ಬೆಂಗಳೂರು : ಸ್ಯಾಂಡಲ್‌ವುಡ್ ನಟ ರಿಷಬ್ ಶೆಟ್ಟಿ (Rishab Shetty) ʻಕಾಂತಾರʼ ಚಿತ್ರದ ಮೂಲಕ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಹೆಗ್ಗಳಿಕೆಯ ಜತೆಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. 400 ಕೋಟಿ ರೂ. ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡ ನಂತರ ಕಾಂತಾರ ಸಿನಿಮಾ ಒಟಿಟಿಯಲ್ಲಿಯೂ ಸ್ಟ್ರೀಮ್ ಆಗುತ್ತಿದೆ. ಈ ವರ್ಷ ಕೆಜಿಎಫ್-2 ಮತ್ತು 777 ಚಾರ್ಲಿ ಜತೆಗೆ ಕಾಂತಾರ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುವಲ್ಲಿ ಯಶಸ್ವಿಯಾಗಿದೆ. ಇದೀಗ ಸಿನಿಮಾದಲ್ಲಿ ನಟಿಸಿರುವ ನಟರ ಸಂಭಾವನೆ ರಿವೀಲ್ ಆಗಿದೆ.
ವರದಿ ಪ್ರಕಾರ 16 ಕೋಟಿ ರೂ. ಬಜೆಟ್‌ನಲ್ಲಿ ʻಕಾಂತಾರʼ ಸಿನಿಮಾ ನಿರ್ಮಾಣ ಮಾಡಿದ್ದು 400 ಕೋಟಿ ರೂ. ಅಧಿಕ ಗಳಿಕೆ ಕಂಡಿದೆ. ಹೀಗಿರುವಾಗ ನಟನೆ ಹಾಗೂ ನಿರ್ದೇಶನ ಮಾಡಿರುವ ರಿಷಬ್ ಶೆಟ್ಟಿ ಅವರು ಈ ಸಿನಿಮಾದಲ್ಲಿ ಕೇವಲ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿ ಆಗಿದೆ. ಇನ್ನುಳಿದಂತೆ ಫಾರೆಸ್ಟ್ ಆಫೀಸರ್ ಮುರಳಿ ಪಾತ್ರದಲ್ಲಿ ನಟಿಸಿರುವ ಕಿಶೋರ್, ತಮ್ಮ ಪಾತ್ರಕ್ಕಾಗಿ 1 ಕೋಟಿ ರೂ ಪಡೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | Rishab Shetty | ʻಅದ್ಭುತ ವ್ಯಕ್ತಿಗಳ ಜತೆ ಅದ್ಭುತ ಚರ್ಚೆʼ ಅಂದಿದ್ಯಾಕೆ ರಿಷಬ್ ಶೆಟ್ಟಿ: ಫೋಟೊ ವೈರಲ್!
ಚಿತ್ರದಲ್ಲಿ ಸುಧಾಕರ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ʻಉಳಿದವರು ಕಂಡಂತೆʼ, ʻಕಿರಿಕ್ ಪಾರ್ಟಿʼ ಮತ್ತು ʻಅವನೇ ಶ್ರೀಮನ್ನಾರಾಯಣನಂತಹʼ ಕೆಲವು ಬ್ಲಾಕ್‌ಬಸ್ಟರ್ ಚಲನಚಿತ್ರಗಳಲ್ಲಿ ಪ್ರಮೋದ್ ಭಾಗವಾಗಿದ್ದಾರೆ. ಕಾಂತಾರ ಚಿತ್ರದಲ್ಲಿನ ಪಾತ್ರಕ್ಕಾಗಿ ಅವರು 60 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ವರ್ಷದ ಮತ್ತೊಂದು ಭರ್ಜರಿ ಹಿಟ್ ಸಿನಿಮಾ ಕೆಜಿಎಫ್-2 ನಲ್ಲಿಯೂ ಕಾಣಿಸಿಕೊಂಡಿರುವ ಅಚ್ಯುತ್ ಕುಮಾರ್, ಕಾಂತಾರ ಚಿತ್ರದಲ್ಲಿ ರಾಜನ ವಂಶಸ್ಥರಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಪಾತ್ರಕ್ಕಾಗಿ 40 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ನಟಿ ಸಪ್ತಮಿ ಗೌಡ ಅವರು ಅರಣ್ಯ ಸಿಬ್ಬಂದಿ ಪಾತ್ರದಲ್ಲಿ ಮಿಂಚಿದ್ದರು. ಅವರು 1 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಕಾಂತಾರ ಸಕ್ಸೆಸ್ ಆದ ಬಳಿಕ ಕಾಂತಾರ ಪಾರ್ಟ್-2ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ರಿಷಬ್ ಮತ್ತು ತಂಡ. ಈಗಾಗಲೇ ಪಂಜುರ್ಲಿ ಬಳಿ ಅನುಮತಿ ಕೂಡ ಕೇಳಿರುವ ರಿಷಬ್ ಶೆಟ್ಟಿ ಮುಂದಿನ ವರ್ಷದಿಂದ ಪಾರ್ಟ್-2 ಪ್ರಾರಂಭಿಸುವ ಸಾಧ್ಯತೆ ಇದೆ.
ಇದನ್ನೂ ಓದಿ | Actor Rishab Shetty | ಕುಟುಂಬ ಸಮೇತ ಕಟೀಲು ದುರ್ಗಾ ಪರಮೇಶ್ವರಿ ದರ್ಶನ ಮಾಡಿದ ರಿಷಬ್ ಶೆಟ್ಟಿ