ಬೆಂಗಳೂರು : ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂಬ ರಿಷಬ್ ಶೆಟ್ಟಿ (Kantara Movie) ಹೇಳಿಕೆಗೆ ನಟ ಚೇತನ್ ವಿರೋಧಿಸಿದ್ದರು. ಇದೀಗ ಚೇತನ ಹೇಳಿಕೆ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರರೊಂದಿಗೆ ಮಾತನಾಡಿದ ಉಪೇಂದ್ರ ʻʻನಿನ್ನೆ ಘಟನೆಯ ಬಗ್ಗೆ ನಾನು ಏನೂ ಹೇಳುವುದಿಲ್ಲ. ಈ ತರಹದ ಬೆಳವಣಿಗೆ ಅಸಹ್ಯ ಅನಿಸುತ್ತಿದೆ. ಬೆಂಕಿಗೆ ತುಪ್ಪ ಸುರಿಯುವ ಕೆಲಸ ಯಾರೂ ಮಾಡಬಾರದು. ಭೂತಾರಾಧನೆ ಅದು ಅವರವರ ವೈಯಕ್ತಿಕ ನಂಬಿಕೆ. ನಾನು ಅದೇ ಊರಿನಿಂದ ಬಂದವನು. ನನಗೂ ವಿಶೇಷವಾದ ನಂಬಿಕೆ ಇದೆ. ನನ್ನ ತಂದೆ ಇವತ್ತಿಗೂ ನಾಗಾರಾಧನೆಯನ್ನು ಮಾಡಿಕೊಂಡು ಬರುತ್ತಿದ್ದಾರೆʼʼ ಎಂದು ಹೇಳಿಕೆ ನೀಡಿದ್ದಾರೆ.
ʻʻಕಾಂತಾರ ಸಿನಿಮಾ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿ ಇದೆ. ಆದರೆ ಭೂತಕೋಲ ಹಿಂದೂ ಸಂಸ್ಕೃತಿ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಹಿಂದಿನವು. ಮೂಲನಿವಾಸಿ ಸಂಸ್ಕೃತಿಗಳನ್ನು ಸಿನಿಮಾದಲ್ಲಿ ಸತ್ಯದೊಂದಿಗೆ ಪ್ರದರ್ಶಿಸಬೇಕು ಎಂದು ನಾನು ಕೋರುತ್ತೇನೆʼʼ ಎಂದು ಚೇತನ್ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ | ಭೂತಾರಾಧನೆ ಹಿಂದು ಸಂಸ್ಕೃತಿಯ ಒಂದು ಭಾಗ, ಚೇತನ್‌ಗೆ ಸರಿಯಾಗಿ ಗೊತ್ತಿಲ್ಲ: ಕೋಟ ಶ್ರೀನಿವಾಸ ಪೂಜಾರಿ
ʼಆ ದಿನಗಳುʼ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಚೇತನ್, ನಟನೆಗಿಂತಲೂ ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಅವರು ಅಮೆರಿಕದ ಪೌರತ್ವ ಹಿನ್ನೆಲೆ ಹೊಂದಿದ್ದಾರೆ. ಈ ಹಿಂದೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಅವರ ಮೇಲೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದುದನ್ನು ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ | Kantara Movie | ರಿಷಬ್ ಶೆಟ್ಟಿಯ ನಿಜವಾದ ಹೆಸರಿಗೆ ನೆಟ್ಟಿಗರಿಂದ ಫುಲ್ ಟ್ರೋಲ್!