ಬೆಂಗಳೂರು: ‘ಮಾವು ಬೇವು’ ಆಲ್ಬಮ್‌ನ ಗೀತೆಗಳನ್ನು ಇಟ್ಟುಕೊಂಡು ಅದಕ್ಕೆ ಹೊಂದುವ, ಸುಂದರ ಕಥಾಹಂದರ ಹೆಣೆದಿರುವ ಹಿರಿಯ ನಟ ಸುಚೇಂದ್ರ ಪ್ರಸಾದ್ (Kannada New Movie) ಅವರು ಅದೇ ಹೆಸರಿನಲ್ಲಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾ ಬಗ್ಗೆ ಕವಿ ಬಿ.ಆರ್. ಲಕ್ಷ್ಮಣರಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿ.ಆರ್.ಲಕ್ಷ್ಮಣರಾವ್ ಹೇಳಿದ್ದೇನು?
ನಿಮ್ಮ ‘ಮಾವು ಬೇವು’ ಚಿತ್ರವನ್ನು ನೋಡಿ ತುಂಬ ಸಂತೋಷವಾಯಿತು. ಕಾರಣ, ನನ್ನ ನಿಡುಗಾಲದ ಪ್ರಿಯ ಕವಿಮಿತ್ರ ದೊಡ್ಡರಂಗೇಗೌಡರ ಜನಪ್ರಿಯ’ಮಾವು ಬೇವು’ ಗೀತಗುಚ್ಛವನ್ನು ಇಡಿಯಾಗಿ ಬಳಸಿಕೊಂಡು ನೀವು ಇಂದಿಗೆ ಅತ್ಯಂತ ಪ್ರಸ್ತುತವಾದ ಚಿತ್ರಕಥೆಯನ್ನು ರಚಿಸಿರುವುದು. ನನ್ನ ನೆಚ್ಚಿನ ನಟ ಮಾತ್ರವಲ್ಲದೆ ಗಂಭೀರ ಚಿಂತಕರೂ ಆದ ನೀವು ಇದನ್ನು ನಿರ್ದೇಶಿಸಿರುವುದು. ನನಗೆ ಆಪ್ತರಾದ ಹಿರಿಯ ನಟ ಜೆ.ಶ್ರೀನಿವಾಸಮೂರ್ತಿ, ನಟಿ ಸುಂದರಶ್ರೀ, ಪ್ರತಿಭಾವಂತ ಗಾಯಕಿ ಚೈತ್ರ ಇದರಲ್ಲಿ ಅಭಿನಯಿಸಿರುವುದು. ಹೀಗೆ ನನ್ನ ಆತ್ಮೀಯರ ಬಳಗವೇ ಇಲ್ಲಿದೆ. ಇದು ವೈಯಕ್ತಿಕ ಸಂಗತಿ.
ಈ ನಿಮ್ಮ ಚಿತ್ರ ನನಗೆ ಗಮನಾರ್ಹವೆಂದು ತೋರಲು, ಪ್ರಿಯವಾಗಲು ಮುಖ್ಯ ಕಾರಣ ಇದೊಂದು ಅಪ್ಪಟ ಕನ್ನಡ ಮನಸ್ಸು ಕನ್ನಡಿಗರಿಗಾಗಿ ನಿರ್ಮಿಸಿದ ಚಿತ್ರವಾಗಿರುವುದು. ಗ್ರಾಮೀಣ ಸೊಗಡು, ನಾಗರಿಕ ಮಿಸಳಬಾಜಿ ಹಾಗೂ ಗಂಭೀರ ವೈಚಾರಿಕತೆ- ಹೀಗೆ ಏನೆಲ್ಲವನ್ನೂ ಅಭಿವ್ಯಕ್ತಿಸಲು ಕನ್ನಡ ಭಾಷೆ ಸರ್ವಥಾ ಸಮರ್ಥವಾಗಿದೆ ಎಂಬುದನ್ನು ನೀವು ಈ ಚಿತ್ರದ ಸಂಭಾಷಣೆಗಳ ಮೂಲಕ ಸಾಬೀತು ಪಡಿಸಿದ್ದೀರಿ.
ಕುಟುಂಬ ಮತ್ತು ದಾಂಪತ್ಯ ನಿಲ್ಲುವುದೇ ಪ್ರೀತಿ, ಸಹನೆ ಮತ್ತು ಸಾಮರಸ್ಯದ ನೆಲಗಟ್ಟಿನ ಮೇಲೆ. ಆದರೆ ಇಂದಿನ ಯುವ ಜನಾಂಗದಲ್ಲಿ ಈ ಗುಣಗಳು ಅಪರೂಪವಾಗಿವೆ. ಈ ದುರಂತವನ್ನು ಅದರ ಸಂಕೀರ್ಣ ಸ್ವರೂಪದಲ್ಲಿ ಹಿಡಿದಿಡಲು ಈ ಚಿತ್ರದಲ್ಲಿ ನೀವು ಮಾಡಿರುವ ಪ್ರಯತ್ನ ಅತ್ಯಂತ ಪ್ರಸ್ತುತ ಮತ್ತು ಶ್ಲಾಘನೀಯವಾಗಿದೆ. ಚಿತ್ರದ ಸೂಚ್ಯವಾದ open-endedness ( ಮುಕ್ತ ಮುಕ್ತಾಯ ) ಸಹ ಅರ್ಥಪೂರ್ಣವಾಗಿದೆ.
ಚಿತ್ರದಲ್ಲಿ ವಿಸ್ತಾರವಾಗಿಯೇ ಪ್ರಸ್ತಾಪಗೊಂಡಿರುವ ‘ಸಿರಿ ಭೂವಲಯ’ಕ್ಕೂ ಚಿತ್ರದ ಮುಖ್ಯ ಕಥೆಗೂ ಇರುವ ಆಂತರಿಕ ಸಂಬಂಧ ಮೊದಲಿಗೆ ನನಗೆ ತಿಳಿಯಲಿಲ್ಲ. ನಂತರ ಹೊಳೆಯಿತು: ‘ಸಿರಿ ಭೂವಲಯ’ ಮನುಷ್ಯನ ಜೀವನಕ್ಕೆ, ಮನಸ್ಸಿಗೆ, ಅವುಗಳ ನಿಗೂಢತೆಗೆ, ಜಟಿಲ ಸಂಕೀರ್ಣ ಸ್ವರೂಪಕ್ಕೆ ಒಡ್ಡಿದ ಒಂದು ರೂಪಕ. ಅದರ ಗೂಢಲಿಪಿಯನ್ನು decode ಮಾಡಿ ಅರ್ಥೈಸಿಕೊಂಡಾಗಲಷ್ಟೇ ಅದರ ಸ್ವಾರಸ್ಯ ನಮಗೆ ದಕ್ಕಲು ಸಾಧ್ಯ.
ಇದನ್ನೂ ಓದಿ: Kannada New Movie : ʻಡಾಲರ್ಸ್ ಪೇಟೆ’ ಸೇರಿದ ಮದಗಜ ಕುಶಾಲ್: ಫಸ್ಟ್ ಲುಕ್ ಪೋಸ್ಟರ್ ರಿಲೀಸ್
ಒಟ್ಟಾರೆ ಮನಸ್ಸಿಗೆ ಮುಟ್ಟುವ, ಹಾಗೆಯೇ ಚಿಂತನೆಗೂ ಹಚ್ಚುವ ಒಂದು ಗಂಭೀರ, ಅರ್ಥಪೂರ್ಣ ಪ್ರಯೋಗವಾಗಿ ‘ಮಾವು ಬೇವು’ ನನಗೆ ಮೆಚ್ಚುಗೆಯಾಯಿತು. ನಿಮ್ಮ ಇಡೀ ಚಿತ್ರತಂಡಕ್ಕೆ ನನ್ನ ಪ್ರೀತಿಯ ಅಭಿನಂದನೆಗಳು. ಸಕಲ ಯಶಸ್ಸು ಮತ್ತು ಶ್ರೇಯಸ್ಸು ನಿಮಗೆ ಲಭಿಸಲಿʼʼಎಂದು ಬರೆದುಕೊಂಡಿದ್ದಾರೆ.
ಶ್ರೀಸಾಯಿ ಗಗನ ಪ್ರೊಡಕ್ಷನ್ಸ್ ಅಡಿಯಲ್ಲಿ ಶ್ರೀ ಎಸ್. ರಾಜಶೇಖರ ಅವರ ನಿರ್ಮಾಣ ಮಾಡಿದ್ದಾರೆ. ಕೆನಡಾದಲ್ಲಿ ನೆಲೆಸಿರುವ ದೀಪಕ್ ಪರಮಶಿವಯ್ಯ ಅವರು ಚಿತ್ರದಲ್ಲಿ ಪುಟ್ಟ ಪಾತ್ರ ಮಾಡುವುದರ ಜತೆಗೆ ಸಂಗೀತ ಸಂಯೋಜನೆ ಕೂಡ ಮಾಡಿದ್ದಾರೆ. ನಾಗರಾಜ ಆದ್ವಾನಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಎರಡು ತಾಸಿಗಿಂತ ಕೊಂಚ ಹೆಚ್ಚಿರುವ ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ಗಾಯಕಿ ಚೈತ್ರಾ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಡ್ಯಾನಿ ಕುಟ್ಟಪ್ಪ ಪ್ರಮುಖ ಪಾತ್ರದಲ್ಲಿದ್ದು, ನೀನಾಸಂ ಸಂದೀಪ್, ಗಾಯಕಿ ಚೈತ್ರಾ, ಸುಪ್ರಿಯಾ ಎಸ್.ರಾವ್, ರಂಜಿತಾ, ಸಿತಾರ ಚಕ್ರವರ್ತಿ, ರಂಜನ್ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.