Site icon Vistara News

Kantara Movie: ʼಕಾಂತಾರ ಚಾಪ್ಟರ್‌ 1ʼ ಶೂಟಿಂಗ್‌ ಆರಂಭಕ್ಕೂ ಮುನ್ನ ಒಟಿಟಿ ಹಕ್ಕು ಭಾರೀ ಮೊತ್ತಕ್ಕೆ ಸೇಲ್‌; ಖರೀದಿಸಿದ್ದು ಯಾರು?

kantara 1

kantara 1

ಬೆಂಗಳೂರು: 2022ರಲ್ಲಿ ತೆರೆಕಂಡು ದೇಶಾದ್ಯಂತ ಸಂಚಲನ ಮೂಡಿಸಿದ್ದ ʼಕಾಂತಾರʼ ಚಿತ್ರದ ಪ್ರೀಕ್ವೆಲ್‌ (Kantara Movie)ಗೆ ಮುಹೂರ್ತ ನೆರವೇರಿದೆ. ರಿಷಬ್‌ ಶೆಟ್ಟಿ (Rishab Shetty) ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದ್ದು, ಫಸ್ಟ್‌ ಲುಕ್‌ ಪೋಸ್ಟರ್‌ ಈಗಾಗಲೇ ದಾಖಲೆಯ ವೀಕ್ಷಣೆ ಕಂಡಿದೆ. ಇದೀಗ ಚಿತ್ರದ ಬಗ್ಗೆ ಇನ್ನೊಂದು ಮಹತ್ವದ ವಿಚಾರ ಹೊರ ಬಿದ್ದಿದೆ. ಇನ್ನೂ ಶೂಟಿಂಗ್‌ ಆರಂಭಿಸದ ʼಕಾಂತಾರ ಚಾಪ್ಟರ್‌ 1ʼನ ಹಕ್ಕು ಪ್ರಮುಖ ಒಟಿಟಿ ಫ್ಲಾಟ್‌ಫಾರ್ಮ್‌ಗೆ ಕೋಟ್ಯಂತರ ರೂ.ಗೆ ಮಾರಾಟವಾಗಿದೆ ಎನ್ನಲಾಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಸಖತ್‌ ಥ್ರಿಲ್‌ ಆಗಿದ್ದಾರೆ.

ಯಾವ ಒಟಿಟಿ ಫ್ಲಾಟ್‌ಫಾರ್ಮ್‌?

‘ಕಾಂತಾರ ಒಂದು ದಂತಕಥೆʼ ಎಂದರೆ ಮೊದಲ ಭಾಗ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಇದೀಗ ಪ್ರೀಕ್ವೆಲ್ ರೈಟ್ಸ್ ಕೂಡ ಅಮೇಜಾನ್ ಪ್ರೈಂ ವಿಡಿಯೋ ಪಾಲಾಗಿದೆ. ಮಂಗಳವಾರ (ಮಾರ್ಚ್‌ 19) ಮುಂಬೈಯಲ್ಲಿ ನಡೆದ ಅಮೇಜಾನ್‌ ಪ್ರೈಂನ ಕಾರ್ಯಕ್ರಮವೊಂದರಲ್ಲಿ ಈ ವಿಚಾರವನ್ನು ಬಹಿರಂಗಪಡಿಸಲಾಗಿದೆ. ʼʼಐಷಾರಾಮಿ ಆಸೆಗಳಿಗಿಂತ ದೊಡ್ಡ ವಿಪತ್ತು ಇನ್ನೊಂದಿಲ್ಲ. ಒಬ್ಬ ಕ್ಷುಲ್ಲಕ ರಾಜನಿಂದ ಉಂಟಾಗುವ ಇಂತಹ ವಿಪತ್ತು, ದೇವರು ಆಯ್ಕೆ ಮಾಡಿದ ಬುಡಕಟ್ಟು ನಾಯಕನ ಹೃದಯದಲ್ಲಿ ಕ್ರೋಧವನ್ನು ಪ್ರಚೋದಿಸುತ್ತದೆ. ʼಕಾಂತಾರʼ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ ಇಲ್ಲಿ ಪ್ರಸಾರವಾಗಲಿದೆʼʼ ಎಂದು ಪ್ರೈಂ ತನ್ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದೆ. ಈ ಮೂಲಕ ಕುತೂಹಲ, ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

‘ಕಾಂತಾರ’ ಪ್ರೀಕ್ವೆಲ್ ಸಿನಿಮಾ ತೆರೆಕಂಡು ಒಂದೂವರೆ ತಿಂಗಳ ಬಳಿಕ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ʼಕಾಂತಾರʼ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಹೀಗಾಗಿ ಪ್ರೀಕ್ವೆಲ್ ಕೂಡ ಕನ್ನಡದ ಜತೆಗೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. ಕೆಲವು ದಿನಗಳ ಹಿಂದೆ ಹೊರ ಬಿದ್ದ ಫಸ್ಟ್‌ ಲುಕ್‌ ಪೋಸ್ಟರ್‌ ದೇಶದ ಗಮನ ಸೆಳೆದಿತ್ತು. ಇದನ್ನೂ ಹೊಂಬಾಳೆ ಫಿಲ್ಮ್ಸ್‌  ನಿರ್ಮಿಸಲಿದ್ದು, ಅಂದಾಜು 125 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗುತ್ತಿದೆ ಎನ್ನಲಾಗಿದೆ.

ʼಕಾಂತಾರʼ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್‌ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಕ್ರಿ.ಶ. 301-400ರ ಕಾಲಘಟ್ಟದ ಕಥೆ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಿನಿಮಾ ಪಂಜುರ್ಲಿ ದೈವ ಮತ್ತು ಗುಳಿಗ ದೈವಗಳ ಮೂಲದ ಕಥೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ.

ರಿಷಬ್ ಶೆಟ್ಟಿ ಹೇಳಿದ್ದೇನು?

ಮುಂಬೈಯಲ್ಲಿ ನಡೆದ ಅಮೇಜಾನ್‌ ಪ್ರೈಂನ ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕ, ನಿರ್ದೇಶಕ ರಿಷಬ್‌ ಶೆಟ್ಟಿ, ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ʼʼನಮ್ಮ ಹಳ್ಳಿಯ ಕಥೆ ಮತ್ತು ಜಾನಪದವನ್ನು ದೊಡ್ಡ ಪರದೆಗೆ ತರಬೇಕು ಎನ್ನುವುದು ನನ್ನ ಕನಸಾಗಿತ್ತು. ನಾನು ಕಾಲೇಜಿನದ್ದಾಗ ಈ ಕಥೆ ನನ್ನ ಮನಸ್ಸಿನಲ್ಲಿ ಮೂಡಿತ್ತು. ʼಕಾಂತಾರʼ ಚಿತ್ರೀಕರಣದ ಮೊದಲೇ ಪ್ರಿಕ್ವೆಲ್ ಬಗ್ಗೆ ಯೋಚಿಸಿದ್ದೆವು. ಅದಕ್ಕೆ ತಕ್ಕಂತೆ ಪ್ರೇಕ್ಷಕರಿಂದ ನಮಗೆ ಭಾರಿ ಬೆಂಬಲವೂ ಸಿಕ್ಕಿತು. ನಾವು ಈಗ ನಮ್ಮ ಹಳ್ಳಿಯಲ್ಲಿ (ಕುಂದಾಪುರ) ದೊಡ್ಡ ಸೆಟ್ ಹಾಕಿದ್ದೇವೆ. ಶೀಘ್ರದಲ್ಲಿಯೇ ಅಲ್ಲಿ ಚಿತ್ರೀಕರಣ ಆರಂಭಿಸಲಿದ್ದೇವೆʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Kantara Movie: ಯೂಟ್ಯೂಬ್​ನಲ್ಲಿ ದಾಖಲೆ ಬರೆದ ‘ಕಾಂತಾರ ಚಾಪ್ಟರ್ 1’ ಫಸ್ಟ್ ಲುಕ್ ಟೀಸರ್; ವೀವ್ಸ್ ಎಷ್ಟು?

ನಾಯಕಿ ಯಾರು?

ಇನ್ನು ಚಿತ್ರದಲ್ಲಿ ಯಾರೆಲ್ಲ ಅಭಿನಯಿಸಲಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿಲ್ಲ. ಅದರಲ್ಲೂ ನಾಯಕಿ ಪಾತ್ರದ ಬಗ್ಗೆ ಕುತೂಹಲ ಮೂಡಿದೆ. ಮೊದಲ ಭಾಗದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಮಿಂಚಿದ್ದರು. ರಿಷಬ್‌ ಜತೆಗೆ ಅವರ ಪಾತ್ರಕ್ಕೂ ಮೆಚ್ಚುಗೆ ಲಭ್ಯವಾಗಿತ್ತು. ಇದೀಗ ಚಾಪ್ಟರ್‌ 1ರಲ್ಲಿ ಅವರು ಅಭಿನಯಿಸಲಿದ್ದಾರಾ ಎನ್ನುವುದು ಗೊತ್ತಾಗಿಲ್ಲ. ಕೆಲವು ಮೂಲಗಳ ಪ್ರಕಾರ ಚಿತ್ರದಲ್ಲಿ ಒಂದಕ್ಕಿಂತ ಹೆಚ್ಚು ನಾಯಕಿಯ ಪಾತ್ರ ಇರಲಿದೆ ಎನ್ನಲಾಗಿದೆ. ಇನ್ನು ಕೆಲವು ವರದಿಗಳು ನಾಯಕಿಯಾಗಿ ರುಕ್ಮಿಣಿ ವಸಂತ್‌ ಆಯ್ಕೆಯಾಗಿದ್ದಾರೆ ಎಂದಿವೆ. ಚಿತ್ರತಂಡ ಇನ್ನೂ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿಲ್ಲ.

Exit mobile version