ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ ಚಿತ್ರದ (Kantara Movie) ʻವರಾಹಂ ರೂಪಂʼ ಹಾಡಿನ ಕೇಸಿನಲ್ಲಿ ಮೊದಲ ಯಶಸ್ಸು ಕಂಡಿದೆ. ತೈಕುಡಂ ಬ್ರಿಡ್ಜ್ ಮ್ಯೂಸಿಕ್ ತಂಡದ ಅರ್ಜಿಯನ್ನು ಕೇರಳದ ಕೋಳಿಕ್ಕೋಡ್ (ಕಲ್ಲಿಕೋಟೆ) ನ್ಯಾಯಾಲಯವು ತಿರಸ್ಕರಿಸಿದೆ. ಈ ಹಿಂದಿನಂತೆಯೇ ಕಾಂತಾರ ಸಿನಿಮಾದಲ್ಲಿ ʻವರಾಹಂ ರೂಪಂʼ ಹಾಡನ್ನು ಬಳಕೆ ಮಾಡಬಹುದು ಎಂದು ಅನುಮತಿ ನೀಡಿದೆ. ಆದರೆ, ಮತ್ತೆ ಹಾಡನ್ನು ಹಾಕುವುದಕ್ಕೆ ಬೇರೊಂದು ತಾಂತ್ರಿಕ ತೊಡಗಿದೆ.
ವರಾಹ ರೂಪಂನ ಮಲಯಾಳಂ ಮೂಲ ಹಾಡನ್ನು ಕಾಂತಾರ ಚಿತ್ರದಲ್ಲಿ ನಕಲು ಮಾಡಲಾಗಿದೆ ಎಂದು ತೈಕುಡಂ ಬ್ರಿಜ್ ಮ್ಯೂಸಿಕ್ ತಂಡ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿತ್ತು. ಕೋಳಿಕ್ಕೋಡ್ (ಕಲ್ಲಿಕೋಟೆ) ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಹಾಡಿನ ಬಳಕೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿತ್ತು. ಮತ್ತು ಹಾಡನ್ನು ಸಿನಿಮಾದಿಂದ ತೆಗೆಯುವಂತೆ ಸೂಚಿಸಿತ್ತು. ಇತ್ತ ಕೋಳಿಕ್ಕೋಡ್ (ಕಲ್ಲಿಕೋಟೆ) ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಂತೆ ಕಾಂತಾರ ತಂಡ ಹೈಕೋರ್ಟ್ ಮೊರೆ ಹೊಕ್ಕಿತ್ತು. ಹೈಕೋರ್ಟ್ ಕೆಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು.
ಈ ನಡುವೆ ಕೋಳಿಕ್ಕೋಡ್ (ಕಲ್ಲಿಕೋಟೆ) ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಈ ವೇಳೆ ಕಾಂತಾರ ತಂಡಕ್ಕೆ ಗೆಲುವಾಗಿದೆ ಎಂದು ತಿಳಿದುಬಂದಿದೆ.
ಗೆದ್ದ ವಾದ ಯಾವುದು?
ತೈಕುಡಂ ಬ್ರಿಜ್ ಮ್ಯೂಸಿಕ್ ತಂಡ, ʻವರಾಹ ರೂಪಂʼ ಹಾಡು ನಕಲು ಎಂದು ಆಪಾದಿಸಿತ್ತು. ಆದರೆ, ಇದು ಹೇಗೆ ನಕಲು ಅಲ್ಲ ಎಂದು ಕಾಂತಾರ ತಂಡದ ವಕೀಲರು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಹಾಡನ್ನು ಮರಳಿ ಹಾಕಬಹುದು ಎಂದು ಅಭಿಪ್ರಾಯಪಟ್ಟಿದೆ.
ʻʻಹಾಡಿನಲ್ಲಿ ಮೂಲ ಹಾಡಿನ ಲಿರಿಕ್ಸ್ ಬಳಸಿಲ್ಲ. ಸಂಗೀತದಲ್ಲಿ ಪರಿಕರಗಳನ್ನು ಬದಲಾಯಿಸಿದ್ದೇವೆ. ಮೂಲ ಹಾಡಿನಲ್ಲಿ ಬೇರೆಯೇ ಪರಿಕರಗಳು ಇವೆ. ಅನಂತರ ಶಾಸ್ತ್ರೀಯ ರಾಗಗಳನ್ನು ಯಾರು ಬೇಕಾದರೂ ಬಳಸಿಕೊಳ್ಳಬಹುದುʼʼ ಎಂದು ಕಾಂತಾರ ತಂಡ ವಾದಿಸಿದೆ. ಈ ಮೂರು ಅಂಶಗಳ ಆಧಾರದಲ್ಲಿ ಕೇರಳದ ಕೋಳಿಕ್ಕೋಡ್ (ಕಲ್ಲಿಕೋಟೆ) ಜಿಲ್ಲಾ ನ್ಯಾಯಾಲಯವು ಈ ಹಾಡನ್ನು ಸಿನಿಮಾದಲ್ಲಿ ಬಳಸಿಕೊಳ್ಳಬಹುದು ಎಂದು ತೀರ್ಪು ಕೊಟ್ಟಿದೆ.
ಆದರೆ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದ್ದು, ಕಾಂತಾರ ತಂಡ ತಕ್ಷಣ ಈ ಹಾಡನ್ನು ಸಿನಿಮಾದಲ್ಲಿ ಬಳಸುವಂತಿಲ್ಲವಾಗಿದೆ. ಪಾಲಕ್ಕಾಡ್ ನ್ಯಾಯಾಲಯದಲ್ಲಿ ವಿಚಾರಣೆ ಆದ ಬಳಿಕ ತೀರ್ಪು ಬಂದ ಮೇಲೆಯೇ ಹಾಡನ್ನು ಬಳಸಿಕೊಳ್ಳಬೇಕಾಗಿದೆ.
ಇದನ್ನೂ ಓದಿ | Kantara Movie | ಕಾಂತಾರ ತುಳು ಟ್ರೈಲರ್ ಔಟ್: ಕಾಂತಾರ-2ಗೆ ಸಿದ್ಧತೆ ಮಾಡಿಕೊಳ್ತಿದ್ದಾರಾ ರಿಷಬ್ ಶೆಟ್ಟಿ?
ಹಿಂದೆ ಏನೇನಾಗಿತ್ತು?
ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯ ಮತ್ತು ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯವು ಕಾಂತಾರ ಸಿನಿಮಾದ ‘ವರಾಹ ರೂಪಂ’ ಹಾಡಿನ ಬಳಕೆಯನ್ನು ಮಾಡದಂತೆ ಮಧ್ಯಂತರ ತಡೆಯಾಜ್ಞೆ ಆದೇಶ ಈ ಹಿಂದೆ ನೀಡಿತ್ತು. ಇದರ ವಿರುದ್ಧ ಹೊಂಬಾಳೆ ಫಿಲ್ಮ್ಸ್ ಸಲ್ಲಿಸಿದ ಅರ್ಜಿಯನ್ನು ಕೇರಳ ಹೈಕೋರ್ಟ್ ನವೆಂಬರ್ 23ರಂದು ಬುಧವಾರ ವಜಾಗೊಳಿಸಿತ್ತು. ಪರ್ಯಾಯ ಕಾನೂನು ಪರಿಹಾರ ಪಡೆಯುವುದಕ್ಕೆ ಅರ್ಜಿದಾರರು ಸ್ವತಂತ್ರರು ಎಂದು ನ್ಯಾಯಪೀಠ ಇದೇ ವೇಳೆ ಹೇಳಿತ್ತು. ಅಧೀನ ನ್ಯಾಯಾಲಯಗಳು ನೀಡಿದ ಮಧ್ಯಂತರ ಆದೇಶದಲ್ಲಿ ಆ ನ್ಯಾಯಾಲಯದ ಮೇಲ್ವಿಚಾರಣಾ ಅಧಿಕಾರ ವ್ಯಾಪ್ತಿಯಲ್ಲಿ ನಾವು ಮಧ್ಯಸ್ಥಿಕೆ ವಹಿಸಬಾರದು. ಒಂದು ವೇಳೆ ಆದೇಶ ನೀಡಿದರೆ ಮೂಲ ನ್ಯಾಯವ್ಯಾಪ್ತಿಯ ನ್ಯಾಯಾಲಯಗಳು ಮತ್ತು ಮೇಲ್ಮನವಿ ನ್ಯಾಯಾಲಯಗಳು ನಿಷ್ಕ್ರಿಯವಾಗುತ್ತವೆ ಎಂದು ಅರ್ಜಿಯನ್ನು ವಜಾಗೊಳಿಸಿತ್ತು.
ತಡೆಯಾಜ್ಞೆಯ ಆದೇಶದಂತೆ ಹೊಂಬಾಳೆ ಫಿಲ್ಮ್ಸ್ ಮುಂದಿನ ಆದೇಶದವರೆಗೆ ʻವರಾಹ ರೂಪಂʼ ಗೀತೆಯೊಂದಿಗೆ ಕಾಂತಾರ ಚಿತ್ರದ ಪ್ರದರ್ಶನ, ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ, ಸ್ಟ್ರೀಮಿಂಗ್ ಮಾಡದಂತೆ ನಿರ್ಬಂಧ ವಿಧಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೊಂಬಾಳೆ ಫಿಲ್ಮ್ಸ್ ಹೈಕೋರ್ಟ್ ಮೊರೆ ಹೋಗಿತ್ತು.
ಇದನ್ನೂ ಓದಿ | Kantara Movie | ಕಾಂತಾರ ಸಕ್ಸೆಸ್ ಸಂಭ್ರಮದಲ್ಲಿ ಮಾಲಿವುಡ್ ನಟ ಫಹಾದ್ ಫಾಸಿಲ್
ಏನಿತ್ತು ಕೋರ್ಟ್ ಆದೇಶ?
ಈ ಹಿಂದೆ ವರಾಹ ರೂಪಂ ಹಾಡಿನ ಪ್ರಸಾರಕ್ಕೆ ಕೇರಳದ ಕಲ್ಲಿಕೋಟೆಯ ಸೆಷನ್ಸ್ ಕೋರ್ಟ್ ತಡೆ ನೀಡಿತ್ತು. ಕಾಂತಾರದ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕ ಹಾಡು ಪ್ರಸಾರ ಮಾಡುತ್ತಿರುವ ಅಮೆಜಾನ್, ಯುಟ್ಯೂಬ್, ಸ್ಪೋಟಿಫೈ, ವಿಂಕ್, ಜಿಯೋ ಸಾವನ್ ಸೇರಿದಂತೆ ಇನ್ನಿತರ ಆನ್‌ಲೈನ್ ವೇದಿಕೆಗಳಿಗೆ ಆದೇಶ ಹೊರಡಿಸಿತ್ತು.
ಬ್ಲಾಕ್‌ಬಸ್ಟರ್ ಸಿನಿಮಾ ಕಾಂತಾರದ ವರಾಹ ರೂಪಂ ಹಾಡು ನಾವು ಐದು ವರ್ಷದ ಹಿಂದೆ ರಚಿಸಿ ಬಿಡುಗಡೆ ಮಾಡಿದ್ದ ನವರಸಂ ಹಾಡಿನ ಕಾಪಿ ಎಂಬುದಾಗಿ ತೈಕುಡಂ ಬ್ರಿಡ್ಜ್ ಎಂಬ ಸಂಸ್ಥೆ ಕೋರ್ಟ್ ಮೊರೆ ಹೋಗಿತ್ತು. ಅಂತೆಯೇ ವಿಚಾರಣೆ ನಡೆಸಿದ ಕೋರ್ಟ್ ಹಾಡಿನ ಪ್ರಸರಣವನ್ನು ನಿಲ್ಲಿಸುವಂತೆ ಆದೇಶ ಹೊರಡಿಸಿತ್ತು. ತಡೆಯಾಜ್ಞೆ ತಂದಿರುವ ವಿಚಾರವನ್ನು ತೈಕುಡಂ ಬ್ರಿಜ್ ಮ್ಯೂಸಿಕ್ ಸಂಸ್ಥೆ, ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿತ್ತು. ಇದರ ಬೆನ್ನಲ್ಲೇ ಮತ್ತೊಂದು ಕೇಸ್ ದಾಖಲಾಗಿದ್ದು, ಮಾತೃಭೂಮಿ ಮ್ಯೂಸಿಕ್ ಸಂಸ್ಥೆಯು ಕೋರ್ಟ್ ಮೊರೆ ಹೋಗಿತ್ತು. ಹಾಗಾಗಿ ಅರ್ಜಿಯ ವಿಚಾರಣೆ ನಡೆಸಿರುವ ಪಾಲಕ್ಕಾಡ್ ಕೋರ್ಟ್ ಮುಂದಿನ ಆದೇಶ ಬರುವವರೆಗೂ ಈ ಹಾಡನ್ನು ಎಲ್ಲಿಯೂ ಹಂಚಿಕೆ ಮಾಡುವಂತಿಲ್ಲ ಎಂದು ತಡೆಯಾಜ್ಞೆ ನೀಡಿತ್ತು.
ಇದನ್ನೂ ಓದಿ | Kantara Movie | ಕಾಂತಾರ ತುಳು ಟ್ರೈಲರ್ ಔಟ್: ಕಾಂತಾರ-2ಗೆ ಸಿದ್ಧತೆ ಮಾಡಿಕೊಳ್ತಿದ್ದಾರಾ ರಿಷಬ್ ಶೆಟ್ಟಿ?