾವತ್‌ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದ ಪಂಜಾಬ್​ನ ಮಹಿಳೆಯೊಬ್ಬರನ್ನು ತಪ್ಪಾಗಿ ಅಂದಾಜಿಸಿದ್ದರು. ಅದಕ್ಕಿಂತ ಹಿಂದೆ ಶಾಹೀನ್ ಬಾಗ್​ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಿಲ್ಕಿಸ್ ಬಾನೊ ಅವರು ಎಂದುಕೊಂಡಿದ್ದರು. ಪ್ರತಿಭಟನೆಗೆ ಬರುವ ಮಹಿಳೆಯರೆಲ್ಲರೂ 100 ರೂಪಾಯಿಗೆ ಸಿಗುತ್ತಾರೆ ಎಂದು ಹೇಳಿದ್ದರು. ಇದು ದೊಡ್ಡ ವಿವಾದ ಸೃಷ್ಟಿಸಿತ್ತು. ಅಂದ ಹಾಗೆ ಕಂಗನಾಗೆ ಹೊಡೆದ ಕಾನ್​ಸ್ಟೇಬಲ್​ ಕುಲ್ವಿಂದರ್ ಕೌರ್​ ತಾಯಿಯೂ ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಂಗನಾ ಹೇಳಿಕೆಯಿಂದ ಕೋಪಗೊಂಡಿದ್ದ ಅವರು ಪ್ರತಿಕಾರ ತೀರಿಸಲು ಕಾದಿದ್ದರು. ಅಂತೆಯೇ ಚಂಡಿಗಢದಲ್ಲಿ ತಪಾಸಣಾ ಕೇಂದ್ರಕ್ಕೆ ಬರುತ್ತಿದ್ದಂತೆ ಕಪಾಳ ಮೋಕ್ಷ ಮಾಡಿದ್ದಾರೆ.

Exit mobile version