Site icon Vistara News

Kantara Movie | ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಬರಲಿದೆ ಕಾಂತಾರ ಭಾಗ-2, ರಿಷಬ್‌ ಶೆಟ್ರಿಗೆ ಸಿಕ್ಕಿತು ದೈವದ ಅನುಮತಿ

Kantara Movie

ಬೆಂಗಳೂರು: ರಿಷಬ್‌ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸಿನಿಮಾ (Kantara Movie) ವಿಶ್ವಾದ್ಯಂತ ಭರ್ಜರಿ ಹಿಟ್‌ ಆಗಿದೆ. ಇದರ ಬೆನ್ನಲ್ಲೇ ಕಾಂತಾರ-2 ಸಿನಿಮಾ ಯಾವಾಗ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಇತ್ತು. ಇದೀಗ ರಿಷಬ್‌ ಶೆಟ್ಟಿ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅದೇನೆಂದರೆ ಬರಲಿದೆ, ಕಾಂತಾರ-೨!

ಹೌದು, ಕನ್ನಡ ನೆಲದ ಸಂಸ್ಕೃತಿ, ದೈವಾರಾಧನೆ ಕಲೆಯನ್ನು ಜಾಗತಿಕ ಮಟ್ಟದಲ್ಲಿ ವಿಜೃಂಭಿಸಿದ ಕಾಂತಾರ ಸಿನಿಮಾದ ಸೀಕ್ವೆಲ್‌ ಬರಲಿದೆ. ನಿರ್ದೇಶಕ ಕಂ ನಾಯಕ ರಿಷಬ್‌ ಶೆಟ್ಟಿ ಅವರು ಪಂಜುರ್ಲಿ ದೈವದ ಕೋಲವೊಂದರಲ್ಲಿ ಭಾಗವಹಿಸಿದ್ದು, ಈ ವೇಳೆ ಸಿನಿಮಾದ ಎರಡನೇ ಭಾಗ ಮಾಡುವ ಬಗ್ಗೆ ದೈವದ ಮುಂದೆ ಪ್ರಶ್ನೆಯನ್ನು ಇಟ್ಟಿದ್ದರು. ಈ ವೇಳೆ ದೈವ ಕಾಂತಾರ-೨ ಸಿನಿಮಾ ಮಾಡಲು ಅನುಮತಿ ಕೊಟ್ಟಿದೆ ಎಂದು ರಿಷಭ್‌ ಶೆಟ್ಟಿ ತಿಳಿಸಿದ್ದಾರೆ.

ಮಂಗಳೂರು ನಗರ ಹೊರವಲಯದ ಬಂದಲೆಯ ಮನೆಯಲ್ಲಿ ನಡೆದ ಪಂಜುರ್ಲಿ ಕೋಲದಲ್ಲಿ ಕಾಂತಾರ ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರ್, ನಾಯಕಿ ಗೌತಮಿ ಗೌಡ ಸೇರಿದಂತೆ ಬಹುತೇಕ ಸದಸ್ಯರು ಹಾಜರಿದ್ದರು. ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ನೇತೃತ್ವದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ಕಾಂತರ 2 ಸಿನಿಮಾ ಮಾಡುವ ಕುರಿತು ರಿಷಬ್ ಒಪ್ಪಿಗೆ ಕೇಳಿದ್ದರು. 

ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾ ಟೀಕಿಸಿದ ʻತುಂಬಾಡ್‌ʼ ಸಹ ನಿರ್ಮಾಪಕ ಹೇಳಿದ್ದೇನು?

ಮಧ್ಯರಾತ್ರಿ ನಡೆದ ದೈವದ ಜತೆಗಿನ ಮಾತುಕತೆಯಲ್ಲಿ ದೈವ ಹಲವು ಸೂಚನೆಗಳ ಜತೆ ಸಿನಿಮಾ ಮಾಡಲು ಅನುಮತಿ ನೀಡಿದೆ . ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿದೆ. ಪಾರ್ಟ್ 2ನಲ್ಲಿ ಈ ಹಿಂದಿನ ಕಲಾವಿದರೇ ಮುಂದುವರಿಯಲಿದ್ದಾರಾ ಎಂಬುದು ಚಿತ್ರತಂಡ ಇನ್ನಷ್ಟೇ ಹೇಳಬೇಕಿದೆ.

ಕಾಂತಾರ ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಕರ್ನಾಟಕ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಸದ್ದು ಮಾಡಿದೆ. ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಅಭಿಮಾನಿಗಳು ಮಾತ್ರವಲ್ಲದೇ ಸಿನಿಮಾ ಗಣ್ಯರು ಸಿನಿಮಾವನ್ನು ನೋಡಿ ಹಾಡಿಹೊಗಳಿದ್ದರು. 

ಇದನ್ನೂ ಓದಿ | Kantara movie | ವಿಶ್ವಾದ್ಯಂತ ಕಾಂತಾರ ಸಿನಿಮಾ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಹೀಗಿದೆ

Exit mobile version