ಬೆಂಗಳೂರು: ಮಿಸ್ಟರ್ ಜಂಟಲ್ ಮ್ಯಾನ್ ಎಂದೇ ಜನಪ್ರಿಯವಾಗಿರುವ ಕಿರುತೆರೆಯ ನಟ ಅಜಿತ್ ರಾವ್ ಅಭಿನಯದ ಬಹುನಿರೀಕ್ಷಿತ ಕಿರುಚಿತ್ರ ‘ಡಿಯರ್ ಪೋರ್ಕಿ’ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ಟ್ರೈಲರ್ ‘A2 ಮೂವೀಸ್ ಯುಟ್ಯೂಬ್’ ಚಾನೆಲ್‌ನಲ್ಲಿ ಯುಗಾದಿಯಂದು ಬಿಡುಗಡೆಯಾಗಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ (Kannada Short Movie).
‘Dear ಪೊರ್ಕಿ’ ಸಿನಿಮಾದ ಹೆಸರೇ ಹೇಳುವ ಹಾಗೆ ಪ್ರೀತಿನೇ ಉಸಿರು ಎಂದು ಬದುಕುವ ಹುಡುಗನೊಬ್ಬನ ಕಥೆ. ಈ ಹುಡುಗ ನಮ್ಮನ್ನೆಲ್ಲ ಪ್ರೀತಿಯ ಲೋಕಕ್ಕೆ ಕರೆದೊಯ್ಯಲಿದ್ದಾನೆ. ಈ ನಾಯಕ ನಮಗೆಲ್ಲ ಪ್ರೀತಿಯ ಮತ್ತೊಂದು ಲೋಕವನ್ನೇ ಪರಿಚಯಿಸಲು ಹೊರಟಿದ್ದಾನೆ ಎಂದು ಚಿತ್ರತಂಡ ಹೇಳಿದೆ. ಕೃಷ್ಣ ಎಸ್.ಆರ್. ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಹೊಸಬರ ತಂಡವೇ ಸೇರಿಕೊಂಡು ಮಾಡಿರುವ ಚಿತ್ರ ಇದಾಗಿದ್ದು, “ಯಾವುದೇ ದೊಡ್ಡ ಸಿನಿಮಾಗೂ ಪೈಪೋಟಿ ಕೊಡಬಹುದಾದಂತ ಕಿರುಚಿತ್ರ” ಎನಿಸಿಕೊಂಡಿದೆ. ಟ್ರೈಲರ್ ನೋಡಿದವರೆಲ್ಲ ಮೆಚ್ಚುಗೆ ಸೂಚಿಸಿದ್ದಾರೆ. ಜತೆಗೆಅಭಿಮಾನಿಗಳಿಂದ ಬಹುಪರಾಕ್ ಪಡೆದುಕೊಳ್ಳುತ್ತಿದೆ. ಸಿನಿಮಾದ ನಾಯಕನಾಗಿ ಬೆಳಗಾವಿಯ ಅಜಿತ್ ರಾವ್ ನಟಿಸಿದ್ದು, ಅವರಿಗೆ ಇಬ್ಬರು ನಾಯಕಿಯರಿದ್ದಾರೆ.
ಕೆಲವು ಸಿನಿಮಾಗಳಲ್ಲಿ ಕೋ- ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವ ಹೊಂದಿರುವ ಕೃಷ್ಣ ಎಸ್.ಆರ್. ಅವರು ಸ್ವತಂತ್ರವಾಗಿ ನಿರ್ದೇಶಿಸುತ್ತಿರುವ ಮೊದಲ ಚಿತ್ರ ಇದು ಎನ್ನುವುದು ವಿಶೇಷ. ಸಿನಿಮಾ ತಂಡದ ಪ್ರತಿಯೊಬ್ಬರೂ ಅಚ್ಚುಕಟ್ಟಾಗಿ ಕೆಲಸ ಮಾಡಿರುವುದು ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ಕಂಡು ಬಂದಿದೆ. ಜತೆಗೆ ಇದರಲ್ಲಿ ಮನಸಿಗೆ ಮುದ ನೀಡುವ ಒಂದೊಳ್ಳೆ ಸಂಗೀತವೂ ಇದೆ.
ಮಾತ್ರವಲ್ಲ ಮಾಸ್ ಆಡಿಯನ್ಸ್‌ಗೆ ಬೇಕಾದ ಪೈಟಿಂಗ್ ದೃಶ್ಯಗಳೂ ಇವೆ. ಸಿನಿಮಾದಲ್ಲಿ ನಟಿಸಿದ ಪ್ರತಿಯೊಬ್ಬರ ಅಭಿನಯವು ನೆನಪಿನಲ್ಲಿ ಉಳಿಯುವಂತಿದೆ ಎನ್ನುವುದು ಸಿನಿಮಾ ತಂಡದ ಅಭಿಪ್ರಾಯ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ