Site icon Vistara News

Kannada New Movie: 19.20.21 ಚಿತ್ರದ ಕಥೆ ಕೊನೆಗೂ ರಿವೀಲ್‌; ಇದು ವಿಠಲ್ ಮಲೆಕುಡಿಯ ಹೋರಾಟದ ಕಥೆ

Kannada New Movie

ಬೆಂಗಳೂರು: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ಅವರ ಬಹು ನಿರೀಕ್ಷಿತ (Kannada New Movie) ಹಾಗೂ ನೈಜ ಘಟನೆ ಆಧಾರಿತ ಸಿನಿಮಾ ‘19.20.21’ ಮಾರ್ಚ್‌ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾವೆಂದು ಹೇಳಿಕೊಂಡು ಬಂದಿದ್ದ ಕಥೆ ಕೊನೆಗೂ ರಿವೀಲ್ ಆಗಿದೆ. 2012 ಮಾರ್ಚ್ 3ರಂದು ನಕ್ಸಲ್ ನಿಗ್ರಹ ಪಡೆಯಿಂದ ಬಂಧಿತರಾದ ವಿಠಲ್ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಣ್ಣ ಮಲೆಕುಡಿಯ ನಡೆಸಿದ ಕಾನೂನು ಹೋರಾಟದ ಕಥೆಯೇ ಈ ಸಿನಿಮಾ.

ನಕ್ಸಲರೊಂದಿಗೆ ಸಂಪರ್ಕದಲ್ಲಿದ್ದಾರೆಂದು ತಂದೆ ಮಗನನ್ನು ಬಂಧಿಸಲಾಗಿತ್ತು. ಆ ಸಮಯದಲ್ಲಿ ವಿಠಲ್ ಮಂಗಳೂರಿನ ವಿವಿಯಲ್ಲಿ ಪತ್ರಿಕೋದ್ಯಮ ಓದುತ್ತಿದ್ದರು. ವಿಠಲ್ ಪರೀಕ್ಷೆ ಬರೆಯುವಾಗ ಪೊಲೀಸರು ಕೈಯಲ್ಲಿದ್ದ ಕೋಳ ಕೂಡ ತೆಗೆದಿರಲಿಲ್ಲ. ಈ ಘಟನೆ ರಾಜ್ಯಾದ್ಯಂತ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ತಮ್ಮ ಮೇಲಿನ ಆರೋಪದ ವಿರುದ್ಧ ಸತತ ಹತ್ತು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದ ವಿಠಲ್ ಅವರಿಗೆ 2021ರಲ್ಲಿ ಕೋರ್ಟ್ ನಿರ್ದೋಷಿ ಎಂದು ತೀರ್ಪು ನೀಡಿತ್ತು. ವಿಠಲ್ ಮಲೆಕುಡಿಯ ಈ ಹೋರಾಟದ ಕಥೆಯೇ ‘19.20.21’ ಸಿನಿಮಾ.

ಇದನ್ನೂ ಓದಿ: Kannada New Movie: ಸೈನ್ಸ್ ಫಿಕ್ಷನ್ ‘ಮಂಡಲ’ ಟ್ರೈಲರ್‌ ಔಟ್‌: ಹೊಸ ಲೋಕ ಅನಾವರಣ!

ಆಡಳಿತ ವ್ಯವಸ್ಥೆಯ ಅವ್ಯವಸ್ಥೆ ಹಾಗೂ ವಿಠಲ್ ಅವರ ಕಾನೂನು ಹೋರಾಟದ ರೋಚಕ ಕಥೆಯನ್ನು ಸೋಶಿಯಲ್ ಥ್ರಿಲ್ಲರ್ ಕಹಾನಿಯೊಂದಿಗೆ ತೆರೆ ಮೇಲೆ ತರುತ್ತಿದ್ದಾರೆ ಮಂಸೋರೆ. ಚಿತ್ರದಲ್ಲಿ ವಿಠಲ್ ಮಲೆಕುಡಿಯ ಪಾತ್ರದಲ್ಲಿ ರಂಗಭೂಮಿ ಕಲಾವಿದ ಶೃಂಗ ಬಿ.ವಿ ನಟಿಸಿದ್ದಾರೆ.

ಉಳಿದಂತೆ ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಒಳಗೊಂಡ ಪ್ರತಿಭಾನ್ವಿತರ ತಾರಾಗಣ ಚಿತ್ರದಲ್ಲಿದೆ. ಶಿವು ಬಿ. ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ಬಿಂದು ಮಾಲಿನಿ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇದನ್ನೂ ಓದಿ: Manso Re Director | ಮಂಸೋರೆ ನಿರ್ದೇಶನದ 19.20.21 ಸಿನಿಮಾ ಬಿಡುಗಡೆಗೆ ಸಜ್ಜು!

ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ. ದೇವರಾಜ್. ಆರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸತ್ಯ ಹೆಗ್ಡೆ ಸಹ ನಿರ್ಮಾಣವಿದೆ.

Exit mobile version