Site icon Vistara News

Kantara Movie | ಕರಾವಳಿಯಲ್ಲಿ ಇಂದಿನಿಂದ ತುಳು ಕಾಂತಾರ: ದೈವದ ಕುರಿತು ರಿಷಬ್‌ ಹೇಳಿದ್ದೇನು?

Kantara Movie (tulu movie)

ಬೆಂಗಳೂರು: ʻಕಾಂತಾರʼ ಸಿನಿಮಾ (Kantara Movie) ತುಳುವಿನಲ್ಲಿ ಶುಕ್ರವಾರ ಡಿಸೆಂಬರ್‌ 2ರಂದು ಬಿಡುಗಡೆಯಾಗಿದೆ. ಇಲ್ಲಿಯವರೆಗೂ ತುಳು ಬಿಟ್ಟು ಬೇರೆ ಭಾಷೆಯಲ್ಲಿ ಚಿತ್ರ ರಿಲೀಸ್ ಆಗಿತ್ತು. ಬಹು ಬೇಡಿಕೆ ಮೇರೆಗೆ ತುಳು ಭಾಷೆಯಲ್ಲೂ ಕಾಂತಾರ ಸಿನಿಮಾ ಡಬ್ ಮಾಡಲಾಗಿದೆ. ಈಗಾಗಲೇ ತುಳು ಕಾಂತಾರ ವಿದೇಶಗಳಲ್ಲಿ ಬಿಡುಗಡೆಗೊಂಡು ಸೈ ಎನಿಸಿಕೊಂಡಿದೆ.

ಮಂಗಳೂರಿನ ಪಿವಿಆರ್‌, ಬಿಗ್‌ ಸಿನಿಮಾಸ್‌, ಸಿನಿ ಗ್ಯಾಲಕ್ಸಿ ಸುರತ್ಕಲ್‌, ಭಾರತ್‌ ಸಿನಿಮಾಸ್‌ ಪಡುಬಿದ್ರಿ, ಉಡುಪಿಯ ಮಲ್ಟಿಪ್ಲೆಕ್ಸ್‌ ಮತ್ತು ಸಿಂಗಲ್‌ ಸ್ಕ್ರೀನ್‌ಗಳಲ್ಲಿ ಕಾಂತಾರ ತುಳುವಿನಲ್ಲಿ ಅಬ್ಬರಿಸಲಿದೆ. ಕಳೆದ ಮೂರು ವರ್ಷಗಳಿಂದ ತುಳು ಸಿನಿಮಾ ಪ್ರದರ್ಶನದಿಂದ ದೂರ ಇದ್ದ ಸುಚಿತ್ರಾ, ಪ್ರಭಾತ್‌ ಟಾಕೀಸ್‌ನಲ್ಲೂ ಈ ಬಾರಿ ಕಾಂತಾರ ಪ್ರವೇಶ ಮಾಡುತ್ತಿದೆ. ದುಬೈನಲ್ಲಿ ಈಗಾಗಲೇ ತುಳುವಿನಲ್ಲಿ ತೆರೆ ಕಂಡಿದೆ.

ಇದನ್ನೂ ಓದಿ | Kantara Movie | ತುಳುವಿನಲ್ಲಿ ಬರ್ತಾ ಇದೆ ಕಾಂತಾರ: ರಿಷಬ್‌ ಹೇಳಿದ್ದೇನು?

ಡಬ್ಬಿಂಗ್‌ನಲ್ಲಿ ಸ್ವರ ನೀಡಿದವರಾರು?
ಶಿವನ ಪಾತ್ರ(ರಿಷಬ್‌ ಶೆಟ್ಟಿ)ಕ್ಕೆ ಅರ್ಜುನ್‌ ಕಾಪಿಕಾಡ್‌, ಲೀಲಾ(ಸಪ್ತಮಿ ಗೌಡ) ಪಾತ್ರಕ್ಕೆ ಪ್ರಾರ್ಥನಾ ಸುದರ್ಶನ್‌, ಅರಣ್ಯಾಧಿಕಾರಿ(ಕಿಶೋರ್‌) ಪಾತ್ರಕ್ಕೆ ಶಶಿರಾಜ್‌ ಕಾವೂರು, ಧನಿ(ಅಚ್ಚುತ ಕುಮಾರ್‌) ಪಾತ್ರಕ್ಕೆ ದೇವಿದಾಸ್‌ ಕಾಪಿಕಾಡ್‌ ಡಬ್ಬಿಂಗ್‌ನಲ್ಲಿ ಸ್ವರ ನೀಡಿದ್ದಾರೆ. ಹಾಡುಗಳನ್ನು ಬಹುತೇಕ ಕನ್ನಡದಲ್ಲೇ ಉಳಿಸಿಕೊಳ್ಳಲಾಗಿದೆ. ಕಾಂತಾರದಲ್ಲಿ ಶಿವನ ಸ್ನೇಹಿತ ಬುಲ್ಲಾನ ಪಾತ್ರ ಮಾಡಿದ ಮಂಗಳೂರಿನ ಸನಿಲ್‌ ಗುರು ತುಳು ಅವತರಣಿಕೆಯ ನಿರ್ವಹಣೆ ಮಾಡಿದ್ದಾರೆ.

ರಿಷಬ್‌ ಶೆಟ್ಟಿ ಹೇಳಿದ್ದೇನು?
ʻʻಕಾಂತಾರ ಸಿನಿಮಾ ದೈವದ ಶಕ್ತಿಯಿಂದಲೇ ಇಲ್ಲಿಯವರೆಗೂ ಹೋಗಿದೆ. ದೈವದ ಪ್ರೇರಣೆಯಿಂದಲೇ ಇಷ್ಟೆಲ್ಲ ಸಾಧ್ಯವಾಗಿದೆ. ದೈವವನ್ನು ನಂಬದೇ ಇರುವವರು ಯಾರೂ ಪ್ರಶ್ನೆ ಮಾಡಬೇಡಿ. ಅದು ತಪ್ಪಾಗುತ್ತದೆ. ಈ ಮೊದಲೇ ಹೇಳಿದಂತೆ ನಾನು ಈ ಚಿತ್ರದ ಸಕ್ಸೆಸ್‌ ಅನ್ನು ದೈವಕ್ಕೆ, ದೈವ ನರ್ತಕರಿಗೆ, ದೈವ ಕುಟುಂಬದವರಿಗೆ ಹಾಗೂ ಅಪ್ಪು ಅವರಿಗೆ ಡೆಡಿಕೇಟ್ ಮಾಡುತ್ತೇನೆ ಎಂದು ಹೇಳಿದ್ದೆ. ದೈವದ ಶಕ್ತಿಯಿಂದಲೇ ಕಾಂತಾರ ಈ ಮಟ್ಟಿಗೆ ಬಂದಿದೆ ಎನ್ನುವ ನಂಬಿಕೆ ನನ್ನದಾಗಿದೆ. ಆದರೆ ಈಗ ದೈವದ ನಂಬಿಕೆಯನ್ನು ಪ್ರಶ್ನಿಸುವ ಕೆಲಸ ಕೂಡ ಆಗುತ್ತಿದೆ. ಇದು ಒಳ್ಳೆಯದಲ್ಲ. ದೈವಕ್ಕಿಂತ ನಾವು ದೊಡ್ಡವರಲ್ಲ. ಎಲ್ಲವೂ ದೈವ ನೋಡಿಕೊಳ್ಳುತ್ತದೆ. ಆಚರಣೆಯ ಘನತೆಗೆ ಯಾವುದೇ ಧಕ್ಕೆ ಬರದಂತೆ ಸಿನಿಮಾ ಮಾಡಿಕೊಂಡು ಬಂದಿದ್ದೇವೆ. ಮುಂದೆ ಕೂಡ ಸಮಾಜಮುಖಿ ಕಾರ್ಯಗಳನ್ನು ಮಾಡಲು ಬದ್ಧರಾಗಿದ್ದೇವೆʼʼ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ಬರಲಿದೆಯಾ ಕಾಂತಾರ ಭಾಗ -2
ಕಾಂತಾರ ತಂಡಕ್ಕೆ ಈ ಸಿನಿಮಾ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಈ ಮಟ್ಟದಲ್ಲಿ ಗೆಲ್ಲುತ್ತದೆ ಎಂದು ಎಣಿಸಿರಲಿಲ್ಲ. ತಂಡಕ್ಕೆ ಕಾಂತಾರ ಭಾಗ -2 ಮಾಡುವ ಯೋಚನೆ ಇದೆ. ರಿಷಬ್‌ ಅವರು ಕಾಂತಾರ-2ಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರಿಷಬ್‌ ಶೆಟ್ಟಿ ಸ್ಪಷ್ಟನೆ ನೀಡಬೇಕಿದೆ. ಕಾಂತಾರ ಬಹು ಭಾಷೆಯಲ್ಲಿ ರಿಲೀಸ್‌ ಆಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ.

ಇದನ್ನೂ ಓದಿ | Kantara Movie | ಕಾಂತಾರ ತುಳು ಟ್ರೈಲರ್‌ ಾಔಟ್‌: ಕಾಂತಾರ-2ಗೆ ಸಿದ್ಧತೆ ಮಾಡಿಕೊಳ್ತಿದ್ದಾರಾ ರಿಷಬ್‌ ಶೆಟ್ಟಿ?

Exit mobile version