Site icon Vistara News

Kantara Movie | ಆಸ್ಕರ್‌ ಕಣದತ್ತ ಕಾಂತಾರ : ಕಾಂತಾರ-2 ಬಗ್ಗೆ ವಿಜಯ್ ಕಿರಗಂದೂರು ಹೇಳಿದ್ದೇನು?

Kantara Movie (oscar)

ಬೆಂಗಳೂರು : ನಟ ರಿಷಬ್‌ ಶೆಟ್ಟಿ ಅವರ ಬ್ಲಾಕ್‌ ಬಸ್ಟರ್‌ ಕಾಂತಾರ ಚಿತ್ರವನ್ನು (Kantara Movie) 2023ನೇ ಆಸ್ಕರ್‌ಗೆ ನಾಮನಿರ್ದೇಶನ ಮಾಡುವಂತೆ ಅರ್ಜಿ ಸಲ್ಲಿಸಿರುವುದಾಗಿ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ತಿಳಿಸಿದೆ. ಚಿತ್ರದ ನಿರ್ಮಾಪಕರಾದ ಹೊಂಬಾಳೆ ಪ್ರೊಡಕ್ಷನ್ಸ್‌ ಇದನ್ನು ಖಾತ್ರಿ ಪಡಿಸಿದ್ದು, ಕಾಂತಾರ- ೨ ನಿರ್ಮಿಸುವ ಸುಳಿವನ್ನೂ ನೀಡಿದೆ. ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥಾಪಕ ವಿಜಯ್ ಕಿರಗಂದೂರ್ ಈ ಬಗ್ಗೆ ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ್ದು, ಕೊನೆಯ ಕ್ಷಣದಲ್ಲಿ ಅರ್ಜಿ ಕಳುಹಿಸಿದ್ದು, ನಾಮನಿರ್ದೇಶನಕ್ಕೆ ಪರಿಗಣಿಸುವ ಬಗ್ಗೆ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥಾಪಕ ವಿಜಯ್ ಕಿರಗಂದೂರ್ ಮಾತನಾಡಿ ʻʻಭಾರತೀಯ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಪ್ರದರ್ಶಿಸುವುದಕ್ಕಾಗಿ, ಕಾಂತಾರ ಚಿತ್ರವನ್ನು ಆಸ್ಕರ್​ ರೇಸ್​​ನಲ್ಲಿ ಸ್ಪರ್ಧೆ ಮಾಡಲು ನಾವು ಅರ್ಜಿ ಸಲ್ಲಿಕೆ ಮಾಡಿದ್ದೇವೆ. ಅಂತಿಮ ಪಟ್ಟಿ ಇನ್ನೂ ಪ್ರಕಟವಾಗಿಲ್ಲ, ಅದನ್ನೇ ನಿರೀಕ್ಷಿಸುತ್ತಿದ್ದೇವೆ. ಸಂಸ್ಕೃತಿಯಲ್ಲಿ ಆಳವಾಗಿ ಬೇರು ಬಿಟ್ಟಿರುವ ಈ ಚಿತ್ರ ವಿಶ್ವ ಮಟ್ಟದಲ್ಲಿ ಗಮನ ಸೆಳೆಯಲಿದೆ ಎಂಬ ಭರವಸೆ ಹೊಂದಿದ್ದೇವೆ” ತಿಳಿಸಿದ್ದಾರೆ.

ಇದನ್ನೂ ಓದಿ | Rishab Shetty | 400 ಕೋಟಿ ರೂ. ಗಳಿಕೆ ಕಂಡ ಕಾಂತಾರ ಸಿನಿಮಾಗೆ ರಿಷಬ್‌ ಪಡೆದುಕೊಂಡ ಸಂಭಾವನೆ ಎಷ್ಟು?

ಕಾಂತಾರ ಚಿತ್ರದ ಎರಡನೇ ಭಾಗವನ್ನು ನಿರ್ಮಿಸುವ ಬಗ್ಗೆ ಮಾತನಾಡಿದ ಅವರು, “ರಿಷಬ್‌ ಅವರು ಇಲ್ಲಿಲ್ಲ. ಅವರು ಮರಳಿ ಬಂದ ಮೇಲೆ ಮುಂದೇನು ಎಂಬುದು ನಿರ್ಧಾರವಾಗುತ್ತದೆ. ಕಾಂತಾರ ಚಿತ್ರದ ಮುಂದಿನ ಭಾಗದ ಚಿತ್ರೀಕರಣದ ಬಗ್ಗೆ ಇನ್ನೂ ನಿರ್ಧರಿಸಬೇಕಿದೆ. ಆದರೆ ಕೆಲವೇ ತಿಂಗಳಲ್ಲಿ ಕಾಂತಾರ-೨ ಕಾರ್ಯರೂಪಕ್ಕೆ ತರುವ ಉದ್ದೇಶವಿದೆ. ಹಾಗಂತ ಇದಕ್ಕೆ ಯಾವುದೇ ಸಮಯ ಮಿತಿಯನ್ನು ನಿಗದಿಪಡಿಸಿಲ್ಲ” ಎಂದು ಹೇಳಿದ್ದಾರೆ.

ಕೆಜಿಎಫ್ 2 ಬಳಿಕ 2022ರಲ್ಲಿ ಹಿಟ್ ಸಿನಿಮಾ ಆಗಿ ಹೊರಹೊಮ್ಮಿದ ಕಾಂತಾರ ವಿಶ್ವದಾದ್ಯಂತ 400 ಕೋಟಿಗಿಂತಲೂ ಅಧಿಕ ಹಣ ಬಾಚಿಕೊಂಡಿದೆ. ಇದೀಗ ಆಸ್ಕರ್‌ನತ್ತ ಮುಖ ಮಾಡಿದೆ. ಈ ನಡುವೆ, ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನೆಮಾ ಆಸ್ಕರ್‌ ಕಣದಲ್ಲಿ ಒಂದು ಹೆಜ್ಜೆ ಮುಂದಿರಿಸಿದೆ. ಇತ್ತೀಚೆಗಷ್ಟೇ ೧೦ ವಿಭಾಗಗಳಲ್ಲಿ ಬಿಡುಗಡೆಯಾದ ಮೊದಲ ಹಂತದ ಪಟ್ಟಿಯಲ್ಲಿ (shortlisted) ʻನಾಟು ನಾಟುʼ ಹಾಡು ಸಹ ಸೇರಿದೆ. ಮಾತ್ರವಲ್ಲ, ಭಾರತದ ಮತ್ತೊಂದು ಎಂಟ್ರಿ, ʻದ ಲಾಸ್ಟ್‌ ಫಿಲ್ಮ್‌ ಶೋʼ ಸಹ ಈ ಪಟ್ಟಿಯಲ್ಲಿ ಸೇರಿದೆ. ಅಂತಿಮ ನಾಮನಿರ್ದೇಶನಗಳ ಪಟ್ಟಿ ಜನವರಿ ೨೪ರಂದು ಬಿಡುಗಡೆಗೊಳ್ಳಲಿದೆ. ಜನವರಿ ೧೨ರಿಂದ ೧೭ರವರೆಗೆ ಈ ಪಟ್ಟಿಯ ಆಯ್ಕೆಗಾಗಿ ಮತದಾನ ಪ್ರಕ್ರಿಯೆ ನಡೆಯಲಿದೆ.

ಇದನ್ನೂ ಓದಿ | IMDb top 10 films | IMDb ಪಟ್ಟಿ ಬಿಡುಗಡೆ : ಕಾಂತಾರ ಸಿನಿಮಾಗೆ ಎಷ್ಟನೇ ಸ್ಥಾನ?

Exit mobile version