Site icon Vistara News

Kangana Ranaut: ವಿನೇಶ್‌ಗೆ ಅಭಿನಂದಿಸಿ ವ್ಯಂಗ್ಯದ ಪೋಸ್ಟ್ ಮಾಡಿದ ಬೆನ್ನಲ್ಲೇ ರಾಷ್ಟ್ರವು ನಿಮ್ಮೊಂದಿಗೆ ನಿಂತಿದೆ ಎಂದ ಕಂಗನಾ ರಣಾವತ್‌!

Kangana Reacts to Vinesh Phogat's Olympics Disqualification

ಬೆಂಗಳೂರು: ಪ್ಯಾರಿಸ್ 2024ರ ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯಿಂದ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡ ನಂತರ ನಟಿ-ರಾಜಕಾರಣಿ ಕಂಗನಾ ರಣಾವತ್‌ (Kangana Ranaut) ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನ 50 ಕಿಲೋ ತೂಕದ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಫೈನಲ್‌ಗೂ ಮುನ್ನ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿತ್ತು. ಬುಧವಾರ ಸಂಜೆ ನಡೆಯಲಿದ್ದ ಫೈನಲ್‌ ಪಂದ್ಯಕ್ಕೂ ಮುನ್ನ ಬೆಳಿಗ್ಗೆ 100 ಗ್ರಾಂ ಹೆಚ್ಚಿನ ತೂಕವನ್ನು ಹೊಂದಿರುವ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ಅವರನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಿದ್ದು, ಕೋಟ್ಯಂತರ ಭಾರತೀಯರ ಚಿನ್ನದ ಪದಕದ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ.  ಇದೀಗ ಈ ಬಗ್ಗೆ ಕಂಗನಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಈ ಸುದ್ದಿಗೆ ಪ್ರತಿಕ್ರಿಯಿಸಿದ ಕಂಗನಾ ರಣಾವತ್‌ ಇನ್‌ಸ್ಟಾದಲ್ಲಿ ʻʻಸಿಂಹಿಣಿʼʼಎಂದು ಕರೆದಿದ್ದಾರೆ. ʻʻಅಳಬೇಡ, ವಿನೇಶ್, ಇಡೀ ರಾಷ್ಟ್ರವು ನಿಮ್ಮೊಂದಿಗೆ ನಿಂತಿದೆ” ಎಂದು ಫೋಟೊ ಶೇರ್‌ ಮಾಡಿಕೊಂಡಿದ್ದಾರೆ. ವಿನೇಶ್‌ರನ್ನು ಸಾಂತ್ವನಗೊಳಿಸುವ ಭಾರತದ ನಕ್ಷೆಯಗ್ರಾಫಿಕ್ ಪೋಸ್ಟ್‌ ಶೇರ್‌ ಮಾಡಿಕೊಂಡಿದ್ದಾರೆ ಕಂಗನಾ.

ಇದಕ್ಕೂ ಮೊದಲು ಕಂಗನಾ ಇನ್‌ಸ್ಟಾ ಸ್ಟೋರಿಯಲ್ಲಿ, ‘ಭಾರತಕ್ಕೆ ಮೊದಲ ಚಿನ್ನ ಸಿಗಲಿ ಎಂದು ನಾನು ಪ್ರಾರ್ಥಿಸುತ್ತಿದ್ದೇನೆ. ವಿನೇಶ್ ಫೋಗಟ್ ಒಮ್ಮೆ ಚಳವಳಿಯಲ್ಲಿ ಭಾಗವಹಿಸಿದ್ದರು, ಅದರಲ್ಲಿ ಅವರು ‘ಮೋದಿ ನಿಮ್ಮ ಸಮಾಧಿಯನ್ನು ಅಗೆಯುತ್ತಾರೆ’ ಎಂದು ಹೇಳಿದ್ದರು. ಇದರ ಹೊರತಾಗಿಯೂ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ. ಅವರು ಅತ್ಯುತ್ತಮ ತರಬೇತಿ, ತರಬೇತುದಾರರು ಮತ್ತು ಸೌಲಭ್ಯಗಳನ್ನು ಪಡೆದರು. ಇದು ಪ್ರಜಾಪ್ರಭುತ್ವದ ಸೌಂದರ್ಯ ಮತ್ತು ಉತ್ತಮ ನಾಯಕ’ ಎಂದು ಹೇಳಿದ್ದರು. ಈ ಹೇಳಿಕೆಗೆ ಸಖತ್‌ ಚರ್ಚೆಯೂ ಆಗಿತ್ತು.

ಇದನ್ನೂ ಓದಿ: Actor Dhanush: ಧನುಷ್ ನಟನೆಯ ʻ50ʼನೇ ಸಿನಿಮಾ ಒಟಿಟಿ ಬಿಡುಗಡೆ ಯಾವಾಗ, ಎಲ್ಲಿ?

ಕಳೆದ ವರ್ಷ, 29 ವರ್ಷದ ಕುಸ್ತಿಪಟು ವಿನೇಶ್ ಫೋಗಟ್ ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಮುಖ್ಯಸ್ಥ, ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಈ ಪ್ರಕರಣಕ್ಕೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸದೇ ಇದ್ದಾಗ ನಿರಂತರವಾಗಿ ಪ್ರತಿಭಟನೆಗಳನ್ನು ಮುನ್ನಡೆಸುವಾಗ ಅವರು ದೀರ್ಘಕಾಲದವರೆಗೆ ಕುಸ್ತಿಯಿಂದ ದೂರವಿದ್ದರು.

ಬೆಳ್ಳಿ ಪದಕಕ್ಕಾಗಿ ಕೋರ್ಟ್‌ ಕದ ತಟ್ಟಿದ ವಿನೇಶ್‌ ಫೋಗಟ್‌

ಜಂಟಿಯಾಗಿ ಬೆಳ್ಳಿ ಪದಕ ಹಸ್ತಾಂತರಿಸುವಂತೆ ಕೋರಿ ವಿನೇಶ್‌ ಫೋಗಟ್‌ ಮನವಿ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ಕೋರ್ಟ್‌ (CAS) ತನ್ನ ಅಂತಿಮ ತೀರ್ಪನ್ನು ಇಂದು (ಆಗಸ್ಟ್‌ 8) ಬೆಳಿಗ್ಗೆ 11:30ಕ್ಕೆ ಪ್ರಕಟಿಸಲಿದೆ. ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು ಫೋಗಟ್ ಪರವಾಗಿ ತೀರ್ಪು ನೀಡಿದರೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (International Olympic Committee) ಬೆಳ್ಳಿ ಪದಕ ನೀಡಬೇಕಾಗುತ್ತದೆ. ಹೀಗಾಗಿ ತೀರ್ಪಿಗಾಗಿ ಭಾರತೀಯರು ನಿರೀಕ್ಷೆಯೆಂದ ಕಾದು ಕುಳಿತ್ತಿದ್ದಾರೆ. ಯಾವುದೇ ಕ್ರೀಡಾ ಕೂಟದ ವೇಳೆ ಉದ್ಭವಿಸಬಹುದಾದ ವಿವಾದಗಳನ್ನು ಪರಿಹರಿಸಲು ಅಂತಾರಾಷ್ಟ್ರೀಯ ಸಂಸ್ಥೆ ಸಿಎಎಸ್‌ಯನ್ನು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಸ್ಥಾಪಿಸಲಾಗಿದೆ.

ನಿವೃತ್ತಿ ಘೋಷಣೆ

ಇದೀಗ 29 ವರ್ಷದ ವಿನೇಶ್‌ ಫೋಗಟ್‌ ಅವರು ಕುಸ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಗುರುವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. “ಕುಸ್ತಿ ನನ್ನ ವಿರುದ್ಧ ಪಂದ್ಯವನ್ನು ಗೆದ್ದಿದೆ. ನಾನು ಸೋತೆ.. ನಿಮ್ಮ ಕನಸುಗಳು ಮತ್ತು ನನ್ನ ಧೈರ್ಯ ಛಿದ್ರವಾಗಿದೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ. ಗುಡ್ ಬೈ ಕುಸ್ತಿ 2001-2024. ನಿಮ್ಮೆಲ್ಲರಿಗೂ ನಾನು ಎಂದೆಂದಿಗೂ ಋಣಿಯಾಗಿರುತ್ತೇನೆ. ಕ್ಷಮಿಸಿ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

Exit mobile version