Site icon Vistara News

Kantara Awards: 16 ಕೋಟಿ ಖರ್ಚು, 400 ಕೋಟಿ ಆದಾಯ; ʼಕಾಂತಾರʼ ಕುರಿತ ವಿಶೇಷ ಸಂಗತಿಗಳು ಇಲ್ಲಿವೆ

Kantara Awards

2022ರಲ್ಲಿ ತೆರೆ ಕಂಡ ರಿಷಬ್ ಶೆಟ್ಟಿ (Rishab Shetty) ಅಭಿನಯದ ‘ಕಾಂತಾರ’ (Kantara Awards) ಚಿತ್ರ ವಿಶ್ವ ಮಟ್ಟದಲ್ಲೇ ಪ್ರೇಕ್ಷಕರನ್ನು ಸೆಳೆದಿತ್ತು. ಕರಾವಳಿಯ ಸಂಸ್ಕೃತಿಯನ್ನು ಬಿಚ್ಚಿಟ್ಟ ಈ ಸಿನಿಮಾ 3ನೇ ಅತೀ ಹೆಚ್ಚು ಹಣ ಗಳಿಸಿದ ಕನ್ನಡದ ಚಲನಚಿತ್ರ (kannada film) ಎಂಬ ಖ್ಯಾತಿಗೆ ಪಾತ್ರವಾಯಿತು. ಇದೀಗ ಕಾಂತಾರ ಅತ್ಯುತ್ತಮ ಮನರಂಜನಾ ಚಿತ್ರ ಎಂಬ ರಾಷ್ಟ್ರ ಪ್ರಶಸ್ತಿಗೆ ಪಾತ್ರವಾಗಿದೆ. ಈ ಚಿತ್ರದ ನಾಯಕ ರಿಷಬ್‌ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ.

ರಿಷಬ್ ಶೆಟ್ಟಿ ಈ ಚಿತ್ರದ ಮೂಲಕ ಎಲ್ಲರ ಮನ ಗೆದ್ದಿದ್ದರು. ನಿರ್ದೇಶನ, ಬರವಣಿಗೆ, ನಿರ್ಮಾಣ ವಿನ್ಯಾಸ, ಛಾಯಾಗ್ರಹಣ, ಭೂತ ಕೋಲದ ಪ್ರದರ್ಶನ, ಸಾಹಸ ದೃಶ್ಯಗಳು, ಸಂಕಲನ, ಹಿನ್ನೆಲೆ ಸಂಗೀತ ಮತ್ತು ಅಭಿನಯಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನೂ ಈ ಚಿತ್ರ ಪಡೆದಿತ್ತು.

ಎಲ್ಲರಿಂದಲೂ ಭಾರಿ ಪ್ರಶಂಸೆಗೆ ಪಾತ್ರವಾಗಿದ್ದ ಈ ಚಿತ್ರದ ಕುರಿತ ಹತ್ತು ಪ್ರಮುಖ ಸಂಗತಿಗಳು ಇಂತಿವೆ:


ಸಣ್ಣ ಬಜೆಟ್ ಆದರೂ ದೊಡ್ಡ ಯಶಸ್ಸು

ಕಾಂತಾರವನ್ನು ಕೇವಲ 16 ಕೋಟಿ ರೂಪಾಯಿಗಳ ಸಾಧಾರಣ ಬಜೆಟ್‌ನಲ್ಲಿ ನಿರ್ಮಿಸಲಾಯಿತು. ಇದರ ಹೊರತಾಗಿಯೂ ಇದು ಗಮನಾರ್ಹ ಯಶಸ್ಸನ್ನು ಗಳಿಸಿತು. ವಿಶ್ವಾದ್ಯಂತ ಅಂದಾಜು 400 ಕೋಟಿ ರೂ. ಆದಾಯ ಗಳಿಸಿ ದಾಖಲೆ ನಿರ್ಮಿಸಿತ್ತು.

ನಿಗೂಢ ಕಾಡಿನ ಸುತ್ತ

‘ಕಾಂತಾರ’ ಎಂಬ ಪದದ ಅರ್ಥ “ಅತೀಂದ್ರಿಯ ಅರಣ್ಯ”. ಇದು ಚಲನಚಿತ್ರದ ಮುಖ್ಯ ಪರಿಕಲ್ಪನೆಯನ್ನು ಸೂಚಿಸುತ್ತದೆ. ನಿರ್ದೇಶಕ ರಿಷಬ್ ಶೆಟ್ಟಿ ಕಾಡಿನೊಂದಿಗಿನ ಮಾನವರ ನಂಟು ಮತ್ತು ಅದರ ಕುತೂಹಲಕಾರಿ ಸ್ವಭಾವವನ್ನು ಎತ್ತಿ ತೋರಿಸಿದ್ದರು.


ಬಹುಮುಖ ಪ್ರತಿಭೆಯ ರಿಷಬ್ ಶೆಟ್ಟಿ

ರಿಷಬ್‌ ಶೆಟ್ಟಿ ಅವರು ʼಕಾಂತಾರʼ ಚಿತ್ರವನ್ನು ನಿರ್ದೇಶಿಸಿದ್ದು ಮಾತ್ರವಲ್ಲದೆ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಚಿತ್ರಕ್ಕೆ ಚಿತ್ರಕಥೆಯನ್ನೂ ಬರೆದಿದ್ದರು.

ಜಾನಪದ ಸ್ಫೂರ್ತಿ

ಈ ಕಥೆಯು ಕೆರಾಡಿ ಎಂಬ ಗ್ರಾಮದ ಸಮುದಾಯದ ವಿಶಿಷ್ಟ ಸಂಪ್ರದಾಯದಿಂದ ಸ್ಫೂರ್ತಿ ಪಡೆದಿದೆ. ಇದು ಚಲನಚಿತ್ರವನ್ನು ಚಿತ್ರೀಕರಿಸಿದ ಸ್ಥಳವೂ ಆಗಿದೆ.


ಅನುರಣಿಸುವ ಕೂಗು

ಚಿತ್ರದ ಕೊನೆಯಲ್ಲಿ ಒಂದು ವಿಶಿಷ್ಟವಾದ ಮತ್ತು ಮತ್ತೆ ಮತ್ತೆ ನಮ್ಮನ್ನು ಕಾಡುವ ಕೂಗನ್ನು ಈ ಚಿತ್ರ ಒಳಗೊಂಡಿದೆ. ಕುತೂಹಲಕಾರಿಯಾಗಿ ಚಿತ್ರೀಕರಣದ ಕೊನೆಯಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದರು.

ವಿಮರ್ಶಕರ ಮೆಚ್ಚುಗೆ

ಕಾಂತಾರ ಚಿತ್ರವು ವ್ಯಾಪಕ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಅದರ ಆಕರ್ಷಕ ಕಥೆ, ಕಲಾವಿದರ ಶಕ್ತಿಯುತ ಪ್ರದರ್ಶನಗಳು ಮತ್ತು ಉಸಿರು ಬಿಗಿ ಹಿಡಿಯುವಂತೆ ಮಾಡುವ ದೃಶ್ಯಗಳಿಗಾಗಿ ವೀಕ್ಷಕರ ಪ್ರಶಂಸೆಗೆ ಪಾತ್ರವಾಗಿತ್ತು.


ಭಾಷೆಯ ಗಡಿಯನ್ನು ಮೀರಿತ್ತು

ಇದು ಕನ್ನಡ ಭಾಷೆಯ ಚಲನಚಿತ್ರವಾಗಿದ್ದರೂ ಭಾಷೆಯ ಗಡಿಯನ್ನು ದಾಟಿ ಭಾರತದಾದ್ಯಂತ ವೀಕ್ಷಕರನ್ನು ಆಕರ್ಷಿಸಿತು. ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಹಲವಾರು ಭಾಷೆಗಳಿಗೆ ಡಬ್ ಆಗುವುದರ ಮೂಲಕ ಕೋಟ್ಯಂತರ ಜನರನ್ನು ತಲುಪಿತು.


ಸರಳ ಆದರೆ ಶಕ್ತಿಯುತ ಸಂದೇಶ

ಚಲನಚಿತ್ರವು ಮಾನವರು ಮತ್ತು ಪ್ರಕೃತಿಯ ನಡುವಿನ ಸಂಘರ್ಷ, ನಂಬಿಕೆ ಮತ್ತು ಸಂಪ್ರದಾಯದ ವಿಷಯಗಳನ್ನು ಬಿಂಬಿಸಿದೆ.

ಇದನ್ನೂ ಓದಿ: Rishab Shetty: ಅಣ್ಣಾವ್ರ ಅಪ್ಪಟ ಅಭಿಮಾನಿ ರಿಷಬ್‌ ಶೆಟ್ಟಿ ಸಿನಿ ಜರ್ನಿ ಹೀಗಿತ್ತು! ನಾಡಿಗೆ ಕೀರ್ತಿ ತಂದ ಕುಂದಾಪುರದ ಹುಡುಗ!

ಸಾಂಸ್ಕೃತಿಕ ರತ್ನ

ʼಕಾಂತಾರʼ ಚಿತ್ರವನ್ನು ಕೇವಲ ವಾಣಿಜ್ಯ ಯಶಸ್ಸಿಗಿಂತ ಹೆಚ್ಚಾಗಿ ಕನ್ನಡ ಚಿತ್ರರಂಗದ ಹಿರಿಮೆಯನ್ನು ಪ್ರದರ್ಶಿಸುವ ಸಾಂಸ್ಕೃತಿಕ ರತ್ನವೆಂದೇ ಪರಿಗಣಿಸಲಾಗಿದೆ. ಈಗ ಈ ಚಿತ್ರ ರಾಷ್ಟ್ರ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿರುವುದು ಕನ್ನಡ ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ.

Exit mobile version