Site icon Vistara News

Kannada Movie Review: ʼಬ್ಲಿಂಕ್‌ʼ; ಸಮಯದ ಹಿಂದೆ ಮಾಯೆಯ ಸವಾರಿ!

Kannada Movie Review

Kannada Movie Review

ಅಜಯ್‌ ಗಾಯತೊಂಡೆ, ಬೆಂಗಳೂರು
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸತನದ, ಹೊಸಬರ, ವಿಭಿನ್ನ ಪ್ರಯೋಗದ ಸಿನಿಮಾಗಳು ಹುಟ್ಟಿ ಕೊಳ್ಳುತ್ತಿವೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕನ್ನಡ ಸಿನಿಮಾಗಳಿಗೆ ಬೇಡಿಕೆ ಇದೆ. ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿರುವ ಕೆಲ ಹೊಸ ಪ್ರತಿಭೆಗಳು ಚಿತ್ರರಂಗದ ಸಿದ್ಧಮಾದರಿಗಳಿಗೆ ಅಂಟಿಕೊಳ್ಳದೇ ಹೊಸತನಕ್ಕೆ ತೆರೆದುಕೊಳ್ಳುತ್ತಿರುವುದು ಸಂತಸದ ಸುದ್ದಿ. ಇತ್ತೀಚಿಗೆ ತೆರೆಕಂಡ ‘ಶಾಖಾಹಾರಿ’ ಚಲನಚಿತ್ರ ಕೂಡ ಒಂದು ಉತ್ತಮ ಉದಾಹರಣೆ. ಇದೇ ಹಾದಿಯಲ್ಲಿ ವಿಭಿನ್ನ ಕತೆ ಹೊಂದಿರುವ ಚಿತ್ರ ‘ಬ್ಲಿಂಕ್’ (Blink). ಇಲ್ಲಿದೆ ಈ ಚಿತ್ರದ ವಿಮರ್ಶೆ (Kannada Movie Review).

ಏನದು ʼಬ್ಲಿಂಕ್ʼ ?ʼ

ಬ್ಲಿಂಕ್ʼ ಹೆಸರೇ ಸೂಚಿಸುವಂತೆ ಕಣ್ಣು ಮಿಟುಕಿಸುವುದರಲ್ಲಿ, ಜಗತ್ತು ಬದಲಾಗುವ, ಯೋಚಿಸದೇ ಯೋಚಿಸುವ, ಹಣೆಬರಹವನ್ನೂ ಪುನಃ ಬರೆಯಬಹುದಾದ ಸಮಯದ ಸವಾರಿ! ʼಟೈಮ್‌ ಟ್ರಾವೆಲ್ಲಿಂಗ್ ಕತೆʼ. ಸಮಯ ಅನ್ನೋದು ಮನುಷ್ಯನಿಗೆ ಎಷ್ಟು ಮುಖ್ಯ ಎನ್ನುತ್ತಲೇ ವಿಭಿನ್ನ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ ಕತೆ ದಾಟುತ್ತದೆ.

ಕಥಾನಾಯಕ ಅಪೂರ್ವ್ ತನ್ನದೊಂದು ನಾಟಕ ತಂಡ ಕಟ್ಟಿಕೊಂಡು, ಪ್ರೀತಿಸುವ ಹುಡುಗಿಯೊಂದಿಗೆ ಕಾಲ ಕಳೆಯುತ್ತಾ ನಿರುದ್ಯೋಗ ಬೇಗೆಯಲ್ಲಿ ಒದ್ದಾಡುತ್ತಿರುತ್ತಾನೆ. ಈ ನಡುವೆ ಒಮ್ಮೆ ತನ್ನದೇ ನೆರಳೊಂದು ಜೀವ ತಳೆದು ತನ್ನ ಬದುಕಿನಲ್ಲಿ ಹಣಕಿ ಹಾಕುತ್ತದೆ. ಅದು ಆತನ ಅರಿವಿಗೆ ಬಂದಾಗ. ಅದರ ಬೆನ್ನಟ್ಟಿ ಹೋದಾಗ ಎದುರಾಗುವುದೇ ಟೈಮ್ ಟ್ರಾವೆಲಿಂಗ್ ಎಂಬ ವಿಲಕ್ಷಣ ಜಗತ್ತು. ಅಲ್ಲಿ ಈತನ ಅನುಭವಗಳೇ ಭೂತ, ವರ್ತಮಾನ ಮತ್ತು ಭವಿಷ್ಯದ ನಡುವೆ ಸಂಚರಿಸುವಂತೆ ಮಾಡುತ್ತದೆ. ತನ್ನ ಹುಟ್ಟಿನ ಕುರಿತ ಅನೇಕ ಸತ್ಯ ಸಂಗತಿಗಳನ್ನು ತಿಳಿಯಲು ಪ್ರಯತ್ನಿಸುತ್ತಾನೆ. ತನ್ನ ಬದುಕಿನಲ್ಲಿ ಹಿಂದೆ ನಡೆದ ಮುಂದೆ ನಡೆಯುವ ಘಟನೆಗಳನ್ನು ಸರಿ ಮಾಡಲು ಒದ್ದಾಡುತ್ತಾನೆ. ಕಳೆದು ಹೋದವರನ್ನು ಹುಡುಕುವುದರಲ್ಲೇ ಸಮಯವನ್ನು ಕಳೆಯುತ್ತಾನೆ. ಅದು ಏತಕ್ಕೆ, ಹೇಗೆ, ಎನ್ನುವುದೇ ‘ಬ್ಲಿಂಕ್‌’ ಸಿನಿಮಾದ ಸ್ವಾರಸ್ಯ.

ಕನ್ನಡದ ಖ್ಯಾತ ಲೇಖಕ, ಪತ್ರಕರ್ತ ಪಿ.ಲಂಕೇಶ್ ಅವರು ಆಲ್ ಇಂಡಿಯಾ ರೇಡಿಯೋದಲ್ಲಿ ನೀಡಿದ ಸಂದರ್ಶನದಲ್ಲಿ ಬರವಣಿಗೆಯ ಸೌಂದರ್ಯ ಮತ್ತು ಅದರ ಸವಾಲುಗಳ ಬಗ್ಗೆ ಮಾತನಾಡುವ ಆಡಿಯೊದೊಂದಿಗೆ ʼಬ್ಲಿಂಕ್ʼ ಸಿನಿಮಾ ಪರದೆ ತೆರೆಯುತ್ತದೆ.

ಕಲಾವಿದರ ಸುತ್ತ ಚಿತ್ತ

ರಂಗಭೂಮಿಯ ಪ್ರತಿಭೆಗಳೇ ಸೇರಿಕೊಂಡು ಮಾಡಿರುವ ‘ಬ್ಲಿಂಕ್​’ ನಾಟಕದ ಶೈಲಿ ಬೆರೆತಿದೆ. ಕಥೆಯ ಒಳಗಡೆಯೂ ನಾಟಕದ ತಾಲೀಮಿನ ದೃಶ್ಯಗಳು ಸಾಕಷ್ಟಿವೆ. ​​​ನಾಟಕದ ಕಥಾ ಹಂದರವನ್ನು ಬಹಳ ಚೆನ್ನಾಗಿ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದಾರೆ.

ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿರುವ ನಿರುದ್ಯೋಗಿಯಾಗಿ ದೀಕ್ಷಿತ್ ಶೆಟ್ಟಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಅಪೂರ್ವ್‌ನ ಪ್ರಿಯತಮೆ ಸ್ವಪ್ನಳಾಗಿ ಮಂದಾರ ಬಟ್ಟಲಹಳ್ಳಿ ಭರವಸೆಯ ನಾಯಕಿಯಾಗಿ ಕಾಣುತ್ತಾರೆ. ಖ್ಯಾತ ಪತ್ರಕರ್ತರಾಗಿ ಗೋಪಾಲಕೃಷ್ಣ ದೇಶಪಾಂಡೆ ಎಂತಹ ಪಾತ್ರ ಕೊಟ್ಟರೂ ಸರಾಗವಾಗಿ ಅಭಿನಯಿಸುವ ಚಾಕಚಕ್ಯತೆ ಹೊಂದಿದ್ದಾರೆ. ದೇವಕಿಯಾಗಿ ಚೈತ್ರಾ ಜೆ. ಆಚಾರ್ ಭಾವನಾತ್ಮಕವಾಗಿ ಅಭಿನಯಿಸಿದ್ದಾರೆ. ʼವಿಕ್ರಾಂತ ರೋಣʼದಲ್ಲಿ ಖಳನಾಯಕನಾಗಿ ಅಬ್ಬರಿಸಿದ ವಜ್ರಧೀರ್ ಜೈನ್ ಇಲ್ಲಿ ಅರಿವು ಪಾತ್ರದಲ್ಲಿ ಸಾಹಿತ್ಯ ಪ್ರಿಯನಾಗಿ ಕಾಣಿಸಿಕೊಳ್ಳುತ್ತಾರೆ. ಮುದುಕನಾಗಿ ಸುರೇಶ ಅನಗಳ್ಳಿ, ಕಿರಣ್ ನಾಯ್ಕ್ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಕಷ್ಟ ಏಕೆ, ಇಷ್ಟ ಓಕೆ?

ಇಲ್ಲಿ ಚಿತ್ರದ ಪರಿಕಲ್ಪನೆಗಳನ್ನು ಗಮನಿಸುತ್ತಾ ಹೋದರೆ ಚಿತ್ರಕಥೆಯಲ್ಲಿ ಸಂಕೀರ್ಣತೆ ಅನಿವಾರ್ಯ. ಕೇವಲ ನೇರವಾದ ಮನರಂಜನೆಗಾಗಿ ಹುಡುಕುತ್ತಿರುವ ಜನರಿಗೆ, ಚಲನಚಿತ್ರದಲ್ಲಿನ ಪ್ರಮುಖ ತಿರುವುಗಳು ವಿವರಗಳು ಅರ್ಥೈಸಿಕೊಳ್ಳಲು ಕಷ್ಟವಾಗಬಹುದು. ಸಿನಿಮಾದ ನಿರೂಪಣೆ ಸರಾಗವಾಗಿಲ್ಲ, ಗೊಂದಲವೂ ಇದೆ. ಪ್ರೇಕ್ಷಕರನ್ನು 1996, 2001, 2021, 2035ರ ನಡುವಿನ ಪ್ರಯಾಣಕ್ಕೆ ಕರೆದೊಯ್ಯುತ್ತದೆ. ಅಲ್ಲಿ ಪ್ರತಿ ಬ್ಲಿಂಕ್ ಅದೃಷ್ಟ ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಟೈಮ್ ಟ್ರಾವೆಲಿಂಗ್ ಕಥೆಯನ್ನು ಹೇಳುತ್ತ ನಿರ್ದೇಶಕರು ಪ್ರೇಕ್ಷಕರ ತಲೆಗೆ ಒಂಚೂರು ಕೆಲಸ ಕೊಡುತ್ತಾರೆ. ಹಾಗಾಗಿ, ಸಿನಿಮಾ ನೋಡುವಾಗ ಗಮನ ಅತ್ತಿತ್ತ ಹರಿಸಿದರೇ ಟ್ವಿಸ್ಟ್‌ಗಳು, ರೋಚಕತೆ ಮಿಸ್ ಆಗುತ್ತವೆ. ಆರಂಭದ 20 ನಿಮಿಷ ಸಿನಿಮಾದಲ್ಲಿ ಏನಾಗುತ್ತಿದೆ ಎಂಬುದೇ ಗೊತ್ತಾಗುವುದಿಲ್ಲ. ಆನಂತರದ ಓಟ ಪ್ರೇಕ್ಷಕರನ್ನು ಖುರ್ಚಿಯ ತುದಿಗೆ ತಂದು ಕೂರಿಸುತ್ತದೆ.

ಗಮನ ಸೆಳೆದ ಹೊಸಬರ ಪ್ರಯತ್ನ!

ನಿರ್ದೇಶಕ ಶ್ರೀನಿಧಿ ಬೆಂಗಳೂರು ರಂಗಭೂಮಿ ಎಳೆಯೊಂದನ್ನು ಆರಂಭದಿಂದ ಕೊನೇವರೆಗೂ ತಂದು ಕತೆಗೆ ಬೇಕಾದ ಸ್ಪಷ್ಟ ರೂಪ ನೀಡಿ ಅದನ್ನು ಟ್ರಾವೆಲ್ ಮಾಡಿಸಿದ್ದಾರೆ. ಥಿಯೇಟರ್ ಹುಡುಗರ ಕಸುಬುಗಾರಿಕೆ ಎದ್ದು ಕಾಣುತ್ತದೆ. ಹೊಸ ಪ್ರಯತ್ನದೊಂದಿಗೆ ರಂಗಮಂಚ, ಸಾಹಿತ್ಯ, ಸಂಗೀತ, ಕಲೆಯ ಸ್ಪರ್ಶ ನೀಡಿದ್ದಾರೆ. ಬೇರೆ ಬೇರೆ ಕಾಲಘಟ್ಟದಲ್ಲಿ ಕಥೆ ಸಾಗುವಂತೆ ಬ್ರೇಕ್ ಮಾಡಿ ಅದಕ್ಕೆ ತಕ್ಕಂತೆ ಸಿನಿಮಾದ ಕಲ‌ರ್ ಟೋನ್ ಕೂಡ ಬದಲಾಯಿಸುತ್ತಾರೆ. ಇಲ್ಲಿ ಪ್ರಮೋದ್ ಮರವಂತೆಯ ಅದ್ಭುತ ಸಾಹಿತ್ಯ, ಅವಿನಾಶ್ ಶಾಸ್ತ್ರಿಯ ಛಾಯಾಗ್ರಹಣ, ಸಂಜೀವ್ ಸಂಕಲನ, ಜಾನಪದ ಲೋಕಕ್ಕೆ ಕರೆದೊಯ್ಯುವ ಪ್ರಸನ್ನ ಕುಮಾರ್ ಅವರ ಗಾನ ಸಂಯೋಜನೆ, ರವಿಂದ್ರ ಎ.ಜೆ. ನಿರ್ಮಾಣ ಈ ಚಿತ್ರಕ್ಕಿದೆ.

ಇದನ್ನೂ ಓದಿ: Kannada Movie review : ಶಾಖಾಹಾರಿ: ಶಾಕಾಹಾರಿಗಳಷ್ಟೇ ಅಲ್ಲ, ಮಾಂಸಾಹಾರಿಗಳೂ ನೋಡಬಹುದು!

Exit mobile version