23ನೇ ಸಾಲಿನ ಕನ್ನಡ ರಾಜ್ಯೋತ್ಸವ (Karnataka Rajyotsava Award) ಪ್ರಶಸ್ತಿ ಪ್ರಕಟ ಆಗಿದೆ. ಈ ಬಾರಿ ಚಲನಚಿತ್ರ ಕ್ಷೇತ್ರದಿಂದ ಹಿರಿಯ ಕಲಾವಿದರಾದ ಬ್ಯಾಂಕ್ ಜನಾರ್ದನ್ ಮತ್ತು ಡಿಂಗ್ರಿ ನಾಗರಾಜ್ (Dingri Nagaraj) ಅವರಿಗೆ ಪ್ರಶಸ್ತಿ ಘೋಷಣೆ ಆಗಿದೆ. ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹೊರ ಹಾಕುತ್ತಿದ್ದಾರೆ.
ಬ್ಯಾಂಕ್ ಜನಾರ್ದನ್ ಅವರಿಗೆ 74 ವರ್ಷ ವಯಸ್ಸಾಗಿದೆ. ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಅವರು ಈವರೆಗೆ ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ನಟನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಾಸ್ಯ ಸೇರಿದಂತೆ ಗಂಭೀರ ಪಾತ್ರಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದು, ನಟನೆಗೆ ಜೀವ ತುಂಬುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.
ಗೌರಿ ಗಣೇಶ, ಕೌರವ, ರಂಗ ಎಸ್.ಎಸ್.ಎಲ್.ಸಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ಅಲ್ಲದೆ, ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ ನಟರ ಜತೆ ಇವರು ನಟನೆ ಮಾಡಿದ ಖ್ಯಾತಿಯನ್ನು ಹೊಂದಿದ್ದಾರೆ. ಬ್ಯಾಂಕ್ ಜನಾರ್ದನ್ ಕನ್ನಡ ಸಿನಿಮಾ ರಂಗದ ಮಟ್ಟಿಗೆ ಒಬ್ಬ ಅತ್ಯುತ್ತಮ ಹಾಸ್ಯ ನಟರಾಗಿದ್ದಾರೆ. ಸಹಜ ನಟನೆ ಮೂಲಕ ಗಮನ ಸೆಳೆಯುವ ಇವರು, ತಮ್ಮ ಹಾವ-ಭಾವ ಹಾಗೂ ಮಾತಿನ ಮೂಲಕ ಹಾಸ್ಯವನ್ನು ಹಂಚುತ್ತಿದ್ದರು.
ಇದನ್ನೂ ಓದಿ: Karnataka Rajyotsava : ಇಸ್ರೋ ಮುಖ್ಯಸ್ಥ ಸೋಮನಾಥ್ ಸೇರಿ 68 ಮಂದಿ, 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ
ಉಪೇಂದ್ರ ನಿರ್ದೇಶನದ ಶ್! ಸಿನಿಮಾದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಮಾಡಿದ ಇವರ ನಟನೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇದಲ್ಲದೆ ತರ್ಲೆ ನನ್ ಮಗ, ಬೆಳ್ಳಿಯಪ್ಪ ಬಂಗಾರಪ್ಪ , ಗಣೇಶ ಸುಬ್ರಹ್ಮಣ್ಯ, ಕೌರವ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ತಮ್ಮ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ.ಸಿನಿಮಾಗಳ ಜತೆ ಜತೆಯಲ್ಲಿ ಧಾರಾವಾಹಿಗಳಲ್ಲಿಯೂ ಬಣ್ಣ ಹಚ್ಚಿದ್ದ ಬ್ಯಾಂಕ್ ಜನಾರ್ದನ್ ಅಲ್ಲಿಯೂ ನಗಿಸುವ ಪ್ರಯತ್ನವನ್ನು ಮುಂದುವರಿಸಿದ್ದರು. ಪಾಪ ಪಾಂಡು, ಮಾಂಗಲ್ಯ, ರೋಬೋ ಫ್ಯಾಮಿಲಿ, ಜೋಕಾಲಿ ಧಾರಾವಾಹಿಗಳಲ್ಲಿ ನಟಿಸಿ ಮನೆ ಮನೆ ಮಾತಾಗಿದ್ದಾರೆ.
ಡಿಂಗ್ರಿ ನಾಗಾರಾಜ್ ಚಲನಚಿತ್ರ ಮಾಧ್ಯಮಗಳಲ್ಲಿ ಉತ್ತಮ ನಟರಾಗಿ-ಹಾಸ್ಯ ಕಲಾವಿದರಾಗಿ ಹೆಸರು ಪಡೆದಿದ್ದಾರೆ. ಮಲ್ಲಿಗೆ ಹೂವೆ, ಪ್ರಚಂಡ ಪುಟಾಣಿಗಳು, ಜಗದೆಕ ವೀರ, ರಾಜಾಧಿ ರಾಜ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.