Site icon Vistara News

Kannada Actor Suraj: ಸೂರಜ್‌ಗೆ ಕಾಲು ಕತ್ತರಿಸಿದ್ದು ಗೊತ್ತಾಗಿದ್ದೇ ನಾಲ್ಕು ದಿನಗಳ ಬಳಿಕ!

Kannada Actor Suraj

ಬೆಂಗಳೂರು: ಪಾರ್ವತಮ್ಮ ರಾಜ್​ಕುಮಾರ್ (Parvathamma Rajkumar)​ ಅವರ ತಮ್ಮ ಶ್ರೀನಿವಾಸ್ ಪುತ್ರನಾದ ಸೂರಜ್ (ಧ್ರುವನ್‌)​ (Kannada Actor Suraj) ಅವರು ಗಂಭೀರ ಅಪಘಾತಕ್ಕೆ ಒಳಗಾಗಿ ಬಲಗಾಲಿಗೆ ತೀವ್ರ ಪೆಟ್ಟು ಬಿದ್ದಿದ್ದು, ಅವರ ಬಲಗಾಲಿನ ಒಂದು ಭಾಗವನ್ನು ಕತ್ತರಿಸಿ ತೆಗೆಯಲಾಗಿದೆ. ಈ ಕುರಿತು ಮಣಿಪಾಲ್ ಆಸ್ಪತ್ರೆಯ ವೈದ್ಯ ಅಜಯ್ ಹೆಗಡೆ (Ajay Hegde) ಈ ಬಗ್ಗೆ ಮಾಹಿತಿ ಮಾಧ್ಯಮಕ್ಕೆ ಹಂಚಿಕೊಂಡಿದ್ದಾರೆ.

ʼ‘ಸೂರಜ್ ಅವರನ್ನು ಆಸ್ಪತ್ರೆಗೆ ಸೇರಿಸಿದಾಗ ಬಲಗಾಲಿನಲ್ಲಿ ತೀವ್ರ ರಕ್ತಸ್ರಾವ ಆಗಿತ್ತು. ಬಲ ಮೊಣಕಾಲಿಗೆ ಸಾಕಷ್ಟು ಏಟು ಬಿದ್ದಿರುವುದರಿಂದ ಕತ್ತರಿಸಿ ತೆಗೆಯುವುದು ಅನಿವಾರ್ಯವಾಗಿತ್ತು. ಅಪಘಾತದ ದಿನ ಅವರನ್ನು ವೆಂಟಿಲೇಟರ್ ನಲ್ಲೇ ಇಟ್ಟು ಚಿಕಿತ್ಸೆ ನೀಡಲಾಯಿತು. ಕಾಲಿನಲ್ಲಿ 6 ಇಂಚಿನಷ್ಟು ಜಾಗದಲ್ಲಿ ಮೂಳೆ ಹಾಗೂ ನರಗಳೇ ಇರಲಿಲ್ಲ. ಜಜ್ಜಿ ಹೋಗಿದ್ದವು. ಕಾಲಿನ ಭಾಗ ಕತ್ತರಿಸಿ ತೆಗೆದಿದ್ದನ್ನು ನಾಲ್ಕು ದಿನಗಳ ಬಳಿಕ ಅವರಿಗೆ ಹೇಳಲಾಯಿತು’ʼ ಎಂದಿದ್ದಾರೆ ಡಾ. ಅಜಯ್ ಹೆಗಡೆ.

ಒಟ್ಟು ನಾಲ್ಕರಿಂದ ಐದು ತಾಸುಗಳ ಕಾಲ ಸೂರಜ್ ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇನ್ನೂ ಕೆಲವು ತಿಂಗಳ ಕಾಲ ಚಿಕಿತ್ಸೆಯ ಅಗತ್ಯವಿದೆ. ಪ್ರಸ್ತುತ ಹಿಮೋಗ್ಲೋಬಿಕ್ ಕೊರತೆಯಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಘಟನೆಯನ್ನು ಅವರು ಶಾಂತವಾಗಿ ಸ್ವೀಕರಿಸಿದ್ದಾರೆ ಎಂದೂ ವಿವರಿಸಿದರು.

ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಟಿಪ್ಪರ್ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೂಲ ಸೂರಜ್ ಅಂತಿದ್ದ ಹೆಸರನ್ನು ಧ್ರುವನ್ ಎಂದು ಹೆಸರು ಬದಲಾಯಿಸಿಕೊಂಡು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದರು. ಭಗವಾನ್ ಶ್ರೀಕೃಷ್ಣ ಪರಮಾತ್ಮ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.

ಇದನ್ನೂ ಓದಿ: Parvathamma Rajkumar: ಗಂಭೀರ ಅಪಘಾತ; ಕಾಲು ಕಳೆದುಕೊಂಡ ದೊಡ್ಮನೆ ಕುಟುಂಬದ ನಟ ಸೂರಜ್

ಶನಿವಾರ (ಜೂನ್​ 24) ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ (Suraj Accident) ಅವರು ಗಂಭೀರವಾಗಿ ಗಾಯಗೊಂಡಿದ್ದರು. ಬೈಕ್​ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಅಪಘಾತವಾಗಿದ್ದು ಸೂರಜ್​ ಬಲ​ಗಾಲಿನ ಮೇಲೆ ಟಿಪ್ಪರ್ ಹರಿದಿತ್ತು. ಸೂರಜ್ ಬಲಗಾಲಿಗೆ ಗಂಭೀರ ಗಾಯ ಆಗಿದ್ದ ಕಾರಣ ವೈದ್ಯರು ಮಂಡಿವರೆಗೂ ಬಲಗಾಲನ್ನು ಕತ್ತರಿಸಿ ತೆಗಿದಿದ್ದರು.

Exit mobile version