Site icon Vistara News

Kannada New Movie: ʻಅಪರೂಪʼ ಸಿನಿಮಾ ತೆರೆಗೆ ಬರಲು ಸಜ್ಜು; ಡಾಲಿ ಧನಂಜಯ್‌ ಸಾಥ್‌!

Kannada New Movie Aparoopa

ಬೆಂಗಳೂರು: ಮಹೇಶ್ ಬಾಬು ನಿರ್ದೇಶನದ ʻಅಪರೂಪʼ ಸಿನಿಮಾ (Kannada New Movie) ತೆರೆಗೆ ಬರಲು ಸಜ್ಜಾಗಿದೆ. ಜುಲೈ 14ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದ ಟ್ರೈಲರ್‌ ರಿಲೀಸ್ ಆಗಿದೆ. ಅರಸು, ಆಕಾಶ್ ದಂತಹ ವಿಭಿನ್ನ ಹಾಗೂ ವಿಶಿಷ್ಟ ಪ್ರೇಮಕಥೆಗಳ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಮಹೇಶ್ ಬಾಬು ಅಪರೂಪ ಚಿತ್ರದ ಮೂಲಕ ಮತ್ತೊಂದು ಹೊಸ ಕಥೆಯನ್ನು ಉಣಬಡಿಸಲಿದ್ದಾರೆ. ಬಿಡುಗಡೆ ಹೊಸ್ತಿನಲ್ಲಿರುವ ಈ ಸಿನಿಮಾದ ಟ್ರೈಲರ್‌ ನಟ ರಾಕ್ಷಸ ಡಾಲಿ ಧನಂಜಯ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಶಯ ಕೋರಿದ್ದಾರೆ.

ಡಾಲಿ ಧನಂಜಯ್ ಮಾತನಾಡಿ, ʻʻಕನ್ನಡ ಚಿತ್ರರಂಗಕ್ಕೆ ಮಹೇಶ್ ಬಾಬು ಅವರು ತುಂಬಾ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ʻಅಪರೂಪ; ಇನ್ನೊಂದು ಹಿಟ್ ಸೇರಲಿ. ಸುಘೋಷ್ ಸ್ಕ್ರೀನ್ ಪ್ರೆಸೆನ್ಸ್ ತುಂಬಾ ಚೆನ್ನಾಗಿದೆ. ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ. ತುಂಬಾ ತಯಾರಾಗಿ ಬಂದಿದ್ದಾರೆ. ಹೃತಿಕಾ ಅವರ ಡ್ಯಾನ್ಸ್‌ ಕೂಡ ಚೆನ್ನಾಗಿದೆ. ಸುಗ್ಗಿ ಸಿನಿಮಾ ದೊಡ್ಡ ಸುದ್ದಿಯಾಗಲಿ. ಸಿನಿಮಾ ಒಳ್ಳೆ ಸುಗ್ಗಿಯಾಗಲಿ. ಇಡೀ ತಂಡಕ್ಕೆ ಒಳ್ಳೆಯದಾಗಲಿʼʼ ಎಂದರು.

ಮಹೇಶ್ ಬಾಬು ಮಾತನಾಡಿ, ʻʻಈ ಕಾರ್ಯಕ್ರಮಕ್ಕೆ ಪ್ರೋತ್ಸಾಹ ಕೊಟ್ಟಿರುವ ಧನಂಜಯ್ ಅವರಿಗೆ ಧನ್ಯವಾದಗಳು. ಅಪರೂಪ ಸಿನಿಮಾ ಒಂದು ಲವ್ ಸ್ಟೋರಿ. ನಾನು ಹೆಚ್ಚಾಗಿ ಲವ್ ಸ್ಟೋರಿ ಸಿನಿಮಾಗಳನ್ನೇ ಮಾಡಿದ್ದೇನೆ. ಈ ಚಿತ್ರದಲ್ಲಿ ವಿಲನ್ ಗಳಿಲ್ಲ. ಹೀರೊ-ಹೀರೋಯಿನ್‌ಗಳೇ ವಿಲನ್ ಗಳು. ಉಳಿದಿದ್ದು ತೆರೆಮೇಲೆ ನೋಡಿ. ಹೊಸ ನಾಯಕ ನಾಯಕಿ ಮೇಲೆ ನಿಮ್ಮ ಹಾರೈಕೆ ಇರಲಿ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹ ಕೊಡಿʼʼ ಎಂದರು.

ನಾಯಕ ಸುಘೋಷ್ ಮಾತನಾಡಿ,ʻʻಟ್ರೈಲರ್‌ ನಿಮಗೆ ಇಷ್ಟವಾಗಿದೆ ಎಂದುಕೊಳ್ಳುತ್ತೇನೆ. ಜುಲೈ 14ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದಿಂದ ನಾನು ತುಂಬಾ ಕಲಿತ್ತಿದ್ದೇನೆ. ನಿಮ್ಮ ಬೆಂಬಲ ನಮ್ಮ ಮೇಲೆ ಇರಲಿʼʼ ಎಂದು ತಿಳಿಸಿದರು.

ಇದನ್ನೂ ಓದಿ: Kannada New Movie: ‘ನಿಮ್ಮೆಲ್ಲರ ಆಶೀರ್ವಾದ’ ಸಿನಿಮಾದ ಪೋಸ್ಟರ್ ರಿಲೀಸ್!

ಅಪರೂಪ ಸಿನಿಮಾ ಮೂಲಕ ಸುಘೋಷ್ ಮತ್ತು ಹೃತಿಕಾ ಕನ್ನಡ ಸಿನಿಮಾ ಲೋಕಕ್ಕೆ ನಾಯಕ ಹಾಗೂ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ನಾಯಕ ನಾಯಕಿಯ ನಡುವೆ ಬರುವ ಅಹಂ ಏನೆಲ್ಲಾ ಸಮಸ್ಯೆ ಉಂಟು ಮಾಡುತ್ತದೆ ಎನ್ನುವುದನ್ನು ಚಿತ್ರದ ಮೂಲಕ ತೋರಿಸಿದ್ದಾರೆ ನಿರ್ದೇಶಕ ಮಹೇಶ್ ಬಾಬು.

ಮಹೇಶ್ ಬಾಬು ನಿರ್ದೇಶನದ ಅತಿರಥ ಸಿನಿಮಾದಲ್ಲಿ ನಟಿಸಿದ್ದ ಸುಘೋಷ್ ಚಿತ್ರದಲ್ಲಿಯೂ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಶೋಕ್, ಅರುಣಾ ಬಲರಾಜ್, ಅವಿನಾಶ್, ಕುರಿಪ್ರತಾಪ್ , ದಿನೇಶ್ ಮಂಗಳೂರು, ವಿಜಯ್ ಚೆಂಡೂರು, ಕಡ್ಡಿಪುಡಿ ಚಂದ್ರು, ಮೋಹನ್ ಜುನೇಜಾ ಅಪರೂಪ ಸಿನಿಮಾದ ಭಾಗವಾಗಿದ್ದಾರೆ. ಪ್ರಜ್ವಲ್ ಪೈ ಸಂಗೀತ ಇದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಂದು ಹಾಡಿಗೆ ಧ್ವನಿಯಾಗಿರುವುದು ವಿಶೇಷ.

ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಕಾಶ್ಮೀರದಲ್ಲಿ ಶೂಟಿಂಗ್ ನಡೆಸಲಾಗಿದ್ದು, ಸೂರ್ಯಕಾಂತ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಸುಗ್ಗಿ ಸಿನಿಮಾಸ್ ಬ್ಯಾನರ್ ನಡಿ ತಯಾರಾಗಿರುವ ಅಪರೂಪ ಸಿನಿಮಾ ಜುಲೈ 14ಕ್ಕೆ ತೆರೆಗೆ ಬರುತ್ತಿದೆ.

Exit mobile version