ಬೆಂಗಳೂರು: ಕರುನಾಡಿನ ಕರಾವಳಿ ಕಥೆ ಈಗ ಜಗತ್ತಿನಾದ್ಯಂತ ಮನೆಮಾತಾಗಿದೆ. ‘ಕಾಂತಾರ’ ದೊಡ್ಡ ಯಶಸ್ಸು ಪಡೆಯುವ ಜೊತೆಗೆ ಬಾಕ್ಸ್ ಆಫೀಸ್ನಲ್ಲೂ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಬಿಡುಗಡೆಯಾದ 18 ದಿನದಲ್ಲಿ ‘ಕಾಂತಾರ’ ಸಿನಿಮಾ ₹150 ಕೋಟಿ (Kantara Collection) ಗಳಿಸುವ ಮೂಲಕ ಹೊಸ ಇತಿಹಾಸ ಬರೆದಿದೆ. ಹಾಗೇ ₹150 ಕೋಟಿ ಗಳಿಸಿದ ಕನ್ನಡದ 5ನೇ ಸಿನಿಮಾ ಎಂಬ ಹೆಗ್ಗಳಿಕೆಗೂ ‘ಕಾಂತಾರ’ ಪಾತ್ರವಾಗಿದೆ.
‘ಕೆಜಿಎಫ್-1’ ಮೊದಲ ಬಾರಿಗೆ ₹150 ಕೋಟಿ ಸೇರಿದ ಕನ್ನಡ ಸಿನಿಮಾ ಆಗಿತ್ತು. 4 ವರ್ಷದ ಹಿಂದೆ ‘ಕೆಜಿಎಫ್’ ಚಾಪ್ಟರ್-1 ₹250 ಕೋಟಿ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿತ್ತು. ‘ಕೆಜಿಎಫ್-1’ ನಂತರ ಅಪ್ಪು ಅಭಿನಯದ ಜೇಮ್ಸ್ ಚಿತ್ರ ₹150 ಕೋಟಿ ಕ್ಲಬ್ ಸೇರಿತ್ತು. ನಂತರ ಬಂದ ‘ಕೆಜಿಎಫ್-2’ ₹1250 ಕೋಟಿ ಕಲೆಕ್ಷನ್ ಮಾಡುವ ಮೂಲಕ ಅತಿ ಹೆಚ್ಚು ಗಳಿಸಿದ ಭಾರತದ 3ನೇ ಸಿನಿಮಾ ಎಂಬ ಹೆಗ್ಗಳಿಕೆ ಪಡೆಯಿತು. ನಂತರ ವಿಕ್ರಾಂತ್ ರೋಣ ₹210 ಕೋಟಿ ಕಲೆಕ್ಷನ್ ಮಾಡಿತ್ತು. ಇದೀಗ ಕಾಂತಾರ ₹150 ಕೋಟಿ ಕ್ಲಬ್ ಸೇರ್ಪಡೆಯಾಗಿದ್ದು, ಅಧಿಕೃತ ಘೋಷಣೆ ಬಾಕಿಯಿದೆ ಅಷ್ಟೇ.
ಕನ್ನಡಿಗರ ಹವಾ!
ದೇಶದಲ್ಲಿ ಬಾಲಿವುಡ್ ಸಿನಿಮಾಗಳ ಎದುರು ಬೇರೆ ಭಾಷೆಯ ಸಿನಿಮಾಗಳು ನಿಲ್ಲಲ್ಲ ಎಂಬ ವಾದ ಮೊದಲಿನಿಂದಲೂ ಇತ್ತು. ಅದರಲ್ಲೂ ಕನ್ನಡ ಸಿನಿಮಾಗಳ ಕುರಿತಾಗಿ ಬಾಲಿವುಡ್ ನಟರೇ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು. ಆದರೆ ಇದೀಗ ಸೀನ್ ಚೇಂಜ್ ಆಗಿದ್ದು, ಕನ್ನಡ ಸಿನಿಮಾಗಳ ಎದುರು ಬಾಲಿವುಡ್ ಸಿನಿಮಾಗಳು ಬೆಚ್ಚಿ ಬೀಳುತ್ತಿವೆ. ಅದರಲ್ಲೂ ‘ಕಾಂತಾರ’ ಹವಾ ಕಂಡು ಬಾಲಿವುಡ್ ಸ್ಟಾರ್ಗಳಿಗೆ ನಡುಕ ಶುರುವಾಗಿದೆ. ಈಗಾಗಲೇ ಬಾಲಿವುಡ್ ಸಿನಿಮಾಗಳು ರಿಲೀಸ್ ಆಗಿದ್ದ ಥಿಯೇಟರ್ನಲ್ಲಿ ‘ಕಾಂತಾರ’ ಹಾಕಲಾಗಿದೆ. ಈ ಮೂಲಕ ಬಿ-ಟೌನ್ ಸ್ಟಾರ್ಗಳ ಸಿನಿಮಾಗಳಿಗೆ ಗೇಟ್ಪಾಸ್ ನೀಡಿದ್ದಾರೆ ಚಿತ್ರಮಂದಿರಗಳ ಮಾಲೀಕರು.
ಒಟ್ಟಾರೆ ‘ಹೊಂಬಾಳೆ’ ಸಂಸ್ಥೆ ನಿರ್ಮಿಸಿರುವ ಒಟ್ಟು 3 ಚಿತ್ರಗಳು ₹150 ಕೋಟಿ ಕ್ಲಬ್ ಸೇರಿವೆ. ಈ ಮೊದಲು ‘ಕೆಜಿಎಫ್’ ಚಾಪ್ಟರ್-1 & ‘ಕೆಜಿಎಫ್’ ಚಾಪ್ಟರ್-2 ಈ ಸಾಧನೆ ಮಾಡಿದ್ದವು. ಇದೀಗ ‘ಕಾಂತಾರ’ ಕೂಡ ₹150 ಕೋಟಿ ಕ್ಲಬ್ ಸೇರಿದ್ದು, ಈಗಿನ ಕ್ರೇಜ್ ಇದೇ ರೀತಿ ಮುಂದುವರಿದರೆ ₹200 ಕೋಟಿ ಗಳಿಸುವ ಸಾಧ್ಯತೆಯೂ ದಟ್ಟವಾಗಿದೆ ಅಂತಿದ್ದಾರೆ ಬಾಕ್ಸ್ ಆಫೀಸ್ ತಜ್ಞರು.
ಇದನ್ನೂ ಓದಿ: Kantara Hindi | ಕನ್ನಡಿಗರ ಕಾಂತಾರ ಕಂಡು ಬೆಚ್ಚಿಬಿದ್ದ ಬಾಲಿವುಡ್ ನಟರು!