Site icon Vistara News

Kannada New Movie: ಕಾಸಿನ ಹಿಂದೆ ಬಿದ್ದವರ ಕನಸಿನ ಕಥೆ `ಪುಕ್ಸಟ್ಟೆ ಪೈಸ’ ಥಿಯೇಟರಿನತ್ತ

ಬೆಂಗಳೂರು: ಬಹುತೇಕ ಹೊಸ ಪ್ರತಿಭೆಗಳೇ (Kannada New Movie) ಸೇರಿ ನಿರ್ಮಿಸಿರುವಪುಕ್ಸಟ್ಟೆ ಪೈಸ(Puksatte Paisa) ಸಿನಿಮಾ ಇದೇ ಏ. 19ರಂದು ತೆರೆಗೆ ಬರುತ್ತಿದೆ. ಸಿನಿಮಾ ಪ್ರಚಾರದ ಭಾಗವಾಗಿ ಈಗಾಗಲೇ ‘ಪುಕ್ಸಟ್ಟೆ ಪೈಸ’ ಸಿನಿಮಾದ ಟ್ರೈಲರ್‌ ಮತ್ತು ಹಾಡುಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

‘ಪುಕ್ಸಟ್ಟೆ ಪೈಸ’ ಸಿನಿಮಾ ‘ಇಂಚರ ಪಿಕ್ಚರ್ಸ್’ ಬ್ಯಾನರಿನಲ್ಲಿ ಮಧುಸೂಧನ ಎ. ಎಸ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಭರತ್ ಶೆಟ್ಟಿ, ಅಕ್ಷತಾ ಕುಕ್ಕಿ, ಮಹೇಶ್ ಬಾಬು, ಸಯ್ಯದ್, ರಕ್ಷಿತಾ ಮಲ್ಲಿಕಾರ್ಜುನ್, ಉಮೇಶ್, ಗಜಾ, ಮಂಜೇಗೌಡ, ಥಾಮಸ್, ಸೂರ್ಯ, ಸಂತು ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಮಧುಸೂಧನ ಎ. ಎಸ್. ಸಿನಿಮಾ ಬಗ್ಗೆ ಮಾತನಾಡಿ ʻʻಇದೊಂದು ಕಾಮಿಡಿ, ಥ್ರಿಲ್ಲರ್ ಶೈಲಿಯ ಸಿನಿಮಾ. ಕೆಲ ವರ್ಷಗಳ ಹಿಂದೆ ನಡೆದ ಹಣದ ಹಗರಣ ಮತ್ತು ನಮ್ಮ ನಡುವೆಯೇ ಅಲ್ಲಲ್ಲಿ ನಡೆದಿರುವ ಒಂದಷ್ಟು ವಿಷಯಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ‘ಪುಕ್ಸಟ್ಟೆ ಪೈಸ’ ಸಿನಿಮಾದ ಟೈಟಲ್ಲೇ ಹೇಳುವಂತೆ ಪುಕ್ಸಟ್ಟೆ ಹಣದ ಮೇಲಿನ ಆಸೆಯಿಂದ ಅದರ ಹಿಂದೆ ಬಿದ್ದವರ ಒದ್ದಾಟ, ಪರದಾಟ ಹೇಗಿರುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಮನರಂಜನಾತ್ಮಕವಾಗಿ ಹೇಳಿದ್ದೇವೆ’ʼ ಎಂದು ವಿವರಣೆ ನೀಡಿದರು.

ಇದನ್ನೂ ಓದಿ: Kannada New Movie: ಈ ವಾರ ಸ್ಯಾಂಡಲ್‌ವುಡ್‌ನಲ್ಲಿ 12 ಸಿನಿಮಾಗಳು ರಿಲೀಸ್‌!

ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಕಲಾವಿದರಾದ ಮಹೇಶ್ ಬಾಬು, ಸಯ್ಯದ್, ರಕ್ಷಿತಾ ಮಲ್ಲಿಕಾರ್ಜುನ್, ಗಜಾ, ಉಮೇಶ್, ಸಂಗೀತ ನಿರ್ದೇಶಕ ವಿಶ್ವಾಸ್ ಕೌಶಿಕ್ ಮತ್ತಿತರರು ಸಿನಿಮಾದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.

‘ಪುಕ್ಸಟ್ಟೆ ಪೈಸ’ ಸಿನಿಮಾದ ಮೂರು ಹಾಡುಗಳಿಗೆ ವಿಶ್ವಾಸ್ ಕೌಶಿಕ್ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾಕ್ಕೆ ಮಯೂರ್ ಆರ್. ಶೆಟ್ಟಿ, ವೇಲ್ ಮುರುಗನ್ ಛಾಯಾಗ್ರಹಣ, ನಿಶಿತ್ ಪೂಜಾರಿ ಸಂಕಲನವಿದೆ. ಬೆಂಗಳೂರು, ಮಂಗಳೂರು, ಹಾಸನ, ಹೊಳೆನರಸೀಪುರ ಸುತ್ತಮುತ್ತ ‘ಪುಕ್ಸಟ್ಟೆ ಪೈಸ’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಈಗಾಗಲೇ ಬಿಡುಗಡೆಯಾಗಿರುವ ‘ಪುಕ್ಸಟ್ಟೆ ಪೈಸ’ ಸಿನಿಮಾದ ಹಾಡುಗಳು ಮತ್ತು ಟ್ರೈಲರ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದೆ. ‘ಪುಕ್ಸಟ್ಟೆ ಪೈಸ’ ಸಿನಿಮಾ ಥಿಯೇಟರಿನಲ್ಲಿ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬುದು ಇದೇ ಏ. 19ಕ್ಕೆ ಗೊತ್ತಾಗಲಿದೆ.

Exit mobile version