ಬೆಂಗಳೂರು: ’ನವ ದಿಗಂತ’ ಚಿತ್ರದ ಮುಹೂರ್ತ ಸಮಾರಂಭವು ಶಕ್ತಿ ದೇವತೆ ಸರ್ಕಲ್ ಮಾರಮ್ಮನ ಸನ್ನಿದಿಯಲ್ಲಿ ಸರಳವಾಗಿ ಮುಹೂರ್ತ ನಡೆಯಿತು. ’ಉಸಿರೆ’ ಸಿನಿಮಾದ ನಿರ್ಮಾಪಕಿ ಲಕ್ಷೀಹರೀಶ್ ಕ್ಯಾಮೆರ ಆನ್ ಮಾಡಿದರೆ, ಉದಯೋನ್ಮುಖ ಯುವ ನಟ ಭಾರ್ಗವ್ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಐಟಿ ಕಂಪೆನಿಯಲ್ಲಿ ವ್ಯವಸ್ಥಾಪಕರಾಗಿರುವ ದುರ್ಗಾಮೋಹನ್ ಅವರು ಚಿನ್ಮಯ ಸಿನಿ ಕ್ರಿಯೇಶನ್ಸ್ ನಿರ್ಮಾಣ ಸಂಸ್ಥೆ ಶುರು ಮಾಡಿ ಮೂರು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಅಲ್ಲದೆ ಇಂಡಿಯನ್ ಫಿಲಂ ಹೌಸ್‌ನಿಂದ ಉತ್ತಮ ಕಥೆ ಮತ್ತು ಚಿತ್ರಕಥೆಗಾಗಿ ಪ್ರಶಸ್ತಿಗಳನ್ನು ಕೂಡ ಪಡೆದಿದ್ದಾರೆ. ಇದರ ಅನುಭವದಿಂದಲೇ ಈಗ ಸಿನಿಮಾಕ್ಕೆ ಕಥೆ,ಚಿತ್ರಕಥೆ ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರೊಫೆಸರ್, ಇಂಜಿನಿಯರ್ ಹಾಗೂ ಇತರೆ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವವರು ಚಿತ್ರದಲ್ಲಿ ಕಲಾವಿದರು, ತಂತ್ರಜ್ಘರಾಗಿ ಗುರುತಿಸಿಕೊಳ್ಳುತ್ತಿರುವುದು ವಿಶೇಷ.
ಸಿನಿಮಾದ ಕುರಿತು ಹೇಳುವುದಾದರೆ, ಪ್ರತಿಯೊಬ್ಬರಿಗೂ ಪ್ರತಿಭೆ ಅನ್ನುವುದು ಹುಟ್ಟಿನಿಂದಲೇ ಬಂದಿರುತ್ತದೆ. ಆದರೆ ಅದನ್ನು ಮರೆತು ಜೀವನಕ್ಕೋಸ್ಕರ ಬೇರೆ ಉದ್ಯೋಗ ಮಾಡುತ್ತಿರುತ್ತೇವೆ. ನಿಜವಾದ ಸಂತೋಷ ಸಿಗುವುದು ಕಲೆಯಿಂದ ಅಂತ ತಿಳಿಯದೆ ಜೀವನ ಸಾಗಿಸುತ್ತಿರುತ್ತೇವೆ. ವೃತ್ತಿ-ಪ್ರವೃತ್ತಿಯನ್ನು ಬದುಕಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ವಿದ್ಯಾರ್ಥಿ ದೆಸೆಯಿಂದ ಬಂದಾಗ ಮಾತ್ರ, ಕೊನೆತನಕ ಸಾರ್ಥಕ ಜೀವನ ನಡೆಸಬಹುದು. ಕಲೆಯ ಕಡೆ ಗಮನ ಹರಿಸಿದರೆ ಅಡ್ಡದಾರಿಗೆ ಹೋಗಲು ಮನಸು ಬಾರದೆ, ಸಕರಾತ್ಮಕ ಚಿಂತನೆ ನಡೆಸಲು ಪ್ರೇರಣೆ ಸಿಗುತ್ತದೆ. ಸಂಗೀತ, ವಾಗ್ಮಿ, ನೃತ್ಯ, ಕ್ರೀಡೆ, ಬರವಣಿಗೆ ಏನೇ ತೆಗೆದುಕೊಂಡರೂ ಅದೇ ಕಲೆಯಾಗಿರುತ್ತದೆ ಹೊರತು ಬೇರೇನೂ ಆಗಿರುವುದಿಲ್ಲ. ಕಲೆಗೆ ಸಾವಿಲ್ಲ. ಕಲೆಯಲ್ಲಿ ತೊಡಗಿಸಿಕೊಂಡವರು ಸದಾ ಉತ್ಸಾಹಿಗಳಾಗಿ ಆನಂದದಿಂದಿರುತ್ತಾರೆ. ಇಂತಹ ಅಂಶಗಳನ್ನು ಬಳಸಿಕೊಂಡು ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಪೋಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಒಂದು ಒಳ್ಳೆಯ ಸಂದೇಶ ಕೊಡಲಿದೆ.
ಇದನ್ನೂ ಓದಿ: Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ
ಪ್ರೊಫೆಸರ್ ಆಗಿ ಮೇಘನಾ, ವಿದ್ಯಾರ್ಥಿಗಳಾಗಿ ಚೇತನ್, ರೋಷನ್, ಅಭಿಜಿತ್, ಪುಷ್ಪ, ಯಮುನಾ, ಆಶುತೋಷ್, ಭೋಜರಾಜ, ಸಹದ್ಯೋಗಿಗಳಾಗಿ ಅಜಯ್, ಸಂಕೀರ್ತ್ ಉಳಿದಂತೆ ಅನಿಲ್ ಮಾರ್ಟಿಬನ್, ಪ್ರೀತಿಪಾಟೀಲ್, ನವೀನ್, ಸಂಧ್ಯಾ, ಮೂರ್ತಿ, ಲಕ್ಷೀ, ಪ್ರೀತಂ, ವಾಸುದೇವಚಾರ್. ಇವರೆಲ್ಲರಿಗೂ ಪ್ರಥಮ ಅವಕಾಶ. ನಟ ಭಾರ್ಗವ್ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವ ಪಾತ್ರದಲ್ಲಿ ರೀಲ್‌ದಲ್ಲಿ ಅದೇ ರೀತಿ ಕಾಣಿಸಿಕೊಳ್ಳುತ್ತಿದ್ದಾರೆ.
ನಾಲ್ಕು ಹಾಡುಗಳಿಗೆ ಶರತ್-ಪ್ರಫುಲ್ಲಾ ಸಂಗೀತ, ಪ್ರಜ್ವಲ್ ವಿನೋದ್ ಛಾಯಾಗ್ರಹಣ, ಸಂಕಲನ ನೊಮಾಡಿಕ್ ಸ್ಟುಡಿಯೋ, ನೃತ್ಯ ರೋಶನ್, ಮೇಕಪ್ ಪವಿತ್ರಾ, ಹಾಗೂ ಎರಡು ಸಾಹಸ ದೃಶ್ಯಗಳನ್ನು ಕ್ಯಾಮೆರಾ ಟ್ರಿಕ್ಸ್‌ದಲ್ಲಿ ಚಿತ್ರೀಕರಿಸಲಾಗುವುದು. ಡಾಬಸಪೇಟೆ, ಬೆಂಗಳೂರು ಸುತ್ತಮುತ್ತ ೩೦ ದಿನಗಳ ಕಾಲ ಎರಡು ಹಂತದಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.