ಬೆಂಗಳೂರು : ಕನ್ನಡದ ಪ್ರಖ್ಯಾತ ಹಿರಿಯ ನಟಿ ಲೀಲಾವತಿ (Actress Leelavathi) ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ನೆಲಮಂಗಲದ ಬಳಿಯ ಅವರ ತೋಟದ ಮನೆಯಲ್ಲಿಯೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ನಟಿ ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿ ಕ್ಷೇಮ ವಿಚಾರಿಸಿದ್ದಾರೆ.
ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಳಂ ಭಾಷೆಗಳಲ್ಲಿ ಸೇರಿದಂತೆ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರಿಗೆ 1999-2000 ಸಾಲಿನಲ್ಲಿ ಕರ್ನಾಟಕ ಚಲನಚಿತ್ರರಂಗದ ಜೀವಮಾನದ ಸಾಧನೆ ನೀಡುವ ಅತ್ಯುನ್ನತ ಪ್ರಶಸ್ತಿ ಡಾ.ರಾಜ್‌ಕುಮಾರ್ ಪ್ರಶಸ್ತಿ ನೀಡಲಾಗಿತ್ತು. 20008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ.
ಇದನ್ನೂ ಓದಿ | Death News | ಶಿಕ್ಷಕರ ದಿನದಂದೇ ನಿವೃತ್ತ ಶಿಕ್ಷಕ, ಮಾಜಿ ಸಚಿವ ಪ್ರಭಾಕರ ರಾಣೆ ನಿಧನ
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರಾದ ಇವರು ನಾಟಕ ಮತ್ತು ರಂಗಭೂಮಿಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದರು. ಅವರ ಮಗ ವಿನೋದ್ ರಾಜ್ ಕೂಡ ಕನ್ನಡ ಚಿತ್ರರಂಗದ ಖ್ಯಾತ ನಟ. 1949ರಲ್ಲಿ ಶಂಕರ್‌ಸಿಂಗ್ ಅವರ ʻನಾಗಕನ್ನಿಕೆʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ʻಮಾಂಗಲ್ಯ ಯೋಗʼ ಸಿನಿಮಾ ಮೂಲಕ ಡಾ. ರಾಜ್‌ಕುಮಾರ್ ಅವರೊಂದಿಗೆ ನಟಿಸಿದ ಮೊದಲ ಚಿತ್ರವಾಗಿತ್ತು. ಹಾಗೂ ಈ ಚಿತ್ರದ ಮೂಲಕ ಮೊದಲಿಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದರು. ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ.
ʻಗೆಜ್ಜೆ ಪೂಜೆʼ, ʻಬಿಳಿ ಹೆಂಡ್ತಿʼ, ʻನಾಗರಹಾವುʼ, ʻನಾ ನಿನ್ನ ಮರೆಯಲಾರೆʼ, ʻಕನ್ನಡದ ಕಂದʼ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. 70ರ ದಶಕದ ಬಳಿಕ ಪೋಷಕ ಪಾತ್ರಗಳಲ್ಲಿ ಲೀಲಾವತಿಯವರು ತಮ್ಮನ್ನು ತೊಡಗಿಸಿಕೊಂಡರು.
ಇದನ್ನೂ ಓದಿ | ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್‌ಗೆ ತೀವ್ರ ಅನಾರೋಗ್ಯ; ದೆಹಲಿ ಆಸ್ಪತ್ರೆಗೆ ದಾಖಲು