ಮುಂಬೈ: ಬಾಲಿವುಡ್ನ ಕ್ವೀನ್ ಕಂಗನಾ ರಣಾವತ್ (Kangana Ranaut) ಅತ್ಯದ್ಭುತ ನಟಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ಗಳಿಸಿಕೊಂಡಿರುವ ನಟಿ ಅವರು. ಆದರೆ ಅವರ ಕೊನೆಯ ಆ್ಯಕ್ಷನ್ ಸಿನಿಮಾವಾದ ಧಾಕಡ್ ಮಾತ್ರ ದೊಡ್ಡ ಮಟ್ಟದಲ್ಲಿ ಸೋಲು ಕಂಡಿದೆ. ಅದರ ಬೆನ್ನಲ್ಲೇ ನಟಿ ಇದೀಗ ಮತ್ತೊಂದು ಆ್ಯಕ್ಷನ್ ಸಿನಿಮಾ ಮಾಡುವುದಕ್ಕೆ ಸಜ್ಜಾಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಕೆಲವರು ಅವರನ್ನು ಟೀಕಿಸಲೂ ಆರಂಭಿಸಿದ್ದಾರೆ.
ಪ್ರಸಿದ್ಧ ಪೌಷ್ಟಿಕ ತಜ್ಞೆ ಡಾ. ಅಂಜಲಿ ಮುಖರ್ಜಿ ಅವರೊಂದಿಗಿನ ಫೋಟೊ ಹಂಚಿಕೊಂಡಿರುವ ನಟಿ ಕಂಗನಾ, “ಡಾ. ಅಂಜಲಿ ಅವರು ನೋಡುವುದಕ್ಕೆ ನನಗಿಂತ ಚಿಕ್ಕವರಂತೆ ಕಾಣುತ್ತಾರೆ. ಆದರೆ ಅವರ ಮಗಳು ನನ್ನ ವಯಸ್ಸಿನವಳು. ಆಹಾರವೇ ಎಲ್ಲ. ಈ ಬಾರಿ ನಾನು ಅದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. 10 ವರ್ಷಗಳ ಹಿಂದೆ ಅಂಜಲಿ ಅವರು ಕ್ರಿಶ್ 3 ಸಿನಿಮಾಗಾಗಿ ನನ್ನನ್ನು ಅದ್ಭುತವಾಗಿ ಬದಲಾಯಿಸಿದ್ದರು. ಈಗ ಮತ್ತೆ ಅವರೊಂದಿಗೆ ಕೆಲಸ ಮಾಡಲು ನಾನು ಉತ್ಸುಕಳಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಫೋಟೋ ಹಂಚಿಕೊಂಡಿರುವ ಕಂಗನಾ, “ಮತ್ತೊಂದು ಆ್ಯಕ್ಷನ್ ಸಿನಿಮಾ, ಮತ್ತೊಂದು ರೂಪಾಂತರ.. ನನ್ನ ಮೆಚ್ಚಿನ ನಿರ್ದೇಶಕರೊಂದಿಗೆ ಸಿನಿಮಾ ಮಾಡುತ್ತಿದ್ದೇನೆ. ಸದ್ಯದಲ್ಲೇ ಅದರ ಘೋಷಣೆಯಾಗಲಿದೆ” ಎಂದು ತಿಳಿಸಿದ್ದಾರೆ.
ನಟಿಯ ಈ ಪೋಸ್ಟ್ ಬಗ್ಗೆ ಹಲವಾರು ರೀತಿಯ ವಿಚಾರಗಳು ಚರ್ಚೆಯಲ್ಲಿವೆ. ಅನೇಕ ಅಭಿಮಾನಿಗಳು ನೆಚ್ಚಿನ ನಟಿಯ ಆ್ಯಕ್ಷನ್ ನೋಡುವುದಕ್ಕೆ ಕಾತುರದಿಂದ ಕಾಯುತ್ತಿರುವುದಾಗಿ ಹೇಳಿದರೆ ಇನ್ನು ಕೆಲವರು ಹಿಂದಿನ ಸಿನಿಮಾದಂತೆಯೇ ಇದು ಕೂಡ ನೆಲ ಕಚ್ಚಲಿದೆ ಎಂದು ಟೀಕಿಸಲಾರಂಭಿಸಿದ್ದಾರೆ.
ಇದನ್ನೂ ಓದಿ: Kangana Ranaut : ಪ್ರಿಯಾಂಕಾ ಭಾರತ ಬಿಟ್ಟು ಹೋಗುವುದಕ್ಕೆ ಕರಣ್ ಜೋಹರ್ ಕಾರಣ ಎಂದ ಕಂಗನಾ!
ರಾಷ್ಟ್ರಪ್ರಶಸ್ತಿ ವಿಜೇತ ಕಂಗನಾ ಅವರ ಮುಂಬರುವ ಚಿತ್ರ ಎಮರ್ಜೆನ್ಸಿ. ಅದರಲ್ಲಿ ಅವರು ದಿ. ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಈ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನೂ ಸಹ ಕಂಗನಾ ಅವರೇ ಹೊತ್ತಿದ್ದಾರೆ. ನಿರ್ದೇಶಕಿಯಾಗಿ ಕಂಗನಾ ಅವರ ಮೊದಲನೇ ಸಿನಿಮಾ ಇದಾಗಿರಲಿದೆ. ಇದರಲ್ಲಿ ಹಿರಿಯ ನಟ ಅನುಪಮ್ ಖೇರ್, ಸತೀಶ್ ಕೌಶಿಕ್, ಶ್ರೇಯಸ್ ತಲ್ಪಾಡೆ ಸೇರಿ ಅನೇಕರು ನಟಿಸಿದ್ದಾರೆ.