ಬೆಂಗಳೂರು: ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಕಾಂತಾರ ಸಿನಿಮಾ ವಿಶ್ವಾದ್ಯಂತ 400 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಮಾಡಿದೆ. ಇದರ ಬೆನ್ನಲ್ಲೇ ಜಿನೀವಾದಲ್ಲಿ ಕಾಂತಾರದ ವಿಶೇಷ ಪ್ರದರ್ಶನವೂ ಆಗಿದೆ. ಇದೀಗ ಈ ಚಿತ್ರಕ್ಕೆ ಬೇರೆ ಬೇರೆ ದೇಶಗಳ ಪ್ರೇಕ್ಷಕರಿಂದ ಬೇಡಿಕೆ ಬಂದಿದೆ. ಹಾಗಾಗಿ ಇಟಾಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಗಳಿಗೆ ಡಬ್ ಮಾಡಿ ತೆರೆಕಾಣಿಸಲು ಸಿದ್ಧತೆ ನಡೆದಿದೆ ಎಂದು ‘ಹೊಂಬಾಳೆ ಫಿಲ್ಮ್ಸ್’ (Hombale Films) ಹಂಚಿಕೊಂಡಿದೆ. ರಿಲೀಸ್ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಟ್ವೀಟ್‌ನಲ್ಲಿ ಹಂಚಿಕೊಂಡಿದೆ.
ಮಾರ್ಚ್ 16ರಂದು ಜಿನೀವಾದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) ಅಧಿವೇಶನದಲ್ಲಿ ಕನ್ನಡದಲ್ಲಿಯೇ ಮಾತನಾಡಿದ್ದಾರೆ ರಿಷಬ್. ಪರಿಸರ ಸಂರಕ್ಷಣೆಗಾಗಿ ಕಳೆದ ಒಂದು ದಶಕಕ್ಕಿಂತ ಹೆಚ್ಚು ಅವಧಿಯಿಂದ ತಳಮಟ್ಟದಿಂದ ಕಾರ್ಯನಿರ್ವಹಿಸುತ್ತಿರುವ ಭಾರತದ ಏಕೋಪಾಸ್ ಪ್ರತಿನಿಧಿಯಾಗಿ ರಿಷಬ್ ಮಾತನಾಡಿದ್ದಾರೆ. ಹೀಗೆ ಸದಾ ಒಂದಲ್ಲ ಒಂದು ಸಿಹಿ ಸುದ್ದಿಯನ್ನು ನೀಡುತ್ತ ಬಂದಿರುವ ರಿಷಬ್ ಮತ್ತೆ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಟ್ವೀಟ್‌ನಲ್ಲಿ ʻʻಅಂತಾರಾಷ್ಟ್ರೀಯ ಪ್ರೇಕ್ಷಕರಿಂದ ಭಾರೀ ಬೇಡಿಕೆಗೆ ಧನ್ಯವಾದಗಳು. ನಾವು ಕಾಂತಾರ ಚಲನಚಿತ್ರವನ್ನು ಇಟಾಲಿಯನ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಎಡಿಟ್ ಮಾಡುತ್ತಿದ್ದೇವೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆʼʼ.ಎಂದು ಇಟಾಲಿಯನ್ ಭಾಷೆಯಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Rishab Shetty: ಕಾಂತಾರ ಚಿತ್ರದ ಬಳಿಕ ಬೊಮ್ಮಾಯಿಗೆ ರಿಷಬ್ ಶೆಟ್ಟಿ ಮನವಿ ಸಲ್ಲಿಸಿದ್ದೇನು?
ಹೊಂಬಾಳೆ ಫಿಲ್ಮ್ಸ್ ಟ್ವೀಟ್
ಪ್ರಿಕ್ವೆಲ್ ಆಗಿ ಬರಲಿದೆ ಕಾಂತಾರ 2
ಕಾಂತಾರ-1 ಸಿಕ್ವೆಲ್ ಆಗಿದ್ದರೆ, ಕಾಂತಾರ-2 ಪ್ರಿಕ್ವೆಲ್ (Prequel film) ಆಗಿ ಮೂಡಿಬರಲಿದೆ. ಕಾಂತಾರ-2 ಸಿನಿಮಾ ಕಾಂತಾರಕ್ಕಿಂತ ಮೊದಲಿನ ಕತೆಯಾಗಿದ್ದು, ಇದು ಗ್ರಾಮಸ್ಥರು, ದೇವತೆ ಮತ್ತು ತೊಂದರೆಗೊಳಗಾದ ರಾಜನ ನಡುವಿನ ಸಂಬಂಧವನ್ನು ಅನ್ವೇಷಿಸುತ್ತದೆ. ರಾಜನು ಗ್ರಾಮಸ್ಥರನ್ನು ಮತ್ತು ತನ್ನ ಸುತ್ತಲಿನ ಭೂಮಿಯನ್ನು ರಕ್ಷಿಸಲು ದೇವತೆಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾನೆ. ʻಮನುಷ್ಯ ಮತ್ತು ಪ್ರಕೃತಿಯ ಕದನʼ ಚಿತ್ರದ ತಿರುಳು ಇದಾಗಿದೆ. ಕಾಂತಾರ-2, 2024ರಲ್ಲಿ ಥಿಯೇಟರ್‌ಗೆ ಬರಲಿದೆ ಎಂದು ರಿಷಬ್ ಖಚಿತಪಡಿಸಿದ್ದಾರೆ.