Site icon Vistara News

Kannada New Film | ʻಊರಿಗೆ ಹೋಗಿ ಬರೋಕೂ ನಮ್ಮತ್ರ ಹಣವಿಲ್ಲʼ: ಕಂಬ್ಳಿಹುಳ ತಂಡಕ್ಕೆ ರಿಷಬ್‌ ಶೆಟ್ಟಿ ಹೇಳಿದ್ದೇನು?

Kannada New Film

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಹೊಸಬರೇ ತಯಾರಿಸಿರುವ ‘ಕಂಬ್ಳಿಹುಳ’ ಸಿನಿಮಾ (Kannada New Film) ನವೆಂಬರ್‌ 4ರಂದು ಬಿಡುಗಡೆಗೊಂಡಿದೆ. ʻಚಿತ್ರ ಒಟಿಟಿ ಬರುವವರೆಗೂ ಕಾಯಬೇಡಿ, ಚಿತ್ರವನ್ನು ಚಿತ್ರಮಂದಿರದಲ್ಲಿಯೇ ನೋಡಿʼ ಎಂದು ನೋಡುಗರು ಸೋಷಿಯಲ್‌ ಮೀಡಿಯಾ ಮೂಲಕ ವಿಮರ್ಶೆ ನೀಡುತ್ತಿದ್ದಾರೆ. ಕಂಬ್ಳಿಹುಳ ಸಿನಿಮಾ ರಾಜ್ಯದೆಲ್ಲೆಡೆ ಸದ್ದು ಮಾಡುತ್ತಿದ್ದು ಯೋಗರಾಜ್ ಭಟ್, ಜಯತೀರ್ಥ, ಬಿಎಂ ಗಿರಿರಾಜ್, ಕಿರಣ್‌ ರಾಜ್, ಧನಂಜಯ್, ವಿನಯ್ ರಾಜ್‌ಕುಮಾರ್ ಸೇರಿದಂತೆ ಅನೇಕರು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿದ್ದಾರೆ. ಇದೀಗ ಚಿತ್ರದ ಬಗ್ಗೆ ರಿಷಬ್‌ ಶೆಟ್ಟಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಸಿನಿಮಾ ಜನತೆಗೆ ತಲುಪಲಿ
ರಿಷಬ್‌ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಶೇರ್‌ ಮಾಡಿಕೊಂಡಿದ್ದು ʻʻಕಂಬ್ಳಿ ಹುಳ’ ಚಿತ್ರಕ್ಕೆ ಎಲ್ಲೆಡೆಯಿಂದ ಸಾಕಷ್ಟು ಪ್ರಶಂಸೆ ಕೇಳಿಬರುತ್ತಿದೆ. ಆದಷ್ಟು ಬೇಗ ಸಿನಿಮಾ ನೋಡುತ್ತೇನೆ. ಒಂದು ಉತ್ತಮ ಚಿತ್ರವನ್ನು ಗೆಲ್ಲಿಸಲು ಇಡೀ ಚಿತ್ರರಂಗ ಒಟ್ಟಾಗಿ ನಿಂತಿರುವುದು ಹೆಮ್ಮೆಯ ವಿಷಯ. ಇದು ಜನತೆಗೂ ತಲುಪಿ ಚಿತ್ರಮಂದಿರಗಳು ಹೌಸ್ ಫುಲ್ ಆಗಲಿ. ನಿರ್ದೇಶಕ ನವನ್‌ ಶ್ರೀನಿವಾಸ್‌ ಹಾಗೂ ತಂಡಕ್ಕೆ ಅಭಿನಂದನೆಗಳುʼʼಎಂದು ಬರೆದುಕೊಂಡಿದ್ದಾರೆ.

ಅರ್ಧ ಟಿಕೆಟ್ ದರವನ್ನು ನಾನೇ ಹಿಂದಿರುಗಿಸುತ್ತೇನೆ!
ಕಂಬ್ಳಿಹುಳ ವೀಕ್ಷಿಸಿದ ಬಳಿಕ ಕನ್ನಡ ನಿರ್ದೇಶಕ ಸಿಂಪಲ್‌ ಸುನಿ ಅವರು ʻʻಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸಿ. ಯಾರಿಗೆ ಚಿತ್ರ ಇಷ್ಟವಾಗುವುದಿಲ್ಲವೋ ಅವರಿಗೆ ಅರ್ಧ ಟಿಕೆಟ್ ದರವನ್ನು ನಾನೇ ಹಿಂದಿರುಗಿಸುತ್ತೇನೆʼʼ ಎಂದು ಚಿತ್ರದ ಕಂಟೆಂಟ್ ಬಗ್ಗೆ ಈ ಹಿಂದೆ ವಿಶ್ವಾಸ ವ್ಯಕ್ತಪಡಿಸಿದ್ದರು. ಇದೀಗ ಸಿನಿಮಾ ಚೆನ್ನಾಗಿದ್ದರೂ ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂದು ಚಿತ್ರತಂಡ ಪ್ರಚಾರ ಕಾರ್ಯ ಮುಂದುವರಿಸಿದೆ. ನವೆಂಬರ್ 8 ಮಂಗಳವಾರ ಕಂಬ್ಳಿಹುಳ ಚಿತ್ರತಂಡ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ಚಿತ್ರದ ನಟ ಅಂಜನ್‌ ನಾಗೇಂದ್ರ ಸಿನಿಮಾ ಬಗ್ಗೆ ಮನಬಿಚ್ಚಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

ಇದನ್ನೂ ಓದಿ | Kannada Film | ಕಂಬ್ಳಿಹುಳ ಮೊದಲ ಹಾಡು ಔಟ್‌: ಮೋಡಿ ಮಾಡಿತು ಯಾಕೀ ನಗು ಹಾಡು!

ಊರಿಗೆ ಹೋಗಿ ಬರೋಕೂ ನಮ್ಮತ್ರ ಹಣವಿಲ್ಲ!
ʻʻಮೀಡಿಯಾಗಳು ಚಿತ್ರಗಳಿಗೆ ಬೆಂಬಲ ನೀಡುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ನಮ್ಮ ಚಿತ್ರಕ್ಕೆ ಮೊದಲ ಬೆಂಬಲಕ್ಕೆ ನಿಂತದ್ದು ಮೀಡಿಯಾ. ಯುಟ್ಯೂಬ್ ಚಾನೆಲ್, ಪ್ರಿಂಟ್ ಮೀಡಿಯಾ, ಸುದ್ದಿ ವಾಹಿನಿಗಳು ಹೀಗೆ ಪ್ರತಿ ಒಬ್ಬರೂ ಸಹ ಬೆಂಬಲ ನೀಡಿದರು. ನಿರ್ದೇಶಕ ದಯನಾಂದ್‌ ಟಿ ಕೆ ಅವರು ನಮಗೆ ಧೈರ್ಯ ನೀಡದೇ ಇರುತ್ತಿದ್ದರೆ ಬೆಂಗಳೂರು ಬಿಡಬೇಕಿತ್ತು. ಇನ್ನು ತಮ್ಮ ಬಳಿ ಇದ್ದ ದುಡ್ಡನ್ನೆಲ್ಲಾ ಸೇರಿಸಿ ಇದೊಂದು ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದೇವೆ, ಹೇಳಬೇಕೆಂದರೆ ನಾಳೆ ಊರಿಗೆ ಹೋಗಿ ಬರುವುದಕ್ಕೂ ನಮ್ಮತ್ರ ಹಣವಿಲ್ಲ. ಎಲ್ಲರೂ ಸಿನಿಮಾ ನೋಡಿ ಎಂದು ಮನವಿ ಮಾಡಿದ್ದಾರೆʼʼನಟ ಅಂಜನ್‌ ನಾಗೇಂದ್ರ.

ಮಲೆನಾಡ ಭಾಗದಲ್ಲಿ ಆಗುವ ಪ್ರೇಮ ಕಥೆ!
ಈ ಚಿತ್ರಕ್ಕೆ ನವನ್ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ. ಮಲೆನಾಡು ಭಾಗದಲ್ಲಿ ನಡೆಯುವ ಪ್ರೇಮಕಥೆ ಇದಾಗಿದೆ. ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ನಿರ್ದೇಶಕ ನವನ್ ಶ್ರೀನಿವಾಸ್ ನಿರ್ದೇಶನದ ಮೊದಲ ಸಿನಿಮಾ ಇದು. ಶೃಂಗೇರಿ, ಸಕಲೇಶಪುರ, ತೀರ್ಥಹಳ್ಳಿ, ಸುತ್ತಮುತ್ತ ‘ಕಂಬ್ಳಿಹುಳ’ ಚಿತ್ರೀಕರಣ ನಡೆಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಎಮೋಷನಲ್ ಜರ್ನಿ ಸಿನಿಮಾ ಇದಾಗಿದ್ದು ರಂಗಭೂಮಿ ಕಲಾವಿದ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.

ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಈ ಚಿತ್ರ ನೈಜ ಘಟನೆಯಾಧಾರಿತ ಸಿನಿಮಾ. ಚಿತ್ರದಲ್ಲಿ ರೋಹಿತ್ ಕುಮಾರ್, ದೀಪಕ್ ರೈ ಪಣಜೆ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ ಸೇರಿ ಹಲವು ಯುವ ಪ್ರತಿಭೆಗಳು ನಟಿಸಿದ್ದಾರೆ. ಸತೀಶ್ ರಾಜೇಂದ್ರನ್ ಛಾಯಾಗ್ರಹಣ, ಜಿತೇಂದ್ರ ನಾಯಕ ಮತ್ತು ರಾಘವೇಂದ್ರ ಟಿಕೆ ಸಂಕಲನ, ಶಿವ ಪ್ರಸಾದ್ ಸಂಗೀತ ನಿರ್ದೇಶನ ‘ಕಂಬ್ಳಿಹುಳ’ ಚಿತ್ರಕ್ಕಿದೆ.

ಇದನ್ನೂ ಓದಿ | Kannada New Film | ʻಕಂಬ್ಳಿಹುಳʼ ಟ್ರೈಲರ್‌ ರಿಲೀಸ್‌ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ!

Exit mobile version